ಪಬ್ಲಿಕ್ ಅಲರ್ಟ್
ಮೈಸೂರು: ಸೆ.೧೫ರಂದು ಇಂಜಿನಿಯರ್ಸ್ ದಿನದ ಸರ್.ಎಂ ವಿಶ್ವೇಶ್ವರ್ಂಯು ಅವರ ಜನ್ಮದಿನ ಅಂಗವಾಗಿ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯ(ಎಂಐಟಿ) ಹಾಗೂ ಬೆಂಗಳೂರಿನ ಸಾಯಿ ಕ್ಯಾಡ್ಡ್ ಸಂಸ್ಥೆಯ ಸಹಯೋಗದೊಂದಿಗೆ ಸರ್.ಎಂ ವಿಶ್ವೇಶ್ವರಯ್ಯ ಅವರ ೮೦ ಮೀಟರ್ ಅಗಲ ೧೦೦ ಮೀಟರ್ ಉದ್ದದ ಅಳತೆಯ ಭಾವಚಿತ್ರ ನಿರ್ಮಿಸಿ, ವಿಶ್ವ ದಾಖಲೆ ನಿರ್ಮಿಸಲು ತಯಾರಿ ನಡೆಸಲಾಗುತ್ತಿದೆ ಎಂದು ಎಂಐಟಿ ಆಡಳಿತಾಧಿಕಾರಿ ಎ.ಎಂ.ಅನಿರುಧ್ದ ತಿಳಿಸಿದರು.
ನಗರದ ಪತ್ರಿಕಾ ಭವನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್.ಎಂ.ವಿಶ್ವೇಶ್ವರಯ್ಯ ಅವರ ೧೬೪ನೇ ಹುಟ್ಟುಹಬ್ಬದ ಅಂಗವಾಗಿ ೮೬,೧೧೧ ಚದರ ಅಡಿ ಬೃಹತ್ ಭಾವಚಿತ್ರ ನಿರ್ಮಿಸಿ ಅವರಿಗೆ ಗೌರವ ಸಲ್ಲಿಸಲಾಗುವುದು. ಇದೇ ಮೊದಲ ಬಾರಿಗೆ ಕಾಲೇಜಿನ ವತಿಯಿಂದ ಸಿವಿಲ್ ಇಂಜಿನಿಯರಿಂಗ್ ವಿಭಾಗ ೧೨೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಕಾಲೇಜು ಕ್ರೀಡಾಂಗಣದಲ್ಲಿ ಭಾವಚಿತ್ರ ನಿರ್ಮಾಣ ಮಾಡಲಿದ್ದೇವೆ. ಅವರೊಂದಿಗೆ ೩೫ಕ್ಕೂ ಹೆಚ್ಚಿನ ಉಪನ್ಯಾಸಕರು ಕೈ ಜೋಡಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಬೃಹತ್ ಭಾವಚಿತ್ರ ನಿರ್ಮಾಣಕ್ಕಾಗಿ ಮರಳು(ಎಂ ಸ್ಯಾಂಡ್) ೪೦ ಮಿಮೀ ಅಳತೆಯ ಜಲ್ಲಿ ಕಲ್ಲು, ನೈಲಾನ್ ದಾರ ಹಾನಿಕಾರಕವಲ್ಲದ ಬಣ್ಣ ಹಾಗೂ ಮಣ್ಣು ಬಳಸಲಾಗುವುದು. ಇದಕ್ಕಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದ್ದು, ೫ ದಿನಗಳ ಕಾಲ ಚಿತ್ರ ನಿರ್ಮಾಣ ಮಾಡಲಿದ್ದೇವೆ. ಇದಕ್ಕಾಗಿ ಕೃತಕ ಬುದ್ದಿ ಮತ್ತೆ ತಂತ್ರಜ್ಞಾನ ಹಾಗೂ ಡ್ರೋನ್ ಕ್ಯಾಮರ ಸ್ಕ್ಯಾನಿಂಗ್ ಮೂಲಕ ಚಿತ್ರ ರಚಿಸಲಾಗುವುದು ಚಿತ್ರದ ಗುರುತಿಗಾಗಿ ಮೊಳೆಗಳನ್ನು ಬಳಸಲಾಗುವುದು. ಭಾವಚಿತ್ರ ನಿರ್ಮಾಣದಿಂದಾಗಿ ಯುವ ಇಂಜಿನಿಯರ್ ವಿದ್ಯಾರ್ಥಿಗಳೀಗೆ ಸೃಜನಶೀಲತೆ, ತಾಂತ್ರಿಕ ಕೌಶಲ್ಯ ಮತ್ತು ಸಾಮೂಹಿಕವಾಗಿ ತಂಡವಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗುತ್ತದೆ. ಸಾರ್ವಜನಿಕವಾಗಿ ಪ್ರದರ್ಶನವನ್ನು ಸೆ,೧೬ರಂದು ಏರ್ಪಡಿಸಿದ್ದು, ನಿರ್ಮಾಣ ಕಾರ್ಯವನ್ನು ವೀಕ್ಷಿಸಲು ಅವಕಾಶವಿದೆ. ಇದರಿಂದಾಗಿ ವಿಶ್ವ ದಾಖಲೆ ನಿರ್ಮಿಸಲು ಮುಂದಾಗುತಿದ್ದು, ಈಗಾಗಲೇ ಗಿನ್ನಿಸ್ ವಲ್ಡ್ ರೆಕಾರ್ಡ್ ಹಾಗೂ ಇನ್ನಿತರ ದಾಖಲೆಗಳಿಗೆ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಕ್ಯಾಡ್ಡ್ ಸಂಸ್ಥೆಯ ಮುಖ್ಯಸ್ಥ ಎಂ.ಮಂಜುನಾಥ್ ರೆಡ್ಡಿ, ಕಾಲೇಜು ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಸಿ ರಾಮಕೃಷ್ಣೇಗೌಡ, ಸಹ ಪ್ರಾಧ್ಯಾಪಕ ರವಿಕಿರಣ್ ಉಪಸ್ಥಿತರಿದ್ದರು.
