ಪಬ್ಲಿಕ್ ಅಲರ್ಟ್
ಮೈಸೂರು :ದಸರಾ ಮಹೋತ್ಸವ ಪ್ರಯುಕ್ತ ನಡೆದ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಬೆಂಗಳೂರಿನ ಆನೇಕಲ್‌ನ ಹಸು ಅತಿ ಹೆಚ್ಚು ಹಾಲು ನೀಡುವ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡಿತು. 38.150 ಲೀಟರ್ ಹಾಲು ನೀಡುವ ಮೂಲಕ ಹಸುವಿನ ಮಾಲೀಕ ಅಜಯ್ ಅವರಿಗೆ 1ಲಕ್ಷ ರೂ. ಬಹುಮಾನವನ್ನು ತಂದು ಕೊಟ್ಟಿತು.
ರೈತ ದಸರಾ ಉಪ ಸಮಿತಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ನಗರದ ಜೆ.ಕೆ. ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಸ್ಪರ್ಧೆಯಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ 15 ಹಸುಗಳು ಭಾಗವಹಿಸಿದ್ದವು. ಈ ಪೈಕಿ ಆನೆಕಲ್ ನ ಅಜಯ್ ಅವರ ಮಾಲೀಕತ್ವದ ಹಸು ಬೆಳಗ್ಗೆ 21.500 ಲೀ. ಹಾಗೂ ಸಂಜೆ 16.650 ಲೀ ಹಾಲು ಸೇರಿ ಒಟ್ಟು 38.150 ಲೀ ಹಾಲು ನೀಡಿ ಮೊದಲ ಸ್ಥಾನ ಪಡೆದುಕೊಂಡಿತು. ಪಿರಿಯಾಪಟ್ಟಣ ತಾಲೂಕಿನ ಚಿಟ್ಟೇನಹಳ್ಳಿ ಗ್ರಾಮದ ಸಂಜೀವ ಅವರ ಹಸು ಬೆಳಗ್ಗೆ 20.150 ಲೀ ಹಾಗೂ ಸಂಜೆ 17 ಲೀ ನೀಡಿದ್ದು, ಒಟ್ಟು 37.150 ಲೀ ಹಾಲು ನೀಡಿ 2ನೇ ಸ್ಥಾನ ಪಡೆದು 80 ಸಾವಿರ ರೂ. ಬಹುಮಾನ ಪಡೆದುಕೊಂಡಿತು.
ಬೆಂಗಳೂರಿನ ನಾಗರಬಾವಿ ಬೆಂಚ್ಕಲ್ ಪಾಳ್ಯ ನಿವಾಸಿ ಹರ್ಷಿತ್ ಗೌಡ ಅವರ ಹಸು ಬೆಳಗ್ಗೆ 19 ಲೀ, ಸಂಜೆ 18.100 ಲೀ ನೀಡಿದ್ದು ಒಟ್ಟು 37.100 ಲೀ ಹಾಲು ನೀಡುವ ಮೂಲಕ 3ನೇ ಸ್ಥಾನ ಪಡೆದು 60 ಸಾವಿರ ರೂ. ಬಹುಮಾನ ಪಡೆದುಕೊಂಡಿತು.
ಶ್ರೀರಂಗಪಟ್ಟಣ ತಾಲೂಕಿನ ಗಂಜಾಂ ನಿವಾಸಿ ನಿಸಾಂತ್ ಶಿವರಾಮು ಅವರ ಹಸು ಬೆಳಗ್ಗೆ 17.800 ಲೀ. ಹಾಗೂ ಸಂಜೆ 19.050 ಲೀ ಸೇರಿ ಒಟ್ಟು 36.850 ಲೀ ಹಾಲು ನೀಡಿ 4ನೇ ಸ್ಥಾನ ಪಡೆದುಕೊಂಡು 40 ಸಾವಿರ ರೂ. ಪಡೆದುಕೊಂಡಿತು.
ಸಚಿವರಿಂದ ಬಹುಮಾನ ವಿತರಣೆ: ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ಅವರು ಹಾಲು ಕರೆಯುವ ಸ್ಪರ್ಧೆಯಲ್ಲಿ ವಿಜೇತರಾದ ರಾಸುಗಳ ಮಾಲೀಕರಿಗೆ ಬಹುಮಾನ ವಿತರಿಸಿದರು.
ಜತೆಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಉಳಿದ ಎಲ್ಲಾ ಹಸುಗಳ ಮಾಲೀಕರಿಗೆ ಹತ್ತು ಸಾವಿರ ಮತ್ತು ನೆನಪಿನ ಕಾಣಿಕೆ ನೀಡಿ ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ.ನಾಗರಾಜು, ಡಾ.ಪೂರ್ಣಾನಂದ, ಕರ್ನಾಟಕ ರಾಜ್ಯ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ, ಜಯದೇವ ಹೃದ್ರೋಗ ಸಂಸ್ಥೆ ಆರ್ಥಿಕ ಸಲಹೆಗಾರರ ಜೆ.ಚೈತ್ರಾ ಇದ್ದರು.
ಹಸುಗಳನ್ನು ನೋಡಲು ಮುಗಿಬಿದ್ದ ಜನತೆ: ಹಾಲು ಕರೆಯುವ ಸ್ಪರ್ಧೆಯಲ್ಲಿ 15 ರಾಸುಗಳು ಭಾಗವಹಿಸಿದ್ದು, ಬೆಳಗ್ಗೆ ಮತ್ತು ಸಂಜೆ ಗರಿಷ್ಠ ಮಟ್ಟದಲ್ಲಿ ಹಾಲು ನೀಡಿದವು ಇದನ್ನು ವೀಕ್ಷಿಸಲು ನಗರದ ವಿವಿಧ ಭಾಗಗಳಿಂದ ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿ ಕುತೂಹಲದಿಂದ ವೀಕ್ಷಿಸಿದರು. ಅಷ್ಟೇ ಅಲ್ಲದೇ, ರಾಸುಗಳ ಮಾಲೀಕರಿಂದ ಹಸು ಸಾಕಾಣಿ, ಅವುಗಳ ಪಾಲನೆ ಮತ್ತು ಮೇವಿನ ಬಗ್ಗೆ ಮಾಹಿತಿ ಪಡೆದುಕೊಂಡರು.
ಕೋಟ್
ಹಾಲು ಕರೆಯುವ ಸ್ಪರ್ಧೆಗೆ ರೈತರಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಅತಿ ಹೆಚ್ಚು ಹಾಲು ನೀಡುವ ಜಾನುವಾರು ಗುರುತಿಸಿ ಬಹುಮಾನ ನೀಡಲಾಗಿದೆ. ಇಂದಿಗೂ ಹೈನುಗಾರಿಕೆ ಬಗ್ಗೆ ಯುವ ರೈತರಲ್ಲಿ ಆಸಕ್ತಿ ಇದೆ ಎಂಬುದಕ್ಕೆ ಸ್ಪರ್ಧೆಯಲ್ಲಿ ಭಾಗವಹಿಸಿರುವವರ ಸಂಖ್ಯೆಯೇ ಸಾಕ್ಷಿಯಾಗಿದೆ. ರೈತರು ಇಲಾಖೆಯ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ.
-ಡಾ.ನಾಗರಾಜು,ಉಪ ನಿರ್ದೇಶಕ, ಪಶುಪಾಲನಾ ಇಲಾಖೆ
ಹಾಲು ಕರೆಯುವ ಸ್ಪರ್ಧೆ ಗೆದ್ದ ಆನೆಕಲ್ ನ ಅಜಯ್
38.150 ದಾಖಲೆಯ ಹಾಲು ಕರೆದ ಹಸು ಪ್ರಥಮ, ಲಕ್ಷ ಬಹುಮಾನ ವಿತರಣೆ
Leave a Comment
Leave a Comment
