ಪಬ್ಲಿಕ್ ಅಲರ್ಟ್
ಮೈಸೂರು: ದಸರೆಯ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಗೆ ದಿನಗಣನೇ ಶುರುವಾಗಿದ್ದು, ದಿನೇ ದಿನೇ ಜನಸಮೂಹ ವೀಕ್ಷಣೆ ಹೆಚ್ಚಳ ಆಗುತ್ತಿರುವ ಹಿನ್ನೆಲೆಯಲ್ಲಿ ಜನರ ನಿಯಂತ್ರಣಕ್ಕೆ ಪೊಲೀಸರು ಇನ್ನಿಲ್ಲದ ಕಸರತ್ತಿನ ಸಿದ್ಧತೆ ಕೈಗೊಂಡಿದ್ದಾರೆ.
ಹೌದು ಬೆಂಗಳೂರಿನ ಆರ್ ಸಿಬಿ ಕಲ್ತುಳಿತ ಹಾಗೂ ನಿನ್ನೆ ತಮಿಳುನಾಡಿನ ಚೆನ್ನೈ ಕಾಲ್ತುಣಿತ ಅವಘಡದಿಂದ ಎಚ್ಚೆತ್ತುಕೊಂಡಿರುವ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಜಂಬೂ ಸವಾರಿ ವೀಕ್ಷಣೆಗೆ ಇನ್ನಿಲ್ಲದ ನಿಯಂತ್ರಣ ಹೇರಲು ಮುಂದಾಗಿದ್ದಾರೆ. ಹೀಗಾಗಿ ಈಗಾಗಲೇ ಪಾಸ್ ವಿಚಾರದಲ್ಲಿ ಕಟ್ಟುನಿಟ್ಟಿನ ಕಸರತ್ತು ನಡೆಸಿದ್ದರಾದರೂ ಜನಪ್ರತಿನಿಧಿಗಳ ಒತ್ತಡ ಹೆಚ್ಚಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಪಾಸ್ ಸಂಖ್ಯೆಯನ್ನೇ ಗಣನೀಯ ಪ್ರಮಾಣದಲ್ಲಿ ಇಳಿಕೆ ಮಾಡಲು ಸ್ವತಃ ಮುಖ್ಯಮಂತ್ರಿಗಳ ತೀರ್ಮಾನಕ್ಕೆ ಬಿಟ್ಟಿದ್ದಾರೆ. ಪಾಸ್ ವಿತರಣೆ ವಿಚಾರದಲ್ಲಿ ಜಿಲ್ಲಾಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತರೇ ಅಂತಿಮ ತೀರ್ಮಾನಔನ್ನು ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದ್ದಾರೆ.
ಇನ್ನೂ ಮತ್ತೊಂದೆಡೆ ಈ ಬಾರಿ ಎರಡನೇ ಹಂತದ ಆನೆಗಳನ್ನು ಕರೆತಂದಿದ್ದು ಈಗಾಗಲೇ ಅವು ಸಹ ತಾಲೀಮಿನಲ್ಲಿ ಪಳಗಿ ಸಿದ್ಧಗೊಂಡಿವೆ. ಆದರೆ, ಆನೆಗಳು ಸೂಕ್ಷ್ಮ ಜೀವಿಗಳಾಗಿರುವ ಹಿನ್ನೆಲೆಯಲ್ಲಿ ಅವುಗಳ ನಿಯಂತ್ರಣವೂ ಸಹ ಸಾಹಸ ಮಯವಾಗಿದೆ. ಒಂದೆಡೆ ಜನರ ನಿಯಂತ್ರಣ ಮತ್ತೊಂದೆಡೆ ಪಾಸ್ ವಿತರಣೆಯ ಗೊಂದಲದಲ್ಲಿ ಪೊಲೀಸರು ಯಾವುದೇ ತೀರ್ಮಾನ ಕೈಗೊಳ್ಳಲು ಹೈರಾಣಾಗಿದ್ದಾರೆ.



ತಾಲೀಮನಲ್ಲೇ ಜನವೂ ಜನ: ಈಗಾಗಲೇ ಪೂರ್ವ ತಾಲೀಮು ಆರಂಭಗೊಂಡಿದ್ದು, ಅದಕ್ಕೆ ಸ್ಥಳೀಯರು ಕಿಕ್ಕಿರಿದು ಸೇರುತ್ತಿದ್ದು, ಅಂತಿಮ ದಿನದಿಂದ ಇದು ಮೂರು ಪಟ್ಟು ಹೆಚ್ಚಳ ಆಗುವ ಸನ್ನಿವೇಶವಿದೆ. ಅಲ್ಲದೆ, ಬರೋಬ್ಬರಿ ಐದು ತಾಸುಗಳ ಕಾಲ ಆರು ಕಿ.ಮೀ ನಡಿಗೆ ಆಗಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ಜನರು ಮೆರಣಿಗೆಯ ಆಸನ ಹಾಗೂ ಹೊರಗೆ ಜಮಾವಣೆ ಆಗುವ ಸ್ಥಿತಿ ನಿರ್ಮಾಣ ಖಂಡಿತಾ ಸಾಧ್ಯವಾಗಲಿದ್ದು, ಇದಕ್ಕಾಗಿ ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿದೆ.
ಶಿಥಿಲ ಕಟ್ಟಡಗಳ ಭಯ: ಇನ್ನೂ ಜಂಬೂ ಸವಾರಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಅರಮನೆ ಬಾಗಿಲ ಕಟ್ಟಡ, ಲ್ಯಾನ್ಸ್ ಡೌನ್ ಕಟ್ಟಡ ಹಾಗೂ ದೇವರಾಜ ಕಟ್ಟಡ, ಆಯುರ್ವೇದ ಕಟ್ಟಡ ಹೀಗೆ ೧೫ಕ್ಕೂ ಹೆಚ್ಚು ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಅದರ ಮೇಲೆ ಸಾಮೂಹಿಕವಾಗಿ ಕೂರುವುದು ನಿಲ್ಲುವುದರಿಂದ ಅನಾಹುತ ಸಂಭವಿಸುವ ಆತಂಕದ ಹಿನ್ನೆಲೆಯಲ್ಲಿ ಈಗಾಗಲೇ ಅಂತಹ ಕಟ್ಟಡಗಳ ಮೇಲೆ ಕೂರದಂತೆ ಪೊಲೀಸ್ ಇಲಾಖೆಯಿಂದ ಪ್ರಕಟಣೆ ಹೊರಡಿಸಿ ಎಚ್ಚರಿಕೆ ಸಂದೇಶ ರವಾನಿಸಲು ಮುಂದಾಗಿದ್ದಾರೆ.
ಇದರೊಟ್ಟಿಗೆ ಯಾವುದೇ ಮರದ ಮೇಲೆ ಕೂರದಂತೆ ಮುಂಜಾಗ್ರತಾ ಕ್ರಮವಹಿಸಿದ್ದು, ಅಂತ ವ್ಯಕ್ತಿಗಳ ಮೇಲೂ ಪ್ರಕರಣ ದಾಖಲಿಸಲು ಹಾಗೂ ಅದನ್ನು ತಡೆಯುವ ನಿಟ್ಟಿನಲ್ಲಿ ವಿಶೇಷ ಪೊಲೀಸ್ ತಂಡ ರಚಿಸಿಕೊಂಡಿದ್ದಾರೆ. ಅದೇನೆ ಇರಲಿ ಈ ಬಾರಿ ಬೆಂಗಳೂರು ಹಾಗೂ ಚೆನ್ನೈನ ಅನಾಹುತ ಪೊಲೀಸರಿಗೆ ಸುಸೂತ್ರ ಜಂಬೂ ಸವಾರಿ ನಡೆಸಲು ದೊಡ್ಡ ಸವಾಲು ತಂದೊಡ್ಡಿರುವುದು ದಿಟವಾಗಿದೆ.
ಬಾಕ್ಸ್
ಗ್ಯಾರಂಟಿ ಯೋಜನೆಯಡಿಯಲ್ಲಿ ಉಚಿತ ಬಸ್ ವ್ಯವಸ್ಥೆ ಕಲ್ಪಿಸಿರುವ ಹಿನ್ನೆಲೆಯಲ್ಲಿ ನಗರಕ್ಕೆ ಬರುವವರಲ್ಲಿ ಮಹಿಳೆಯರ ಸಂಖ್ಯೆಯಲ್ಲಿ ದುಪ್ಪಟ್ಟು ಹೆಚ್ಚಳವಾಗಿದೆ. ಮಾತ್ರವಲ್ಲದೆ ಮಹಿಳೆಯರೊಟ್ಟಿಗೆ ಮಕ್ಕಳ ಸಂಖ್ಯೆಯೂ ಹೆಚ್ಚಳ ಆಗಿರುವುದರಿಂದ ಅವರ ಆರೋಗ್ಯ ದೃಷ್ಠಿಯಿಂದ ಈ ಬಾರಿ ವಿಶೇಷವಾಗಿ ತುರ್ತು ಹೊರ ಹೋಗಲು ಕೆಲವೊಂದು ವಿಶೇಷ ಸ್ಥಳಗಳನ್ನು ಸಹ ಇಲಾಖೆ ಸಿದ್ಧ ಮಾಡಿಕೊಂಡಿದೆ. ಕಳೆದ ಬಾರಿ ಇಬ್ಬರೂ ಮಹಿಳೆಯರು ಅಸ್ವಸ್ಥರಾಗಿ ಅವರನ್ನು ಅಂಬುಲೆನ್ಸ್ ನಲ್ಲಿ ತುರ್ತಾಗಿ ಕರೆದೊಯ್ದ ಪ್ರಸಂಗದ ಬಳಿಕ ಪೊಲೀಸ್ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ಮಾತ್ರವಲ್ಲದೆ, ಸ್ಥಳೀಯ ಆಸ್ಪತ್ರೆಗಳಲ್ಲಿಯೂ ಈ ಬಗ್ಗೆ ತುರ್ತು ಸೇವೆಗೆ ಪೂರ್ವ ತಯಾರಿ ಸಿಬ್ಬಂದಿ ಇಟ್ಟುಕೊಳ್ಳುವಂತೆ ಕಟ್ಟಪ್ಪಣೆ ಮಾಡಿದೆ.
