ಪಬ್ಲಿಕ್ ಅಲರ್ಟ್
ಮೈಸೂರು: ಗ್ರಾಮಾಂತರ ಪ್ರದೇಶದ ಬಡವರು,ಮಧ್ಯಮ ವರ್ಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಕೊಡಬೇಕು.ಶಾಲೆಗಳಿಗೆ ಮೂಲ ಸೌಕರ್ಯವನ್ನು ಒದಗಿಸಿದರೆ ಹಾಜರಾತಿ ಪ್ರಮಾಣ ಹೆಚ್ಚಾಗಲಿದೆ. ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಕೊಡುವಲ್ಲಿ ಶಿಕ್ಷಕರು ಶ್ರಮಿಸಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಸಲಹೆ ನೀಡಿದರು.
ಮೈಸೂರು ತಾಲ್ಲೂಕಿನ ಮಂಡಕಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಯನ್ಸ್ ಕ್ಲಬ್ ಆಫ್ ಮೈಸೂರು ನಿಸರ್ಗ ಮತ್ತು ಮಯೂರಿ ಸಹಯೋಗದಲ್ಲಿ ಆಯೋಜಿಸಿದ್ದ ನೂತನ ಶೌಚಾಲಯ ಕಟ್ಟಡ ಹಾಗೂ ಗ್ರಂಥಾಲಯ ಕಟ್ಟಡದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಡವರ ಮಕ್ಕಳು ಶಿಕ್ಷಣ ಕಲಿಯಲು ಹೆಚ್ಚಾಗಿ ಬರುತ್ತಾರೆ. ಬಡವರು,ಹಿಂದುಳಿದ, ಶೋಷಿತರ ಮಕ್ಕಳು ಶಿಕ್ಷಣ ಕಲಿಯಬೇಕು ಎನ್ನುವ ಆಶಯದಿಂದಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಶಿಕ್ಷಣದ ಮಹತ್ವವನ್ನು ಸಾರಿದರು. ಅಂಬೇಡ್ಕರ್ ಹೇಳಿದಂತೆ ಶಿಕ್ಷಣವೇ ದೊಡ್ಡ ಆಸ್ತಿ ಎನ್ನುವುದನ್ನು ಮರೆಯಬಾರದು ಎಂದು ಸಲಹೆ ನೀಡಿದರು.
ಹಳ್ಳಿಗಳಲ್ಲಿ ಶಿಕ್ಷಣ ಕಲಿತರೆ ವಿದ್ಯಾವಂತರು, ಪ್ರತಿಭಾವಂತರು, ಉತ್ತಮ ಪ್ರಜೆಗಳಾಗಬಹುದು.ಸಮಾನತೆಯಿಂದ ಇರುವ ಜತೆಗೆ,ಅಸಮಾನತೆಯನ್ನು ನಿವಾರಿಸಿ ಸಮಾನವಾಗಿ ಇರಬಹುದಾಗಿದೆ. ಒಂದು ವೇಳೆ ಶಿಕ್ಷಣ ಸರಿಯಾಗಿ ದೊರೆಯದಿದ್ದರೆ ಸಮಸ್ಯೆಯಾಗಲಿದೆ ಎಂದರು.
ಹಳ್ಳಿಗಳ ಶಾಲೆಗಳಲ್ಲಿ ಬಡವರು,ಶ್ರೀಮಂತರು ಎನ್ನದೆ ಸಮಾನ ಶಿಕ್ಷಣ ದೊರೆಯುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣದ ಜತೆಗೆ,ಇಂಗ್ಲಿಷ್ ತರಗತಿ ನಡೆಯಲಿದೆ. ಬೇರೆ ಬೇರೆ ಸರ್ಕಾರಿ ಶಾಲೆಗಳು ಮಂಡಕಳ್ಳಿ ಶಾಲೆಯ ಕಡೆಗೆ ನೋಡುವಂತೆ ಮಾದರಿ ಶಾಲೆಯಾಗಿ ಹೊರಹೊಮ್ಮಬೇಕು ಎಂದು ನುಡಿದರು.
ಗ್ರಂಥಾಲಯಕ್ಕೆ ಬೇಕಾದ ಪುಸ್ತಕಗಳನ್ನು ಒದಗಿಸಲಾಗಿದೆ. ಮಕ್ಕಳಿಗೆ ಹೆಚ್ಚಿನ ಜ್ಞಾನ ಸಿಗುವಂತೆ ಮಾಡಬೇಕು. ಶಾಲೆಗೆ ಬೇಕಾದ ಕೊಠಡಿಗಳು,ಮೂಲ ಸೌಕರ್ಯವನ್ನು ಒದಗಿಸಲಾಗುವುದು ಎಂದರು.
ಚಾಮುಂಡೇಶ್ವರಿ ಕ್ಷೇತ್ರದ ಅನೇಕ ಗ್ರಾಮಗಳ ಹಿರಿಯ ಮತ್ತು ಪ್ರೌಢಶಾಲೆಗಳಿಗೆ ಸಿಎಸ್‌ಆರ್ ನಿಧಿ,ಲಯನ್ಸ್,ರೋಟರಿ ಸಂಸ್ಥೆಗಳ ಮೂಲಕ ಶಾಲಾ ಕೊಠಡಿ,ಗ್ರಂಥಾಲಯ,ಶೌಚಾಲಯ ಕಟ್ಟಡವನ್ನು ಒದಗಿಸಲಾಗುತ್ತಿದೆ ಎಂದರು.
ಈ ಸಂಧರ್ಭದಲ್ಲಿ ಕೆನರಾ ಬ್ಯಾಂಕ್ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕ ಕೆ.ಎನ್.ಶಾಮರಾವ್, ಕೆ.ಎಲ್.ರಾಜಶೇಖರ್, ಎನ್.ಸುಬ್ರಹ್ಮಣ್ಯ, ಎಂಡಿಡಿಎ ಅಧ್ಯಕ್ಷ ಎಸ್.ಮೂರ್ತಿ, ಜಯಕುಮಾರ್, ಜಯರಾಮು,ವೆಂಕಟೇಶ್, ಎಲ್‌ಸಿಎಂ ನಿಸರ್ಗ ಅಧ್ಯಕ್ಷ ಕುಮಾರ,ಎಲ್‌ಸಿಎಂ ಮಯೂರಿ ಅಧ್ಯಕ್ಷೆ ಸುಮಿತ್ರ ಮೂರ್ತಿ ಹಾಜರಿದ್ದರು.
ಬಡವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲಿ: ಶಾಸಕ ಜಿಟಿಡಿ
Leave a Comment
Leave a Comment
