ಪಬ್ಲಿಕ್ ಅಲರ್ಟ್
ಬೆಂಗಳೂರು: ಎರಡು ವರ್ಷಗಳ ಹಿಂದೆ ಠಾಣೆಯಿಂದಲೇ ನಾಪತ್ತೆಯಾಗಿರುವ ಪತ್ನಿಯನ್ನು ಪ್ಲೀಸ್ ಹುಡುಕಿಕೊಡಿ ಎಂದು ಪತಿ ಕೋರಿಕೆಯಾದರೆ, ಪ್ಲೀಸ್ ನನಗೆ ಅಮ್ಮಬೇಕು, ನನಗೆ ನ್ಯಾಯ ಕೊಡಿ ಎಂದು ಮಕ್ಕಳಿಬ್ಬರು ನಾಮಫಲಕ ಹಿಡಿದು ಠಾಣೆ ಎದುರು ಪ್ರತಿಭಟಿಸಿದ ವಿಶೇಷ ಸನ್ನಿವೇಶಕ್ಕೆ ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣೆ ಸಾಕ್ಷಿಯಾಗಿದೆ.
ಪತಿ ಸುರೇಶ್ ಬಾಬು ಎಂಬುವವರೇ ಎರಡು ವರ್ಷದ ಹಿಂದೆ ತನ್ನ ಪತ್ನಿಯನ್ನು ಹುಡುಕಿಕೊಡುವಂತೆ ಕೋರಿದವರಾಗಿದ್ದಾರೆ.
ಎರಡು ವರ್ಷದ ಹಿಂದೆ ನಡೆದಿದ್ದಿಷ್ಟು: ಎರಡು ವರ್ಷದ ಹಿಂದೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವಿವೇಕನಗರ ಪೊಲೀಸ್ ಠಾಣೆಗೆ ಸುರೇಶ್ ಬಾಬು ಹಾಗೂ ಪತ್ನಿ ಇಬ್ಬರೂ ಆಗಮಿಸಿದ್ದರು. ಈ ವೇಳೆ ವಿಚಾರಣೆ ನಡೆಸಿದ ಪೊಲೀಸರು ಸುರೇಶ್ ಬಾಬುಗೆ ತಮ್ಮ ಪತ್ನಿಯನ್ನು ಕಳುಹಿಸಿಕೊಡುವುದಾಗಿ ಹೇಳಿ ಆತನನ್ನು ಕಳುಹಿಸಿದ್ದರು. ಆದರೆ, ಅಂದಿನಿಂದ ಪತ್ನಿ ಕಾಣೆಯಾಗಿದ್ದಾರೆನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಪತ್ನಿಗಾಗಿ ಅನೇಕ ಬಾರಿ ಠಾಣೆಗೆ ಅಲೆದ ಪತಿ ಸುರೇಶ್ ಬಾಬುವಿನ ಮನವಿಗೆ ಪೊಲೀಸರು ಸ್ಪಂದಿಸಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮನನೊಂದ ಪತಿ ಪತ್ನಿಗಾಗಿ ಉಚ್ಚನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಪರಿಹಾರ ಹಾಗೂ ಶೀಘ್ರ ಅವರ ಪತ್ನಿ ಯನ್ನು ಪತ್ತೆ ಹಚ್ಚುವಂತೆ ಪೊಲೀಸರಿಗೆ ನ್ಯಾಯಾಲಯ ನಿರ್ದೇಶಿಸಿತ್ತು.
ಇದಾಗಿಯೂ ಪೊಲೀಸರು ತಮ್ಮ ಪತ್ನಿಯನ್ನು ಹುಡುಕಿಕೊಡದೇ ತಮಗೆ ಹಾಗೂ ತಮ್ಮ ಮಕ್ಕಳಿಗೂ ಕಿರುಕುಳ ನೀಡುತ್ತಿದ್ದಾರೆಂದು ಸುರೇಶ್ ಬಾಬು ಆರೋಪಿಸಿದ್ದಾರೆ. ಅಲ್ಲದೆ ಮಕ್ಕಳು ನನಗೆ ಅಮ್ಮ ಬೇಕು, ನಮಗೆ ನ್ಯಾಯ ಬೇಕೆಂದು ತಾಯಿಯ ಭಾವಚಿತ್ರದ ನಾಮಫಲಕ ಹಿಡಿದು ಠಾಣೆ ಎದುರೆ ಪ್ರತಿಭಟನೆಗೆ ಕುಳಿತು ಗಮನ ಸೆಳೆದಿದ್ದಾರೆ.

