ಮುಸ್ಲಿಂ ಎಂಬ ಕಾರಣಕ್ಕೆ ವಿರೋಧಿಸುತ್ತಿಲ್ಲ: ಪ್ರತಾಪಸಿಂಹ

Pratheek
1 Min Read

ಪಬ್ಲಿಕ್ ಅಲರ್ಟ್


ಮೈಸೂರು: ಸಾಹಿತಿ ಬಾನು ಮುಷ್ತಾಕ್ ಅವರು ಮುಸ್ಲಿಂ ಅಂತ ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ವಿರೋಧ ಮಾಡುತ್ತಿಲ್ಲ. ಬದಲಾಗಿ 2023ರ ಜನ ಸಾಹಿತ್ಯ ಸಮ್ಮೇಳನದಲ್ಲಿ ಭುವನೇಶ್ವರಿ ತಾಯಿಯ ಬಗ್ಗೆ ಅವರು ಆಡಿದ ಮಾತಿಗೆ ಕ್ಷಮೆ ಕೇಳಬೇಕು. ಕ್ಷಮೆ ಕೇಳಿದಲ್ಲಿ ನಾನು ಹಾಕಿರುವ ಕೇಸ್ ವಾಪಸ್ ಪಡೆಯುತ್ತೇನೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆಯನ್ನು ಹೈಕೋರ್ಟ್ನಲ್ಲಿ ಕಲಂ 26ರ ಅಡಿ ಕೇಸ್ ಹಾಕಿದ್ದೇನೆ. ಇದರಲ್ಲಿ ಹಿಂದೂ ಧಾರ್ಮಿಕ ಪೂಜಾ ವಿಧಿವಿಧಾನಗಳ ಕುರಿತು ಹಾಗೂ ಸಂಪ್ರದಾಯಗಳ ವಿರುದ್ಧ ಕಂಡು ಬಂದರೆ ಪ್ರಶ್ನೆ ಮಾಡಬಹುದು ಎಂದು ಕಲಂ 26ರಲ್ಲಿ ತಿಳಿಸಲಾಗಿದೆ. ಅದರಂತೆ ಕೇಸ್ ಹಾಕಿದ್ದೇನೆ. 2023ರಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಬಗ್ಗೆ ಬಾನು ಮುಷ್ತಾಕ್ ಮಾತನಾಡಿರುವುದಕ್ಕೆ ಕ್ಷಮೆ ಕೇಳಬೇಕು ಹಾಗೂ ದಸರಾ ಉದ್ಘಾಟನಾ ಸಂದರ್ಭದಲ್ಲಿ ಧಾರ್ಮಿಕ ಆಚರಣೆಗಳ ಬಗ್ಗೆ ಸ್ಪಷ್ಟನೆ ಕೊಡಬೇಕು. ಹಾಗಾದರೆ ಮಾತ್ರ ನಾನು ಹಾಕಿರುವ ಕೇಸ್ ವಾಪಸ್ ಪಡೆಯುತ್ತೇನೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಜಾತ್ಯತೀತತೆಯ ಪಾಠ ಬೇಡ: ಮುಸ್ಲಿಂ ಧರ್ಮದಲ್ಲಿ ಮೂರ್ತಿ ಪೂಜೆಗೆ ಅವಕಾಶವಿಲ್ಲ. ಆದರೆ, ಹಿಂದೂ ಧಾರ್ಮಿಕ ಆಚರಣೆ ಬಗ್ಗೆ ಅವರ ಹಿಂದಿನ ಮಾತುಗಳು ಅವರಿಗಿರುವ ಭಾವನೆ ವ್ಯಕ್ತಪಡಿಸುತ್ತವೆ. ಹೀಗಾಗಿ ಅವರು ಸ್ಪಷ್ಟನೆ ನೀಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನಾವು ಜಾತ್ಯತೀತತೆಯ ಪಾಠ ಕಲಿಯಬೇಕಿಲ್ಲ. ಹಿಂದೂ ಧರ್ಮದ ಬಗ್ಗೆ ಈ ನೆಲದ ಜಲ, ಕಾನೂನು ಹಾಗೂ ಸಂಸ್ಕೃತಿಯನ್ನು ಒಪ್ಪಿದವರಿಗೆ ನಾವು ಗೌರವ ಕೊಡುತ್ತೇವೆ. ಏನೂ ಕೆಲಸವಿಲ್ಲದವರು ಇದನ್ನು ಮಾಡುತ್ತಾರೆ ಎಂಬ ಡಿಸಿಎಂ ಶಿವಕುಮಾರ್ ಮಾತಿಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, 2023ರಲ್ಲಿ ಜನ ಸಾಹಿತ್ಯ ಸಮ್ಮೇಳನದಲ್ಲಿ ಬಾನು ಮುಷ್ತಾಕ್ ಮಾಡಿದ ಭಾಷಣ ನೀವು ಒಪ್ಪುತ್ತೀರಾ? ಈ ಬಗ್ಗೆ ತಮ್ಮ ಅಪ್ಪಣೆ ಕೇಳಬೇಕು ಎಂದು ಒತ್ತಾಯಿಸಿದರು.

Share This Article
Leave a Comment