ಪಬ್ಲಿಕ್ ಅಲರ್ಟ್
ಮೈಸೂರು: ಕೆ.ಎನ್ ರಾಜಣ್ಣ ಬಿಜೆಪಿಗೆ ಹೋಗಲು ಅರ್ಜಿ ಹಾಕಿಕೊಂಡಿದ್ದಾರೆ ಎಂಬ ಹೇಳಿಕೆ ನೀಡಿರುವ ಮಾಗಡಿ ಶಾಸಕ ಬಾಲಕೃಷ್ಣ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕೆಂದು ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ರಾಜ್ಯಾಧ್ಯಕ್ಷ ದೇವರಾಜ್ ಟಿ.ಕಾಟೂರು ಲೇವಡಿ ಮಾಡಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಬಾಲಕೃಷ್ಣ ಅವರು ರಾಜಕೀಯ ನೆಲೆಯನ್ನು ಕಲ್ಪಿಸಿಕೊಟ್ಟ ಬಿಜೆಪಿ, ಜೆಡಿಎಸ್ ಪಕ್ಷಕ್ಕೆ ದ್ರೋಹ ಮಾಡಿ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರ ಬೆನ್ನಿಗೆ ಚೂರಿ ಹಾಕಿ ಕಾಂಗ್ರೆಸ್ ಪಕ್ಷಕ್ಕೆ ಅರ್ಜಿ ಹಾಕಿಕೊಂಡು ಬಂದಿರುವ ಇವರಿಗೆ ಕೆ.ಎನ್. ರಾಜಣ್ಣ ಅವರ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.
ಕೆ.ಎನ್.ರಾಜಣ್ಣ ಅವರು ಮೂಲ ಕಾಂಗ್ರೆಸ್ ಪಕ್ಷದಲ್ಲಿ ಇದ್ದು, ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷವನ್ನು ಕಟ್ಟಲು ಮಾಜಿ ಪ್ರಧಾನಿಗಳಾದ ಶ್ರೀಮತಿ ಇಂದಿರಾ ಗಾಂಧಿ, ಡಿ. ದೇವರಾಜ್ ಅರಸು,ಎಸ್.ಎಂ. ಕೃಷ್ಣ, ಮಲ್ಲಿಕಾರ್ಜುನ ಖರ್ಗೆ,ದರ್ಮಸಿಂಗ್ ಅವರ ಕಾಲದಿಂದಲೂ ಪಕ್ಷಕ್ಕಾಗಿ ಹಗಲು ರಾತ್ರಿ ದುಡಿದಿರುವ ಕೆ.ಎನ್ ರಾಜಣ್ಣ ಅವರು ಬಿಜೆಪಿ ಪಕ್ಷಕ್ಕೆ ಹೋಗಲು ಅರ್ಜಿ ಹಾಕಿಕೊಂಡಿದ್ದಾರೆ ಎಂದು ಅವಿವೇಕದ ಮಾತುಗಳನ್ನು ಮಾಧ್ಯಮಗಳ ಮೂಲಕ ಹೇಳಿಕೆ ನೀಡಿ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ಸೃಷ್ಟಿ ಮಾಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರನ್ನು ಓಲೈಸುವ ಮೂಲಕ ಸ್ವತಃ ಮಂತ್ರಿ ಸ್ಥಾನಕ್ಕಾಗಿ ಅರ್ಜಿ ಹಾಕಿದ್ದಾರೆಂದು ಆರೋಪಿಸಿದರು.
ಕೆ.ಎನ್. ರಾಜಣ್ಣ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಅಥವಾ ಹೈಕಮಾಂಡ್ ವಿರುದ್ಧ ಯಾವತ್ತಾದರೂ, ಎಲ್ಲಿಯಾದರು ಮಾತನಾಡಿದ್ದಾರೆಯೇ, ಪಕ್ಷದ ಒಳಗೆ ಇದ್ದು ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷವನ್ನೆ ಒಡೆದು ಆಳುವಂತ ಕುತಂತ್ರಗಳ ವಿರುದ್ಧ ಮಾತನಾಡಿದ್ದಾರಷ್ಟೇ ಎಂದು ಸಮರ್ಥಿಸಿಕೊಂಡರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರು, ಕಟ್ಟಾ ಬೆಂಬಲಿಗರಾದ ರಾಜಣ್ಣ ಮುಂದೆ ಕೆಪಿಸಿಸಿ ಅಧ್ಯಕ್ಷರಾಗುವುದನ್ನು ತಪ್ಪಿಸಬೇಕೆಂಬ ಕಾರಣದಿಂದ ಹೈಕಮಾಂಡ್ಗೆ ತಪುö್ಪ ಮಾಹಿತಿಯನ್ನು ನೀಡಿ ಸಚಿವ ಸ್ಥಾನದಿಂದ ವಜಾ ಮಾಡಿಸಿದ್ದಾರೆ. ಸುಳ್ಳು ಅಪಪ್ರಚಾರದ ಮೂಲಕ ಸಿದ್ದರಾಮಯ್ಯ ಅವರ ಬಣವನ್ನು ಕುಗ್ಗಿಸಬಹುದು ಎಂದು ಭಾವಿಸಿಕೊಂಡಿದ್ದಾರೆಂದು ಆರೋಪಿಸಿದರು. ಮದ್ದೂರು ಶಾಸಕ ಉದಯ ಸಹ ಕೆ.ಎನ್.ರಾಜಣ್ಣ ಪಕ್ಷಕ್ಕೆ ಅನಿವಾರ್ಯ ಅಲ್ಲ ಎಂದು ಹೇಳಿದ್ದಾರೆ. ಆದರೆ, ಇವರು ಮತ್ತು ಹಿಂದೆ ಇರುವ ನಾಯಕ ಕೂಡ ಅನಿವಾರ್ಯ ಅಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕೆಂದು ತಾಕೀತು ಮಾಡಿದರು.
ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಅದನ್ನು ಅರ್ಥ ಮಾಡಿಕೊಂಡು ಶಾಸಕ ಬಾಲಕೃಷ್ಣ ಮತ್ತು ಇವರ ಹಿಂದೆ ಇರುವ ಪಟ್ಟಬದ್ಧ ಹಿತಾಸಕ್ತಿಗಳಿಗೆ ಬುದ್ದಿವಾದ ಹೇಳಿ ತೆಪ್ಪಗೆ ಇರುವ ಹಾಗೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆಂದು ಎಚ್ಚರಿಸಿದರು.
ಶಿವಕುಮಾರಸ್ವಾಮಿ, ಉದ್ಬೂರು ಎಂ.ಸೋಮಣ್ಣ, ರಮ್ಮನಹಳ್ಳಿ ಮಂಜುನಾಥ್, ಶಿವಸ್ವಾಮಿ, ಆಲನಹಳ್ಳಿ ಪ್ರಕಾಶ್ ಹಾಜರಿದ್ದರು.
