ಪಬ್ಲಿಕ್ ಅಲರ್ಟ್
ಮೈಸೂರು: ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟ ಹಾಗೂ ಮೈಸೂರು ವಿವಿ ಸಂಶೋಧಕರ ಸಂಘಗಳ ಸಂಯುಕ್ತಾಶ್ರಯದಲ್ಲಿ ಸೆ.೫ರ ಬೆಳಗ್ಗೆ ೧೦.೩೦ಕ್ಕೆ ಮೈಸೂರು ವಿವಿ ವಿಜ್ಞಾನ ಭವನದಲ್ಲಿ ನಾಗ, ಮಹಾರ್, ಹೊಲೆಯ, ಛಲವಾದಿ ಸಮುದಾಯದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಹಿನ್ನೆಲೆ ಕುರಿತ ಒಂದು ದಿನದ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಮಾಜಿ ಮೇಯರ್ ಪುರುಷೋತ್ತಮ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಜ್ಞಾನಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸುವರು, ಪಿ.ಎಂ. ನರೇಂದ್ರಸ್ವಾಮಿ ಉದ್ಘಾಟಿಸುವರು, ಎ.ಆರ್. ಕೃಷ್ಣಮೂರ್ತಿ, ಡಿ. ಚಂದ್ರಶೇಖರಯ್ಯ, ಎಚ್.ಆರ್. ಶಿವರಾಮು ಅತಿಥಿಗಳಾಗಿರಲಿದ್ದು, ತಾವು ಅಧ್ಯಕ್ಷತೆ ವಹಿಸುವುದಾಗಿ ಹೇಳಿದರು. ೧೧.೧೫ಕ್ಕೆ ನಾಗ, ಮಹಾರ್, ಹೊಲೆಯ, ಛಲವಾದಿ ಸಮುದಾಯದ ಸಾಂಸ್ಕೃತಿಕ ಹಿನ್ನೆಲೆ ಮತ್ತು ಭೀಮಾ ಕೋರೆಗಾಂವ್ ಯುದ್ದ ಕುರಿತು, ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಬೌದ್ಧ ಧರ್ಮ ಕುರಿತು, ನಂತರ ಡಾ. ಅಂಬೇಡ್ಕರ್ ರವರು ಪ್ರತಿಪಾದಿಸಿದ ಬೇರ್ಪಟ್ಟ ಸಮುದಾಯದ ಸಿದ್ಧಾಂತ ಕುರಿತ ವಿಚಾರ ಮಂಡನೆ ನಡೆಯಲಿದೆ ಎಂದರು.
ಮೈಸೂರು ವಿವಿಯ ಸಮಾಜ ಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕರೊಬ್ಬರು ಒಂದು ಕಾರ್ಯಕ್ರಮದಲ್ಲಿ ಬೌದ್ಧರು, ಮಹಾರ್, ಕೋರೆಗಾಂವ್ ಯುದ್ಧ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದು ಖಂಡನೀಯ. ಅವರ ಹೇಳಿಕೆ ಕುರಿತು ತಾವು ಎಚ್ಚರಿಕೆ ನೀಡುತ್ತಿದ್ದೇವೆ. ಈ ಕಾರ್ಯಕ್ರಮ ಯಾವುದೇ ಜಾತಿ, ಧರ್ಮ, ವರ್ಗದ ವಿರುದ್ಧವಲ್ಲ. ಎಲ್ಲರನ್ನೂ ಒಟ್ಟಿಗೇ ಕರೆದೊಯ್ಯುವ ಉದ್ದೇಶ ಹೊಂಧಿದೆ. ಎಡಗೈ, ಬಲಗೈನವರು ತಮ್ಮಲ್ಲಿನ ಭಿನ್ನಾಭಿಪ್ರಾಯ ಮರೆತು ಒಟ್ಟಿಗೇ ಸಾಗಬೇಕೆಂಬ ಸಂದೇಶ ನೀಡುತ್ತಿದೆ. ಅಂಬೇಡ್ಕರ್ ವಿರುದ್ಧ ಯಾರೇ ಮಾತನಾಡಿದರೂ ಅದರನ್ನು ಒಗ್ಗಟ್ಟಿನಿಂದ ಎದುರಿಸಬೇಕಾದ ಅಗತ್ಯವಿದೆ ಎಂದರು. ಸೋಮಯ್ಯ ಮಲೆಯೂರು, ಸಿದ್ದಸ್ವಾಮಿ, ಮಂಜುನಾತ್, ಪುಟ್ಟರಾಜು ಮೊದಲಾದವರು ಇದ್ದರು