ಬೈರಪ್ಪನಿಧನ: ಮೈಸೂರಲ್ಲಿ ನೀರವ ಮೌನ
ಜನಪ್ರತಿನಿಧಿಗಳು ಸೇರಿ ಅನೇಕರ ಸಂತಾಪ

Pratheek
3 Min Read

ಪಬ್ಲಿಕ್ ಅಲರ್ಟ್


ಮೈಸೂರು: ಹಿರಿಯ ಸಾಹಿತಿ ಎಸ್‌.ಎಲ್‌.ಬೈರಪ್ಪ ಅವರು ವಯೋ ಸಹಜ ಅನಾರೋಗ್ಯದಿಂದ ನಿಧನರಾದ ಹಿನ್ನೆಲೆಯಲ್ಲಿ ಅವರ ಮೈಸೂರಿನ ಕುವೆಂಪುನಗರದ ನಿವಾಸದಲ್ಲಿ ನೀರವ ಮೌನ ಆವರಿಸಿತು. ಜನಪ್ರತಿನಿಧಿಗಳು, ಮುಖಂಡರು ಸೇರಿ ಅನೇಕರು ಅಗಲಿದ ಸಾಹಿತಿಗಳಿಗೆ ಸಂತಾಪ ವ್ಯಕ್ತಪಡಿಸಿದರು. 
ಎಸ್‌.ಎಲ್‌.ಬೈರಪ್ಪ ಅವರು ಬೆಂಗಳೂರಿನಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಮೈಸೂರಿನ ಕುವೆಂಪುನಗರದ ಅವರ ನಿವಾಸಕ್ಕೆ ಅನೇಕರು ಆಗಮಿಸಿದರು. ಆದರೆ, ಕುಟುಂಬಸ್ಥರೆಲ್ಲಾ ಬೆಂಗಳೂರಿನಲ್ಲಿ ಇದ್ದಿದ್ದರಿಂದ ಮೈಸೂರಿನ ನಿವಾಸದಲ್ಲಿ ನೀರವ ಮೌನ ಆವರಿಸಿತು. ಈ ವೇಳೆ ಅನೇಕ ನಾಯಕರು, ಮುಖಂಡರು ಮೈಸೂರಿಗೆ ಅವರ ಶವ ತರುವ ನಿರೀಕ್ಷೆಯಲ್ಲಿದ್ದರು.
ಸಂಘಟನೆಗಳಿಂದ ಸಂತಾಪ: ನಗರದ ಚಾಮುಂಡಿಪುರಂ ವೃತ್ತದಲ್ಲಿ  ಅಪೂರ್ವ ಸ್ನೇಹ ಬಳಗ, ಜನಮನ ವೇದಿಕೆ, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕ  ಹಾಗೂ ಜೀವದಾರ ರಕ್ತ ನಿಧಿ ಕೇಂದ್ರ ವತಿಯಿಂದ ಸರಸ್ವತಿ ಸಮ್ಮಾನ್ ಪುರಸ್ಕೃತ ಡಾ.ಎಸ್.ಎಲ್.ಭೈರಪ್ಪರವರ ಭಾವಚಿತ್ರ ಹಿಡಿದು ಮೇಣದಬತ್ತಿ ಬೆಳಗಿಸಿ, ಶಾಂತಿ ಮಂತ್ರ ಜಪಿಸಿ ಸಂತಾಪ ಸೂಚಿಸಿದರು.
ಸಂತಾಪ ಸಭೆಯಲ್ಲಿ ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಮ.ವಿ.ರಾಮಪ್ರಸಾದ್, ಎಂ.ಡಿ. ಪಾರ್ಥಸಾರಥಿ, ಜೋಗಿ ಮಂಜು, ಮೂಡ ಮಾಜಿ ಸದಸ್ಯೆ ಲಕ್ಷ್ಮೀದೇವಿ, ಜಗದೀಶ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷ ಸಿ.ಎಸ್.ಚಂದ್ರಶೇಖರ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್, ರವಿಶಂಕರ್, ಸುಚೇಂದ್ರ, ಎಸ್.ಎನ್.ರಾಜೇಶ್, ಮಂಜುನಾಥ್, ನಿರಂಜನ್, ಧರ್ಮೇಂದ್ರ, ಅರವಿಂದ, ಶಿವಲಿಂಗ ಆಚಾರ್ ಹಾಗೂ ಇನ್ನಿತರರು ಹಾಜರಿದ್ದರು.

ಬಾಕ್ಸ್‌
ಜನಪ್ರಿಯತೆ ಮತ್ತು ಚಿಂತನಾಶೀಲತೆ ಎರಡನ್ನು ಕಾಯ್ದುಕೊಂಡ ಅಪೂರ್ವ ಬರಹಗಾರರಾಗಿದ್ದ ಅವರ ನಿಧನ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಭಾಷೆಯ ಗಡಿಯನ್ನು ದಾಟಿ ಗುಜರಾತಿ, ಹಿಂದಿ, ಸಂಸ್ಕೃತ, ಮಲಯಾಳಂ, ತಮಿಳು, ತೆಲಗು ಹಾಗೂ ಇಂಗ್ಲೀಷ್ ಭಾಷೆಗಳಿಗೂ ಅನುವಾದಗೊಂಡಿವೆ. ಅವರ ಕುಟುಂಬ ವರ್ಗ, ಅಭಿಮಾನಿ ಬಳಗ್ಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ.
– ಜಿ.ಟಿ.ದೇವೇಗೌಡ,ಶಾಸಕ

ಬಾಕ್ಸ್‌
ಎಸ್ ಎಲ್ ಭೈರಪ್ಪನವರ ನಿಧನಕ್ಕೆ ಶಾಸಕ ಟಿ .ಎಸ್.ಶ್ರೀವತ್ಸ ಸಂತಾಪ
ಸಾಹಿತ್ಯ ಲೋಕದ ಹಿರಿಯರ ನಿಧನದಿಂದ ಸಾಹಿತ್ಯ ಲೋಕ ಬಡವಾಗಿದೆ. ಶ್ರೇಷ್ಠ ಕಾದಂಬರಿಕಾರ, ನಿಷ್ಠುರ ವಾದಿ ಇನ್ನಿಲ್ಲ. ದೇಶಕ್ಕೆ ನಷ್ಠ ಎಂದರೆ ಅತೀಶಯೋಕ್ತಿ ಅಲ್ಲ. ಅವರು ವಾಸಿಸುತ್ತಿದ್ದ ಮನೆ ನನ್ನ ಕ್ಷೇತ್ರ ದಲ್ಲಿತ್ತು. ಶಾಸಕನಾಗಿ ಆಯ್ಕೆಯಾದ ನಂತರ ಮೂರು ಬಾರಿ ಅವರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದೆ ಎನ್ನುವ ಹೆಮ್ಮೆ ನನ್ನದು. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ.
– ಶ್ರೀವತ್ಸ, ಶಾಸಕ

ನನ್ನ ಮಾರ್ಗದರ್ಶಕರಾಗಿದ್ದ ಡಾ.ಎಸ್.ಎಲ್.ಭೈರಪ್ಪ ಅವರ ನಿಧನರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾಗೂ ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು  ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ವಿದ್ಯಾರ್ಥಿ ದಿನಗಳಿಂದಲೂ ಅವರ ಕಾದಂಬರಿಗಳನ್ನು ಓದಿಕೊಂಡು ಬೆಳೆದ ನನಗೆ, ನಾನೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಕಾರ್ಯಕರ್ತನಾಗಿದ್ದ ದಿನಗಳಿಂದಲೂ ಅವರ ಓಡನಾಟ, ಮಾರ್ಗದರ್ಶನವಿದ್ದುದ್ದನ್ನು ಸ್ಮರಿಸಬಹುದಾಗಿದೆ. 
-ಡಾ.ಈ.ಸಿ. ನಿಂಗರಾಜ್ ಗೌಡ, ಸಿಂಡಿಕೇಟ್ ಮಾಜಿ ಸದಸ್ಯ, ಮೈಸೂರು ವಿವಿ

ಬಾಕ್ಸ್‌
ದೇಶದ ಕಾದಂಬರಿ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ದೈತ್ಯ ಕೊಡುಗೆಯನ್ನು ಮರೆಯಲು  ಸಾಧ್ಯವಿಲ್ಲ. ವಿದ್ಯಾರ್ಥಿಯಾಗಿದ್ದಾಗಲೇ ಭೀಮಕಾಯ ಹಾಗೂ ಬೆಳಕು ಮೂಡಿತು ಎಂಬ ಶ್ರೇಷ್ಠ ಕಾದಂಬರಿಗಳನ್ನು ಬರೆದಿದ್ದ ಬೈರಪ್ಪನವರು, ನಂತರದಲ್ಲಿ ವಂಶರುಕ್ಷಾ, ದಾಟು , ಮತದಾನ, ನಾಯಿ ನೆರಳು, ಜಲಪಾತ, ಇಂತಹ ಶ್ರೇಷ್ಠ ಕಾದಂಬರಿ ರಚಿಸಿದರು. ಕೆಲವು ಲೇಖನಗಳು ಅನಗತ್ಯ ವಿವಾದ ಸೃಷ್ಟಿ ಮಾಡಿ ರಾಜಕಾರಣದ ಲೇಪನ ಕೂಡ ಅಂಟಿಕೊಂಡಿತ್ತು.  ದಕ್ಷಿಣ ಭಾರತದ ಸಾಹಿತ್ಯ ಕ್ಷೇತ್ರದ ಮೇರು ಬರವಣಿಗೆಯ ಕಾದಂಬರಿಕಾರರನ್ನು ಕಳೆದುಕೊಂಡಿದ್ದೇವೆ.
– ಡಾ.ಬಿ.ಜೆ.ವಿಜಯ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ

Share This Article
Leave a Comment