ಪಬ್ಲಿಕ್ ಅಲರ್ಟ್
ಮೈಸೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಮೈಸೂರು ತಾಲೂಕಿನ ಜಟ್ಟಿಹುಂಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಸವಿತಾ(35) ಕೊಲೆಯಾಗಿದ್ದು, ಅವರ ಪತಿ ದೇವರಾಜ್ ಕೊಲೆ ಆರೋಪಿ.
ಆಗಿದ್ದೇನು?: ಸವಿತಾ ಹಾಗೂ ದೇವರಾಜ್ 2010ರಲ್ಲಿ ಮದುವೆ ಆಗಿದ್ದರು. ದಂಪತಿಗೆ ಒಂದು ಮಗು ಇದೆ. ಕೆಲವು ತಿಂಗಳಿಂದ ಪತಿ- ಪತ್ನಿ ನಡುವೆ ಭಿನ್ನಾಬಿಪ್ರಾಯ ಶುರುವಾಗಿತ್ತು. ಇದರಿಂದ ಮನನೊಂದಿದ್ದ ಸವಿತಾ ಗಂಡನಿಂದ ದೂರಾಗಿ, ಜೀವನೋಪಾಯಕ್ಕಾಗಿ ಸಂತ ಜೋಸೆಫ್ ವೃದ್ಧಾಶ್ರಮದಲ್ಲಿ ಕೆಲಸ ಮಾಡುತ್ತಿದ್ದರು.
ನಾಲ್ಕು ತಿಂಗಳಿಂದ ಪ್ರತಿದಿನ ಮನೆಗೆ ಹಿಂದಿರುಗುವಂತೆ ದೇವರಾಜ್ ಒತ್ತಡ ಹೇರುತ್ತಿದ್ದ. ಪತಿಯೊಂದಿಗೆ ತೆರಳಲು ಸವಿತಾ ನಿರಾಕರಿಸಿದ್ದರು.


ಜಟ್ಟಿಹುಂಡಿಯ ಸಂತ ಜೋಸೆಫ್ ವೃದ್ಧಾಶ್ರಮಕ್ಕೆ ಬುಧವಾರ ಬೆಳಗ್ಗೆ ಬಂದ ದೇವರಾಜ್, ಪತ್ನಿಯನ್ನು ಮನೆಗೆ ಬರುವಂತೆ ಪೀಡಿಸಿದ್ದಾನೆ. ಆದರೆ ಸವಿತಾ ಒಪ್ಪಿಲ್ಲ. ಇದರಿಂದ ಕುಪಿತನಾದ ದೇವರಾಜ್, ಪೂರ್ವ ಯೋಜನೆಯಂತೆ ಹರಿತವಾದ ಆಯುಧದಿಂದ ಸವಿತಾ ಕುತ್ತಿಗೆಯನ್ನು ಸೀಳೆ ಬರ್ಬರವಾಗಿ ಕೊಲೆ ಮಾಡಿ ಪರಾರಿ ಆಗಿದ್ದಾನೆ.
ಸವಿತಾ ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಇಲವಾಲ ಠಾಣೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
