ಪಬ್ಲಿಕ್ ಅಲರ್ಟ್
ಮೈಸೂರು: ದೇಶದ ಭವಿಷ್ಯವನ್ನು ರಕ್ಷಣೆ ಮಾಡಿಕೊಳ್ಳಲು ಕಾರ್ಮಿಕರು, ರೈತರ ಚಳವಳಿಗಳು ಅತ್ಯವಶ್ಯ ಎಂದು ಸಿಟಿಐಯು ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಅಭಿಪ್ರಾಯಪಟ್ಟರು.
ಮೈಸೂರಿನ ಸುಬ್ಬರಾಯನ ಕೆರೆ ಮೈದಾನ (ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನ)ದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ಜಿಲ್ಲಾ ಸಮಿತಿ ಏರ್ಪಟಿಸಿದ್ದ ೧೧ನೇ ವರ್ಷದ ಜಿಲ್ಲಾ ಸಮ್ಮೇಳನದ ಕಾರ್ಮಿಕರ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಮಿಕರಿಗೆ ಮಾರಕವಾದ ಕಾನೂನುಗಳನ್ನು ಕೇಂದ್ರದ ಒತ್ತಾಯಕ್ಕೆ ಮಣಿದು ರಾಜ್ಯ ಸರ್ಕಾರಗಳು ಜಾರಿಗೆ ತಂದಿವೆ. ಯಾವುದೇ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಜಾರಿಗೊಳಿಸಿದರೆ, ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿದ್ದೇವೆ. ನಮ್ಮ ಹೋರಾಟಕ್ಕೆ ಮಣಿದು ಅಂಗನವಾಡಿ ಹಾಗೂ ಬಿಸಿಯೂಟದ ಕಾರ್ಮಿಕರಿಗೆ ಕನಿಷ್ಠ ವೇತನ ನೀಡುವ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹೊರಡಿಸಿದೆ ಎಂದರು.
ಕರ್ನಾಟಕ ರಾಜ್ಯದಲ್ಲಿ ರೈತರ ಕೃಷಿ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಂಡು ಅಗ್ಗದ ದರದಲ್ಲಿ ಕೈಗಾರಿಕೆಗಳಿಗೆ ಮಾರುವ ನಡೆ ವಿರುದ್ಧ ಹೋರಾಟವಾಗಿದೆ. ಬೆಂಗಳೂರಿನ ಚನ್ನರಾಯಪಟ್ಟಣ ಕೃಷಿ ಭೂಮಿ ಹೋರಾಟಗಳಲ್ಲಿ ಸಂಘಟನೆ ಜತೆ ಸೇರಿ, ವಿಜಯ ಸಾಧಿಸಿದೆ. ಹಾಗಾಗಿ ಇವತ್ತು ದೇಶದೊಳಗೆ, ದೇಶದ ಭವಿಷ್ಯವನ್ನು ರಕ್ಷಣೆ ಮಾಡಿಕೊಳ್ಳಬೇಕಾದರೆ ಚಳವಳಿಗಳು ಅವಶ್ಯಕವಾಗಿದೆ ಎಂದು ತಿಳಿಸಿದರು.
೨೦೨೧ರಲ್ಲಿ ಕೇಂದ್ರ ಸರ್ಕಾರವು ವೇತನ ಸಂಹಿತೆ ಕಾನೂನು ಹಾಗೂ ೨೦೨೨ರಲ್ಲಿ ಕೈಗಾರಿಕಗಳ ವಿವಾದಗಳ ಸಂಹಿತೆ, ಸುರಕ್ಷತಾ ಸಂಹಿತೆ, ಸಾಮಾಜಿಕ ರಕ್ಷಣೆ ಸಂಹಿತೆಗಳನ್ನು ಪಾರ್ಲಿಮೆಂಟ್‌ನಲ್ಲಿ ಜಾರಿಗೊಳಿಸಿದೆ. ೨೦೨೫ ಕಳೆಯುವ ಹೊತ್ತಿನಲ್ಲೂ ಇಂತಹ ಕಾರ್ಮಿಕ ವಿರೋಧಿ ಕಾನೂನುಗಳನ್ನು ದೇಶದಲ್ಲಿ ಅನುಷ್ಠಾನಕ್ಕೆ ತರಲು ಸರ್ಕಾರಗಳಿಗೆ ಸಾಧ್ಯವಾಗಿಲ್ಲ ಎಂದರೆ, ಅದಕ್ಕೆ ಸಂಘಟನೆಗಳ ಹೋರಾಟದ ಫಲ ಮತ್ತು ನಮ್ಮ ಹಕ್ಕುಗಳನ್ನು ಬಿಟ್ಟುಕೊಡದ ತೀರ್ಮಾನಗಳು ಕಾರಣ ಎಂದು ತಿಳಿಸಿದರು.
ಇವತ್ತು ಬಂಡವಾಳದಾರರು ಮಾಡುವಂತಹ ಎಲ್ಲಾ ಅಕ್ರಮಗಳನ್ನು, ಸಕ್ರಮವನ್ನಾಗಿ ಮಾಡುವ ಕೆಲಸವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡುತ್ತಿವೆ. ೨೦೨೫ರ ಬಜೆಟ್ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಂಡವಾಳದಾರರ ಪರವಾಗಿ ಕಾನೂನು ಜಾರಿಗೊಳಸಲು ಮುಂದಾಗಿದ್ದಾರೆ. ಬಂಡವಾಳದಾರರ ತಪ್ಪುಗಳಿಗೆ ವಿನಾಯಿತಿ ನೀಡುವ ಕೆಲಸ ಮಾಡಲು ಹೊರಟಿದ್ದಾರೆ. ಈಗಿರುವ ಕಾನೂನುಗಳ ಜಾರಿಗಾಗಿ ಹೋರಾಟ ನಡೆದರೆ ಅವುಗಳಿಗೆ ಕಿಮ್ಮತ್ತಿಲ್ಲದಂತಾಗಿದೆ ಎಂದು ಆಕ್ರೋಶ ಹೊರಹಾಕಿದರು.
ವಿರೋಧ ಪಕ್ಷಗಳು, ಪಂಡಿತರು ಗ್ಯಾರಂಟಿ ಯೋಜನೆಗಳನ್ನು ಟೀಕಿಸುತಿದ್ದಾರೆ. ಆದರೆ ಇವರೆಲ್ಲ ಖಾಸಗಿ ಬಂಡವಾಳ ಕಂಪೆನಿಗಳಿಗೆ, ಸರ್ಕಾರಗಳು ನೀಡುತ್ತಿರುವ ಪ್ರೋತ್ಸಾಹ ಹಣವನ್ನು ವಿರೋಧಿಸುತಿಲ್ಲ ಎಂದು ಕಿಡಿಕಾರಿದರು.
ಉದ್ಯೋಗದ ಸ್ಥಳಗಳಲ್ಲಿ ಮಹಿಳೆಯರಿಗೆ ಮುಟ್ಟಿನ ರಜೆ ಹಾಗೂ ವೇತನಕ್ಕಾಗಿ ಹಲವು ವರ್ಷಗಳಿಂದ ಹೋರಾಟಗಳು ನಡೆಸಲಾಗಿದ್ದು, ಇತ್ತೀಚೆಗೆ ಸರ್ಕಾರ ನೀತಿಯನ್ನು ಮಂತ್ರಿ ಮಂಡಲದಲ್ಲಿ ಅನುಮೋದನೆಗೆ ತರಲಾಗಿದೆ. ಆದರೆ ಅದನ್ನು ಕಡ್ಡಾಯವಾಗಿ ಕಾನೂನು ಜಾರಿಗೊಳಿಸಲೆಬೇಕು. ಇದರಿಂದ ಮಹಿಳೆಯರಿಗೆ ಉದ್ಯೋಗ ನೀಡಲು ಹಿಂದೇಟಾಕುವ ಸಮಸ್ಯೆಗಳು ಎದುರಾಗಲಿವೆ. ಮಹಿಳೆಯರ ನೈಸರ್ಗಿಕವಾದ ದೈಹಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಮಹಿಳೆಯರನ್ನು ಸಬಲೀಕರಣ ಮಾಡುವ, ಸುರಕ್ಷತೆ ನೀಡುವ ಕೆಲಸವಾಗಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಪ್ರದಾನ ಕಾರ್ಯದರ್ಶಿ ಎಚ್.ಎಸ್ ಸುನಂದಾ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ವಿಕ್ರಾಂತ್ ಟೈರ್‍ಸ್ ಕಾರ್ಮಿಕ ಸಂಘಟನೆ ಪ್ರದಾನ ಕಾರ್ಯದರ್ಶಿ ಚನ್ನಕೇಶವ, ಸಿಐಟಿಯು ಜಿಲ್ಲಾ ಸಮಿತಿ ಅಧ್ಯಕ್ಷ ಜಿ.ಜಯರಾಮ್, ಖಜಾಂಚಿ ಅಣ್ಣಪ್ಪ ಮತ್ತಿತರರು ಪಾಲ್ಗೊಂಡಿದ್ದರು.
ಬಾಕ್ಸ್
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ರಾಜ್ಯ ಸಮ್ಮೇಳನ ಹಾಸನದಲ್ಲಿ ನ.೧೩ ರಿಂದ ೧೫ ರವೆರೆಗೂ ನಡೆಯಲಿದೆ. ಅಖಿಲ ಭಾರತ ಸಮ್ಮೇಳನ ಡಿ.೩೧ ರಿಂದ ೨೦೨೬ ಜ.೬ ರವರೆಗೆ ಆಂಧ್ರ ಪ್ರದೇಶದ ವಿಶಾಕಪಟ್ಟಣಂನಲ್ಲಿ ನಡೆಯಲಿದೆ.
ಕೇಂದ್ರ ಒತ್ತಡಕ್ಕೆ ಮಣಿದು ಕಾರ್ಮಿಕರಿಗೆ ಮಾರಕವಾದ ಕಾನೂನು ಜಾರಿ
Leave a Comment
Leave a Comment
