ಪಬ್ಲಿಕ್ ಅಲರ್ಟ್
ಮೈಸೂರು: ಹಿರಿಯ ಸಾಹಿತಿ ಹಾಗೂ ಖ್ಯಾತ ಕಾದಂಬರಿಕಾರ ಎಸ್. ಎಲ್. ಭೈರಪ್ಪ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ಚಾಮುಂಡಿ ಬೆಟ್ಟದ ರುದ್ರ ಭೂಮಿಯಲ್ಲಿ ಬ್ರಾಹ್ಮಣ ಸಂಪ್ರದಾಯದ ಪ್ರಕಾರ ವಿಧಿ ವಿಧಾನಗಳಂತೆ ಅವರ ಹಿರಿಯ ಮಗ ರವಿಶಂಕರ್ ನೆರವೇರಿಸಿದರು. ಈ ಸಂದರ್ಭದಲ್ಲಿ ಕಿರಿಯ ಮಗ ಉದಯಶಂಕರ್ ಇದ್ದರು.
ಬುಧವಾರ ನಿಧನರಾದ ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪ (94) ಅವರ ಅಂತ್ಯಕ್ರಿಯೆಯನ್ನು ಶುಕ್ರವಾರ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ರುದ್ರ ಭೂಮಿಯಲ್ಲಿ ಸರ್ಕಾರದ ಸಕಲ ಗೌರವದೊಂದಿಗೆ ನೆರವೇರಿಸಲಾಯಿತು. ಈ ಸಂರ್ಭದಲ್ಲಿ ಭೈರಪ್ಪ ಅವರ ಹಿರಿಯ ಮಗ ರವಿಶಂಕರ್, ಕಿರಿಯ ಮಗ ಉದಯಶಂಕರ್ ಹಾಗೂ ಲೇಖಕಿ ಸಹನಾ ವಿಜಯಕುಮಾರ ಇದ್ದರು.
ಭೈರಪ್ಪರ ಮನೆಯಲ್ಲಿ ಅಂತಿಮ ದರ್ಶನ ವ್ಯವಸ್ಥೆ: ನಿನ್ನೆ ಗುರುವಾರ ಬೆಂಗಳೂರಿನಿಂದ ಮೈಸೂರಿಗೆ ತರಲಾಗಿದ್ದ ಎಸ್.ಎಲ್. ಭೈರಪ್ಪ ಅವರ ಪಾರ್ಥಿವ ಶರೀರವನ್ನು ಮೈಸೂರಿನ ಕಲಾಮಂದಿರದ ಆವರಣದಲ್ಲಿ ಇಡಲಾಗಿತ್ತು. ಅಲ್ಲಿ ಗಣ್ಯರಾದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಹೆಚ್.ಸಿ. ಮಹದೇವಪ್ಪ ಸೇರಿ ಹಲವರು ಅಂತಿಮ ದರ್ಶನ ಪಡೆದಿದ್ದರು. ಬಳಿಕ ಸಂಜೆ ಪಾರ್ಥಿವ ಶರೀರವನ್ನು ಜೆಎಸ್ಎಸ್ ಆಸ್ಪತ್ರೆಯಲ್ಲಿ ಇಡಲಾಗಿತ್ತು. ಇಂದು ಬೆಳಗ್ಗೆ ಭೈರಪ್ಪ ಅವರ ಪಾರ್ಥಿವ ಶರೀರವನ್ನು ಅವರ ಕುವೆಂಪುನಗರದ ಮನೆಗೆ ತಂದು ಅಭಿಮಾನಿಗಳು ಹಾಗೂ ನೆರೆ ಹೊರೆಯವರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಮನೆಯಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ಪೂರೈಸಿ ನಂತರ ಚಾಮುಂಡಿ ಬೆಟ್ಟದ ಬಳಿಯ ಚಿತಾಗಾರಕ್ಕೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲಾಯಿತು.





ಸರ್ಕಾರಿ ಗೌರವ ಸಮರ್ಪಣೆ: ಚಾಮುಂಡಿ ಬೆಟ್ಟದ ಶವಾಗಾರದ ಆವರಣದಲ್ಲಿ ಎಸ್.ಎಲ್. ಭೈರಪ್ಪನವರ ಪಾರ್ಥಿವ ಶರೀರವನ್ನು ಇಟ್ಟು ಅಲ್ಲಿ ರಾಷ್ಟ್ರಗೀತೆಯೊಂದಿಗೆ ರಾಷ್ಟ್ರ ಧ್ವಜವನ್ನು ಹೊದಿಸಿ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ 3 ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು. ಬಳಿಕ ಗಣ್ಯರಿಂದ ಗೌರವ ಸಮರ್ಪಣೆ ಆದ ನಂತರ ಅಂತ್ಯಕ್ರಿಯೆಯಲ್ಲಿ ಸಚಿವ ಹೆಚ್.ಸಿ. ಮಹದೇವಪ್ಪ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಹಾಜರಿದ್ದರು. ಸರ್ಕಾರಿ ಗೌರವದ ಬಳಿಕ ತ್ರಿವರ್ಣ ಧ್ವಜವನ್ನು ಸಚಿವ ಹೆಚ್.ಸಿ. ಮಹದೇವಪ್ಪ ಅವರು ಭೈರಪ್ಪ ಅವರ ಮಕ್ಕಳಿಗೆ ಹಸ್ತಾಂತರಿಸಿದರು.
ಬ್ರಾಹ್ಮಣ ಸಂಪ್ರದಾಯದಂತ ಅಂತ್ಯಕ್ರಿಯೆ: ಭೈರಪ್ಪ ಅವರ ಹಿರಿಯ ಮಗ ರವಿಶಂಕರ್ ತಂದೆಯ ಪಾರ್ಥಿವ ಶರೀರಕ್ಕೆ ಬ್ರಾಹ್ಮಣ ಸಂಪ್ರದಾಯದಂತೆ ವಿಧಿ ವಿಧಾನ ನಡೆಸಿ ಅಗ್ನಿ ಸ್ಪರ್ಶ ಮಾಡಿದರು. ಈ ಸಂರ್ಭದಲ್ಲಿ ಕಿರಿಯ ಪುತ್ರ ಉದಯಶಂಕರ್ ಹಾಗೂ ಅವರ ಯೋಗಕ್ಷಮೆ ನೋಡಿಕೊಳ್ಳುತ್ತಿದ್ದ ಸಹನ ವಿಜಯಕುಮಾರ ಭಾಗಿಯಾದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭಾಗಿ: ಸರಸ್ವತಿ ಪುತ್ರರಾದ ಎಸ್.ಎಲ್. ಭೈರಪ್ಪ ಅವರ ಅಂತ್ಯಕ್ರಿಯೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭಾಗವಹಿಸಿ ನಂತರ ಮಾಧ್ಯಮಗಳ ಜತೆ ಮಾತನಾಡಿದರು. “ಭೈರಪ್ಪ ಅವರು ಪೂರ್ಣ ಅಧ್ಯಯನ ಮಾಡಿ ತಮ್ಮದೇ ನಿಲುವಿನಲ್ಲಿ ಬಂದು ಕಾದಂಬರಿಯನ್ನು ನೈಜತೆಯ ರೀತಿಯಲ್ಲಿ ಬರೆಯುತ್ತಿದ್ದರು. ಅವರ ಕೃತಿಗಳು ಬೇರೆ ಬೇರೆ ಭಾಷೆಗೆ ಅನುವಾದವಾಗಿವೆ. ದೊಡ್ಡ ಮಟ್ಟದಲ್ಲಿ ಮರು ಮುದ್ರಣಗೊಂಡಿವೆ. ಭೈರಪ್ಪ ಅವರು ಎಂದೂ ಪ್ರಶಸ್ತಿಯ ಹಿಂದೆ ಹೋದವರಲ್ಲ. ಅವರಿಗೆ ಕೇಂದ್ರ ಸರ್ಕಾರ ಹಾಗೂ ನರೇಂದ್ರ ಮೋದಿಯವರ ಪರವಾಗಿ ಶ್ರದ್ಧಾಂಜಲಿ ಸಲ್ಲಿಸುತ್ತೇನೆ” ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ ನೀಡಿದರು. ಈ ವೇಳೆ ಶಾಸಕ ಶ್ರೀವತ್ಸ, ಮಾಜಿ ಸಂಸದ ಪ್ರತಾಪಸಿಂಹ, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಸೇರಿ ಅನೇಕರಿದ್ದರು.
