ತಾಲೀಮಿನಲ್ಲಿ ಸೈ ಎನಿಸಿಕೊಂಡ ಗಜಪಡೆ  

Pratheek
2 Min Read

ಪಬ್ಲಿಕ್ ಅಲರ್ಟ್


ಮೈಸೂರು: ದಸರಾ ಜಂಬೂ ಸವಾರಿ ದಿನ ನಡೆಯುವ ಸಾಂಪ್ರದಾಯಿಕ ಕುಶಾಲತೋಪಿಗೆ ಗಜಪಡೆ ಹಾಗೂ ಅಶ್ವದಳವನ್ನು ಸಿದ್ಧಗೊಳಿಸುವ, ಸಿಡಿಮದ್ದು ಸಿಡಿಸುವ ಎರಡನೇ ಹಂತದ ತಾಲೀಮಿನಲ್ಲಿ ಯಾವುದೇ ಗಜಪಡೆ ಹೆದರದೇ ತಾಲೀಮು ಯಶಸ್ವಿಗೊಳಿಸಿದವು.  
ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ತಾಲೀಮು ನಡೆಸಿದರು. ಅಭಿಮನ್ಯು ನೇತೃತ್ವದ 14 ಆನೆಗಳು ಹಾಗೂ ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ 30 ಅಶ್ವಗಳು ಎರಡನೇ ಹಂತದ ಸಿಡಿಮದ್ದು ತಾಲೀಮಿನಲ್ಲಿ ಭಾಗವಹಿಸಿದವು.
ತಾಲೀಮಿನ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ನಗರ ಸಶಸ್ತ್ರ ಪಡೆಯ ಡಿಸಿಪಿ ಸಿದ್ದನಗೌಡ ಪಾಟೀಲ್, “ಇಂದು ನಡೆದ ಎರಡನೇ ಕುಶಾಲತೋಪು ತಾಲೀಮಿನಲ್ಲಿ ಪೊಲೀಸ್ ಇಲಾಖೆಯಿಂದ 30 ಕುದುರೆಗಳು ಭಾಗಿಯಾಗಿದ್ದವು. ಸಂಬಂಧ ಪಟ್ಟ ಮುಂಜಾಗ್ರತಾ ಕ್ರಮವಹಿಸಿಯೇ ಕುಶಾಲತೋಪು ನಡೆಸಲಾಗುತ್ತದೆ. ಸಿಡಿಮದ್ದನ್ನು ಬಿಸಿಲಲ್ಲಿ ಸ್ವಲ್ಪ ಒಣಗಿಸಿ ತಯಾರು ಮಾಡಿದಾಗ ಅದರ ಸ್ಫೋಟಕ ಸಾಮರ್ಥ್ಯ ಹೆಚ್ಚಾಗಿ ಈ ಸಲ ಸ್ವಲ್ಪ ಜಾಸ್ತಿ ಶಬ್ದ ಬಂದಿದೆ. ಅಂತಿಮ ತಾಲೀಮಿನಲ್ಲಿ ಸಿಡಿಮದ್ದಿನ ಪ್ರಮಾಣವನ್ನು ಸ್ವಲ್ಪ ಹೆಚ್ಚಿಸುತ್ತೇವೆ” ಎಂದು ಹೇಳಿದರು.

ಡಿಸಿಎಫ್ ಪ್ರಭುಗೌಡ ಮಾತನಾಡಿ, “ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ತಾಲೀಮು ನಡೆಸಿದ್ದು, ಪೊಲೀಸ್ ಇಲಾಖೆಯಿಂದ ಕುದುರೆಗಳು ಮತ್ತು ಅರಣ್ಯ ಇಲಾಖೆಯಿಂದ ಆನೆಗಳು ಭಾಗಿಯಾಗಿದ್ದವು. ತಾಲೀಮಿನ ಸಮಯದಲ್ಲಿ ಯಾವುದೇ ಕುದುರೆ ಮತ್ತು ಆನೆ ಸ್ವಲ್ಪವೂ ಹೆದರಲಿಲ್ಲ. ಎಲ್ಲವೂ ತಾಲೀಮಿಗೆ ಸ್ಪಂದಿಸುತ್ತಿವೆ. ಈ ದಸರಾ ಯಶಸ್ವಿಯಾಗುತ್ತದೆ ಎಂಬುದು ನಮ್ಮ ನಂಬಿಕೆ. ಕಳೆದ ಬಾರಿ ಶ್ರೀಕಂಠ ಮತ್ತು ಹೇಮಾವತಿ ಶಬ್ದಕ್ಕೆ ಹಿಂದೆ ತಿರುಗಿ ನಿಂತಿದ್ದರು. ಈ ಬಾರಿ ಹಾಗೇನೂ ಮಾಡಲಿಲ್ಲ. ಇನ್ನೊಂದು ತಾಲೀಮು 23ರಂದು ನಿಗದಿಯಾಗಿದೆ” ಎಂದು ತಿಳಿಸಿದರು.
ಮುಖ್ಯ ಅರಣ್ಯಾಧಿಕಾರಿ ರವಿಶಂಕರ್ ಮಾತನಾಡಿ, ಇದು ದಸರಾ ಆನೆಗಳು ಹಾಗೂ ಅಶ್ವದಳಕ್ಕೆ ಎರಡನೇ ತಾಲೀಮು. ಆನೆಗಳು ಯಾವುದೇ ರೀತಿಯಲ್ಲಿ ವಿಚಲಿತವಾಗಿಲ್ಲ. ಜಂಬೂ ಸವಾರಿ ದಿನಕ್ಕೆ ಇದು ಪೂರ್ವ ತಯಾರಿ. ತಾಲೀಮು ವೇಳೆ ಆನೆಗಳು ಉತ್ತಮವಾಗಿ ಪ್ರತಿಕ್ರಿಯಿಸಿವೆ. ಡಿಸಿಎಫ್ ಪ್ರಭುಗೌಡ ಅವರ ನೇರ ಉಸ್ತುವಾರಿಯಲ್ಲಿ ಆನೆ ಮಾವುತರು ಹಾಗೂ ಕಾವಾಡಿಗಳು ತುಂಬ ಚೆನ್ನಾಗಿ ನೋಡಿಕೊಳ್ಳುತ್ತಿರುವುದರಿಂದ ಆನೆಗಳು ಒಳ್ಳೆ ರೀತಿಯಲ್ಲಿ ಸ್ಪಂದಿಸುತ್ತಿವೆ” ಎಂದು ಹೇಳಿದರು.
ಹಿನ್ನಲೆ: ಸಾಮಾನ್ಯವಾಗಿ ಹಿಂದಿನ ಕಾಲದಲ್ಲಿ ರಾಜವಂಶಸ್ಥರು ವಿಜಯದಶಮಿ ಆಚರಣೆಯ ಸಂದರ್ಭದಲ್ಲಿ ವಿಜಯದ ಸಂಕೇತವಾಗಿ ಯುದ್ಧಕ್ಕೆ ಬಳಸುವ ಫಿರಂಗಿಗಳಿಂದ ಗುಂಡನ್ನು ಆರಿಸಿ ವಿಜಯೋತ್ಸವ ಆಚರಿಸುತ್ತಿದ್ದರು. ಆ ಬಳಿಕ ಅರಮನೆಯಿಂದ ಜಂಬೂ ಸವಾರಿ ಮೆರವಣಿಗೆಯಲ್ಲಿ ರಾಜರೇ ಅಂಬಾರಿ ಮೇಲೆ ಕುಳಿತು ಜಂಬೂ ಸವಾರಿ ಮೆರವಣಿಗೆಗೆ ಹೊರಡುತ್ತಿದ್ದರು. ಆನಂತರ ರಾಜಪ್ರಭುತ್ವ ಕೊನೆಗೊಂಡು ಪ್ರಜಾಪ್ರಭುತ್ವ ಬಂದ ನಂತರ ಸರ್ಕಾರ, ಚಾಮುಂಡೇಶ್ವರಿ ತಾಯಿಯನ್ನು ಚಿನ್ನದ ಅಂಬಾರಿಯಲ್ಲಿ ಕೂರಿಸಿ ಜಂಬೂ ಸವಾರಿ ಮೆರವಣಿಗೆ ನಡೆಸಲು ಆರಂಭಿಸಿತು.
ಜಂಬೂ ಸವಾರಿಯ ದಿನ ಚಿನ್ನದ ಅಂಬಾರಿಯಲ್ಲಿ ಆಸೀನಳಾಗಿರುವ ಚಾಮುಂಡಿ ತಾಯಿಗೆ ಪುಷ್ಪಾರ್ಚನೆ ಮಾಡಲಾಗುತ್ತದೆ. ಬಳಿಕ ರಾಷ್ಟ್ರಗೀತೆ ನುಡಿಸುವ 52 ಸೆಕೆಂಡ್ಗಳಲ್ಲಿ ಅರಮನೆಯ ಹೊರಭಾಗದಲ್ಲಿ ಫಿರಂಗಿಗಳಿಂದ 3 ಸುತ್ತು 21 ಬಾರಿ ಕುಶಾಲತೋಪುಗಳನ್ನು ಹಾರಿಸುವ ಮೂಲಕ ಗೌರವ ವಂದನೆ ಸಲ್ಲಿಸಲಾಗುತ್ತದೆ. ಈ ವೇಳೆ, ಫಿರಂಗಿ ಮದ್ದುಗುಂಡಿನ ಶಬ್ದಕ್ಕೆ ಜಂಬೂ ಸವಾರಿಯ ಮೆರವಣಿಗೆಯಲ್ಲಿರುವ ಗಜಪಡೆ ಹಾಗೂ ಅಶ್ವದಳ ಬೆದರದೆ ಇರಲಿ ಎಂಬ ಕಾರಣಕ್ಕಾಗಿ ಸಿಡಿಮದ್ದು ತಾಲೀಮನ್ನು ನಡೆಸುತ್ತಾ ಬಂದಿರುವುದು ಇತಿಹಾಸ. 

Share This Article
Leave a Comment