ಪಬ್ಲಿಕ್ ಅಲರ್ಟ್
ಮೈಸೂರು: 2025ರ ಸಾಲಿನ ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯನ್ನು ಯಶಸ್ವಿಗೊಳಿಸಿರುವ ದಸರಾ ಗಜಪಡೆಯನ್ನು ಭಾವುಕವಾಗಿಯೇ ನಾಡಿನಿಂದ ಕಾಡಿಗೆ ಲಾರಿಗಳ ಮೂಲಕ ಕಳುಹಿಸಿಕೊಡಲಾಯಿತು. ಈ ವೇಳೆ ಕೈ ಬೀಸಿ ಮಾವತ, ಕಾವಾಡಿ ಮಕ್ಕಳು ಸೊಂಡಿಲೆತ್ತಿದ ಗಜಪಡೆ ಆನೆಗಳು ಮುಂದಿನ ದಸರೆಗೆ ಸಿಗೋಣ ಎನ್ನುತ್ತಲೇ ಹೊರಟ ಕ್ಷಣದ ಮೂಲಕ ದಸರೆಗೆ ತೆರೆ ಕಂಡಿತು.
ಮೈಸೂರು ಮಹೋತ್ಸವವನ್ನು ಯಶಸ್ವಿಗೊಳಿಸಲು ಕಾಡಿನಿಂದ ನಾಡಿಗೆ ಬಂದಿದ್ದ 14 ಆನೆಗಳು, ಈಗ ಮತ್ತೆ ನಾಡಿನಿಂದ ಕಾಡಿಗೆ ಪಯಣಿಸಿದವು. ಮೈಸೂರು ಅರಮನೆ ಆವರಣದ ಆನೆ ಬಿಡಾರದಲ್ಲಿ ಕಳೆದ 57 ದಿನಗಳಿಂದ ಬಿಡಾರ ಹೂಡಿದ್ದ ದಸರಾ ಆನೆಗಳು, ದಸರಾ ಜಂಬೂಸವಾರಿಯಲ್ಲಿ ತಮಗೆ ವಹಿಸಿದ್ದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಲಕ್ಷಾಂತರ ಜನರಿಂದ ಸೈ ಎನಿಸಿಕೊಂಡಿದ್ದವು.
ದಸರಾ ಆನೆಗಳು ಬಂದ ಕೆಲಸ ಮುಗಿಸಿದ್ದು, ಈಗ ವಾಪಸ್ ಹೋಗುವ ಸಮಯ, ಹೀಗಾಗಿ, ಅರಣ್ಯ ಇಲಾಖೆ ಹಾಗೂ ಮೈಸೂರು ಅರಮನೆ ಮಂಡಳಿಯಿಂದ ಭಾನುವಾರ ಆನೆಗಳಿಗೆ ಸಂಪ್ರದಾಯಬದ್ದವಾಗಿ ಪೂಜೆ ನೆರವೇರಿಸಿ ಬೀಳ್ಕೊಡುಗೆ ನೀಡಲಾಯಿತು.
14 ಆನೆಗಳು ಸಕ್ಸಸ್: ಅಂಬಾರಿ ಆನೆ ಅಭಿಮನ್ಯು, ಪ್ರಶಾಂತ, ಭೀಮ, ಮಹೇಂದ್ರ, ಧನಂಜಯ, ಕಂಜನ್, ಏಕಲವ್ಯ, ಕಾವೇರಿ ಮತ್ತು ಲಕ್ಷ್ಮಿ, ಗೋಪಿ, ಸುಗ್ರೀವ, ಶ್ರೀಕಂಠ, ರೂಪ ಮತ್ತು ಹೇಮಾವತಿ ಪ್ರತ್ಯೇಕವಾಗಿ ಬಂದಿದ್ದರು ಹೋಗುವಾಗ ಮಾತ್ರ ಎಲ್ಲವೂ ಒಟ್ಟಿಗೆ ತಮ್ಮ ತಮ್ಮ ಕ್ಯಾಂಪ್ ಗಳಿಗೆ ತೆರಳಿದವು. ಪೂಜೆ ಮುಗಿದ ಬಳಿಕ 14 ಪ್ರತ್ಯೇಕ ಲಾರಿಗಳನ್ನೇರಿ ಆನೆಗಳು ತಮ್ಮ ತಮ್ಮ ಆನೆ ಶಿಬಿರಗಳಿಗೆ ಮರಳಿದವು. ಆನೆಗಳ ಜೊತೆಯಲ್ಲಿ ಅವುಗಳ ಮಾವುತರು, ಕಾವಾಡಿಗಳು ಹಾಗೂ ಕುಟುಂಬ ಸದಸ್ಯರು ಸಹ ವಾಪಸ್ ಹೊರಟರು.
ಸಾಂಗೂ, ಸೆಲ್ಫಿ: ಗಜಪಡೆ ಕ್ಯಾಪ್ಟನ್ ಅಭಿಮನ್ಯು.., ಅಂಬಾರಿ ಅಭಿಮನ್ಯು, ಎಲ್ಲರಿ ಪ್ರೀತಿ ಅಭಿಮನ್ಯು ಎಂದು ಅಭಿಮನ್ಯು ಮಾವುತರು ಪುನೀತ್ ಪೋಟೊ ಹಿಡಿದು ಹಾಡಿ ಸಂಭ್ರಮದಿಂದಲೇ ಹೊರಟರು.
ಇನ್ನೂ ಅರಮನೆಗೆ ಆಗಮಿಸಿದ ಪ್ರವಾಸಿಗರನ್ನು ಒಮ್ಮೆಲೆ ಬಿಟ್ಟ ಹಿನ್ನೆಲೆಯಲ್ಲಿ ಎಲ್ಲರೂ ಆನೆಗಳನ್ಮು ಮುತ್ತಿ ಸೆಲ್ಪಿ ಕ್ಲಿಕಿಸಿಕೊಳ್ಳಲು ಮುಗಿಬಿದ್ದರು. ಈ ಮಧ್ಯೆ ಅಭಿಮನ್ಯುವಿನಷ್ಟೇ ಭೀಮನ ಕ್ರೇಸ್ ಹೆಚ್ಚಾಗಿ ಎಲ್ಲರೂ ಭೀಮಾ ಎಂದು ಕೂಗುತ್ತಿದ್ದರು. ಪೂಜೆ ಮುಗಿಸಿ ಅಭಿಮನ್ಯು, ಭೀಮಾ ಕೆಲವು ಆನೆಗಳು ಬಿಸಿಲ ಜಳಪಕ್ಕೆ ನೀರು ಕುಡಿದು ದಾಣಿವಾರಿಸಿಕೊಂಡ ದೃಶ್ಯಗಳು ಕಂಡು ಬಂದಿತು. ಸ್ವತಃ ಡಿಸಿಎಫ್ ಡಾ.ಪ್ರಭುಗೌಡ, ವೈದ್ಯಾಧಿಕಾರಿಗಳು ಆನೆಗಳು ಲಾರಿ ಹತ್ತಿ ಹೊರಡುವರೆಗೂ ಇದ್ದು ಅವರನ್ನು ಭೀಳ್ಕೊಟ್ಟರು.





ಬಾಕ್ಸ್
ಯಾವ ಆನೆ ಎಲ್ಲಿಗೆ?
ಸತತ 6ನೇ ಬಾರಿ ಅಂಬಾರಿ ಹೊತ್ತ ಅಭಿಮನ್ಯು, ಜನರ ಅಚ್ಚುಮೆಚ್ಚಿನ ಭೀಮ, ಶ್ರೀರಂಗಪಟ್ಟಣ ದಸರಾದಲ್ಲಿ ಅಂಬಾರಿ ಹೊತ್ತ ಮಹೇಂದ್ರ ಮತ್ತು ಅರಮನೆ ಖಾಸಗಿ ದರ್ಬಾರ್ನಲ್ಲಿ ಪಟ್ಟದ ಆನೆಯಾಗಿದ್ದ ಶ್ರೀಕಂಠ ಮತ್ತಿಗೋಡು ಆನೆ ಶಿಬಿರಕ್ಕೆ ವಾಪಸ್ ಆದವು.
ನಿಶಾನೆ ಆನೆಯಾಗಿ ಜಂಬೂಸವಾರಿ ಮೆರವಣಿಗೆ ಮುನ್ನಡೆಸಿದ ಧನಂಜಯ, ನೌಫತ್ ಆನೆಯಾಗಿ ಸಾಗಿದ ಗೋಪಿ, ಸಾಲಾನೆಯಾಗಿ ಸಾಗಿದ ಕಂಜನ್, ಪ್ರಶಾಂತ, ಸುಗ್ರೀವ, ಹೇಮಾವತಿ ಮತ್ತು ಅಂಬಾರಿ ಆನೆಗೆ ಕುಮ್ಮಿಯಾಗಿದ್ದ ಕಾವೇರಿ ಆನೆಯು ದುಬಾರೆ ಆನೆ ಶಿಬಿರಕ್ಕೆ ತೆರಳಿದವು.
ಉಳಿದಂತೆ ಮತ್ತೊಂದು ಪಟ್ಟದ ಆನೆ ಏಕಲವ್ಯ ದೊಡ್ಡಹರವೆ ಆನೆ ಶಿಬಿರಕ್ಕೆ, ಸಾಲಾನೆಯಾಗಿದ್ದ ಲಕ್ಷ್ಮಿ ಬಳ್ಳೆ ಆನೆ ಶಿಬಿರಕ್ಕೆ ಹಾಗೂ ಅಂಬಾರಿ ಆನೆಗೆ ಮತ್ತೊಂದು ಕುಮ್ಮಿ ಆನೆಯಾಗಿದ್ದ ರೂಪಾ ಭೀಮನಕಟ್ಟೆ ಆನೆ ಶಿಬಿರಕ್ಕೆ ಮರಳಿದವು.
ಬಾಕ್ಸ್
ಹೋಗಲೊಪ್ಪದ ಹೇಮಾವತಿ
14 ಆನೆಗಳ ಪೈಕಿ ಇದೇ ಮೊದಲ ಬಾರಿಗೆ ಆಗಮಿಸಿದ ಗಜಪಡೆಯ ಕಿರಿಯ ಆನೆ ಹೇಮಾವತಿ ಅರಮನೆ ಅತಿಥ್ಯಕ್ಕೆ ಮಾರು ಹೋಗಿತ್ತು. ಮಜ್ಜನ, ಅತಿಥ್ಯ ಹಾಗೂ ಅನೇಕ ಆನೆಗಳನ್ನು ಕಂಡು ಇಲ್ಲಿಂದ ಕರೆಯಲು ಲಾರಿ ಹತ್ತಿಸಲು ಪ್ರಯತ್ನಿಸಿದಾಗ ಮಕ್ಕಳಂತೆ ಹಠ ಹಿಡಿದು ಲಾರಿ ಹತ್ತಲು ಹಿಂಜರಿಯಿತು. ಹೀಗಿರುವಾಗ ಅದರ ಮಾವುತರ ಅದರ ಮನವೊಲಿಸಿ ಲಾರಿ ಹತ್ತಿಸಿದರು.
