ಸಮಾನ ಅವಕಾಶ ದೊರೆತರೆ ಮಾತ್ರ ಸಮ ಸಮಾಜ ನಿರ್ಮಾಣ: ಸಿದ್ದರಾಮಯ್ಯ

Pratheek
2 Min Read

ಪಬ್ಲಿಕ್ ಅಲರ್ಟ್


ಮೈಸೂರು,ಅ.18- ವಿದ್ಯೆ ಯಾರೊಬ್ಬರ ಸ್ವತ್ತು ಅಲ್ಲ. ಎಲ್ಲರಿಗೂ ಸಮಾನ ಅವಕಾಶಗಳು ದೊರೆತಾಗ ಮಾತ್ರ ಸಮ ಸಮಾಜದ ನಿರ್ಮಾಣ ಮಾಡಲು ಸಾದ್ಯ. ಎಲ್ಲರೂ ಶಿಕ್ಷಣ ಪಡೆಯಬೇಕು.  ಸಮಾನ ಅವಕಾಶಗಳನ್ನು ನೀಡಿ ಎಲ್ಲರಿಗೂ ಶಕ್ತಿ ನೀಡಲು ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮಾನಸಗಂಗೋತ್ರಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ವಿಶ್ವ ಜ್ಞಾನಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಜತ ಮಹೋತ್ಸವ ಹಾಗೂ ನೂತನ ಜ್ಞಾನ ದರ್ಶನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಅಂಬೇಡ್ಕರ್ ಅವರು ವಿಶ್ವ ಜ್ಞಾನಿಗಳಾಗಿದ್ದರು. ಆದ್ದರಿಂದ ವಿಶ್ವಜ್ಞಾನಿ ಅಂಬೇಡ್ಕರ್ ಸಭಾಂಗಣ ಎಂದು ನಿರ್ದಿಷ್ಟವಾಗಿ ಬರೆಯಲು ಸಲಹೆ ನೀಡಿದ್ದೇನೆ. ಸಮಾಜವನ್ನು ವೈಜ್ಞಾನಿಕವಾಗಿ ಅರ್ಥ ಮಾಡಿಕೊಂಡಿದ್ದ ವಿಶ್ವ ಜ್ಞಾನಿ ಅಂಬೇಡ್ಕರ್. ಸಮಾಜದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ಇರಲಿಲ್ಲ. ಆದ್ದರಿಂದ ಸಮಾಜದಲ್ಲಿ ಅಸಮಾನತೆ ನಿರ್ಮಾಣ ಆಯಿತು. ಅಂಬೇಡ್ಕರ್ ಅವರು ತಾವು ಕಲಿತ ವಿದ್ಯೆಯನ್ನು ಸಮಾಜದ ಒಳಿತಿಗಾಗಿ ಬಳಕೆ ಮಾಡಿದ್ದಾರೆ.  ಜನವರಿ 26, 1950 ರಂದು ಸಂವಿಧಾನ ಜಾರಿಗೆ ಬರುತ್ತದೆ. ಅಂದು ನಾವು ವೈರುಧ್ಯತೆ ಇರುವ ಸಮಾಜಕ್ಕೆ ಕಾಲು ಇಡುತ್ತೇವೆ ಎಂದು ಸಂವಿಧಾನ ಅಂಗೀಕಾರ ಸಭೆಯಲ್ಲಿ ತಿಳಿಸಿದ್ದರು. ಇಂದು ಸಹ ಸಮಾಜದಲ್ಲಿ ವೈರುಧ್ಯತೆ ಇದೆ. ಆದರೆ ಇಂದು ಸ್ವಲ್ಪ ಕಡಿಮೆ ಆಗಿದೆ. 10 ಸಂಪುಟಗಳಲ್ಲಿ ಇರುವ ಭಾರತ ಸಂವಿಧಾನವನ್ನು ಕನ್ನಡಕ್ಕೆ ತರ್ಜುಮೆ ಮಾಡಿಸಿದ್ದೇನೆ. ಎಲ್ಲರೂ ಅದನ್ನು ಓದಬೇಕು. ಅಂಬೇಡ್ಕರ್ ಅವರು ಪ್ರಪಂಚದ ಎಲ್ಲಾ ದೇಶಗಳ ಸಂವಿಧಾನವನ್ನು ಓದಿ ನಮ್ಮ ದೇಶಕ್ಕೆ ಅಗತ್ಯವಾದ ಸಂವಿಧಾನವನ್ನು ರಚನೆ ಮಾಡಿ ನೀಡಿದ್ದಾರೆ. ನಮ್ಮದು ಶ್ರೇಷ್ಠ ಸಂವಿಧಾನ. ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಅಂಬೇಡ್ಕರ್ ಹೆಜ್ಜೆ ಗುರುತುಗಳು ಸಾಕ್ಷ್ಯ ಚಿತ್ರವನ್ನು ಸಮಾಜ ಕಲ್ಯಾಣ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಬಿಡುಗಡೆ ಮಾಡಿ ಮಾತನಾಡಿ, ಮೈಸೂರು ವಿಶ್ವ ವಿದ್ಯಾಲಯ ವಿಶ್ವದ ಶ್ರೇಷ್ಠ ವಿಶ್ವ ವಿದ್ಯಾಲಯಗಳಲ್ಲಿ ಒಂದಾಗಿದೆ. ಇದರಲ್ಲಿ ದೇಶದ ಮೊದಲ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್, ರಾಷ್ಟ್ರ ಕವಿ ಕುವೆಂಪು ಅವರು ಸಹ ಅಧ್ಯಯನ ಮಾಡಿದ್ದಾರೆ ಎಂದು ತಿಳಿಸಿದರು.
ವಿಶ್ವ  ವಿದ್ಯಾನಿಲಯ ಚಿಂತನೆಗಳ ಚಿಲುಮೆ. ಕುವೆಂಪು ಅವರು ಮೈಸೂರು ವಿಶ್ವ ವಿದ್ಯಾಲಯದ ಕುಲ ಪತಿಗಳು ಆಗಿದ್ದ ಕಾಲದಲ್ಲಿ ಸಂಧರ್ಭದಲ್ಲಿ ವಿಶ್ವ ವಿದ್ಯಾಲಯಕ್ಕೆ ಅನೇಕ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪನೆ ಮಾಡಿ ಜ್ಞಾನಾರ್ಜನೆಗೆ ಹೆಚ್ಚಿನ ಒತ್ತು ನೀಡಿದರು. ವಿಶ್ವ ವಿದ್ಯಾನಿಲಯಗಳು ಸಮ ಸಮಾಜದ ನಿರ್ಮಾಣ ಮಾಡುವ ಜ್ಞಾನ ಕಣಜಗಳಾಗಿ ಬೆಳೆಯಬೇಕು. ಲಾರ್ಡ್ ಮೌಂಟ್ ಬ್ಯಾಟನ್ ಅವರು ಗಾಂಧೀಜಿಯವರನ್ನು ಕುರಿತು ನಾನು ಭಾರತದಲ್ಲಿ ಒಬ್ಬ ದೇವರನ್ನು ನೋಡಿದ್ದೇನೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ಮೈಸೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮಾತನಾಡಿ ಡಾ. ಬಿ ಆರ್ ಅಂಬೇಡ್ಕರ್ ಸಂಶೋಧನಾ ಕೇಂದ್ರವು ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಗಿ ನಂತರ ಈ ಹಂತಕ್ಕೆ ಬೆಳೆದು ನಿಂತಿದೆ. ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಮಾಜ ಕಲ್ಯಾಣ ಸಚಿವರು ಇದರ ಬೆಳವಣಿಗೆಗೆ ಅಪಾರ ಅನುದಾನವನ್ನು ನೀಡಿ ಪ್ರೋತ್ಸಾಹಿಸಿದ್ದಾರೆ ಇವರಿಗೆ ನನ್ನ ಅಭಿನಂದನೆಗಳು. ಅಂಬೇಡ್ಕರ್ ಅವರ ಚಿಂತನೆಗಳನ್ನು ವಿಶ್ವ ಮಟ್ಟದಲ್ಲಿ  ತಿಳಿಸಲು ನಾವು ಕಟಿಬದ್ಧವಾಗಿ ಕಾರ್ಯ ನಿರ್ವಹಿಸುತ್ತೇವೆ ಎಂದು ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಹಿರಿಯ ಪ್ರಾಧ್ಯಾಪಕ ಡಾ.ಜೆ.ಸೋಮಶೇಖರ್ ಮಾತನಾಡಿದರು. ಶಾಸಕ ಕೆ.ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಕೆ.ಶಿವಕುಮಾರ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್, ಮೈಸೂರು ವಿಶ್ವ ವಿದ್ಯಾನಿಲಯದ ಕುಲ ಸಚಿವೆ ಎಂ.ಕೆ.ಸವಿತಾ ಸೇರಿ ಇತರರು ಉಪಸ್ಥಿತರಿದ್ದರು.

Share This Article
Leave a Comment