ಪಬ್ಲಿಕ್ ಅಲರ್ಟ್ ನ್ಯೂಸ್:-ಕಚ್ಚಾ ತಂಬಾಕು ಮೇಲಿನ ಸುಂಕ ರದ್ದುಗೊಳಿಸಿ ಅಧಿಸೂಚನೆ: ಯದುವೀರ್
ಫೆ. 5ರಿಂದ ಹರಾಜು ಪುನರಾರಂಭವಾಗಲಿದೆ ಎಂದ ಮೈಸೂರು-ಕೊಡಗು ಸಂಸದರು
ಮೈಸೂರು, ಫೆ. 3: ತಂಬಾಕು ಬೆಳೆಗಾರರಿಗೆ ಪೂರಕವಾಗುವ ರೀತಿಯಲ್ಲಿ ಕೇಂದ್ರ ಬಿಜೆಪಿ ಸರ್ಕಾರವು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಕಚ್ಚಾ ತಂಬಾಕು ಮೇಲಿನ ಸುಂಕವನ್ನು ರದ್ದುಗೊಳಿಸಲಾಗಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಸದರು, ಈಗಾಗಲೇ ಸಲ್ಲಿಸಿದ್ದ ಮನವಿಗೆ ಹಣಕಾಸು ಸಚಿವರು ಪುರಸ್ಕರಿಸಿ, ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದರು.
ಫೆಬ್ರವರಿ 5ರಿಂದ ತಂಬಾಕು ಮಾರುಕಟ್ಟೆ ಹರಾಜು ಪುನರಾರಂಭ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ, ಉತ್ಪಾದಿತವಲ್ಲದ ತಂಬಾಕಿನ (ಕಚ್ಚಾ) ಮೇಲಿನ ಅಬಕಾರಿ ಸುಂಕವನ್ನು ರದ್ದುಗೊಳಿಸಿ ಹಣಕಾಸು ಸಚಿವರು ಗೆಜೆಟ್ ಅಧಿಸೂಚನೆ ಹೊರಡಿಸಿದ್ದಾರೆ ಎಂದರು.
ಫೆಬ್ರವರಿ 5ರಿಂದ ತಂಬಾಕು ಮಾರುಕಟ್ಟೆ ಹರಾಜು ಪುನರಾರಂಭಗೊಳ್ಳಲಿದೆ. ಇದರಿಂದ ತಂಬಾಕು ಬೆಳೆಗಾರರು ಮತ್ತು ಈ ವಲಯಕ್ಕೆ ಸಂಬಂಧಿಸಿದ ಎಲ್ಲರಿಗೂ ನೆರವಾಗಲಿದೆ ಎಂದು ಸಂಸದರು ತಿಳಿಸಿದ್ದಾರೆ.
ಕಚ್ಚಾ ತಂಬಾಕಿನ ಮೇಲಿನ ಅಬಕಾರಿ ಸುಂಕವನ್ನು ರದ್ದುಗೊಳಿಸುವ ಗೆಜೆಟ್ ಅಧಿಸೂಚನೆ ಹೊರಡಿಸಿರುವುದರಿಂದ ರೈತರು ಮತ್ತು ವ್ಯಾಪಾರಿಗಳ ದೀರ್ಘಕಾಲೀನ ಬೇಡಿಕೆ ಈಡೇರಿದಂತಾಗಿದೆ. ತಂಬಾಕು ಮಾರುಕಟ್ಟೆಗೆ ಸ್ಥಿರತೆಯನ್ನು ತರುವ ನಿರೀಕ್ಷೆಯಿದೆ ಎಂದು ಯದುವೀರ್ ಒಡೆಯರ್ ವಿವರಿಸಿದರು
ಈ ಸಕಾಲಿಕ ಕ್ರಮಗಳು ವ್ಯಾಪಾರದಲ್ಲಿ ನಿರಂತರತೆ ಒದಗಿಸುತ್ತದೆ. ರೈತರ ವಿಶ್ವಾಸವನ್ನು ಬಲಪಡಿಸುತ್ತದೆ ಮತ್ತು ಸಾವಿರಾರು ತಂಬಾಕು ಬೆಳೆಯುವ ಕುಟುಂಬಗಳ ಜೀವನೋಪಾಯಕ್ಕೆ ಆದ್ಯತೆ ನೀಡಲಿದೆ ಎಂದರು.
ರೈತರ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಕೃಷಿ ಸಮುದಾಯದ ಮೇಲೆ ಪರಿಣಾಮ ಬೀರುವ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಸದಾ ಬದ್ಧನಾಗಿದ್ದೇನೆ ಎಂದು ಸಂಸದ ಯದುವೀರ್ ಒಡೆಯರ್ ಸ್ಪಷ್ಟಪಡಿಸಿದರು.
