ಪಬ್ಲಿಕ್ ಅಲರ್ಟ್ ನ್ಯೂಸ್:-ಅಗತ್ಯವಿರುವ ರಸ್ತೆ ಅಗಲೀಕರಣ ಕಾಮಗಾರಿಗಳನ್ನು ಶೀಘ್ರವಾಗಿ ಪ್ರಾರಂಭಿಸಿ – ಹೆಚ್ ಸಿ ಮಹದೇವಪ್ಪ
ಮೈಸೂರು ಮಾರ್ಚ್ 02 (ಕರ್ನಾಟಕ ವಾರ್ತೆ) ಮೈಸೂರು ನಗರವು ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ನಗರದ ಸಂಚಾರಿ ವ್ಯವಸ್ಥೆಯನ್ನು ಸುಗಮಗೊಳಿಸಲು ರಸ್ತೆಗಳ ಅಗಲೀಕರಣ ಅತ್ಯವಶ್ಯಕವಾಗಿದ್ದು, ಅಗತ್ಯವಿರುವ ರಸ್ತೆ ಅಗಲೀಕರಣ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್ ಸಿ ಮಹದೇವಪ್ಪ ಅವರು ತಿಳಿಸಿದರು.
ಇಂದು ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಲಯ ಕಚೇರಿ 7 ಮತ್ತು 9 ರ ರಸ್ತೆ ಅಗಲೀಕರಣ ಕಾಮಗಾರಿಗಳ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಸ್ತೆ ಅಗಲೀಕರಣಕ್ಕೆ ಅಗತ್ಯ ಇರುವ ಜಾಗಕ್ಕೆ ಕುರಿತಂತೆ ಸಂಬಂಧಿಸಿದ ಇಲಾಖೆಗೆ ಪತ್ರ ಬರೆದು ಎನ್ ಒ ಸಿ ಪಡೆದು ರಸ್ತೆ ಕಾಮಗಾರಿ ಪ್ರಾರಂಭಿಸಿ. ಖಾಸಗಿ ಜಾಗ ಇದ್ದ ಪ್ರದೇಶದಲ್ಲಿ ನಿಯಮಾನುಸಾರ ಟಿ ಡಿ ಆರ್ ನೀಡಿ ಜಾಗವನ್ನು ಪಡೆದುಕೊಳ್ಳಿ.
ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶೇಕ್ ತನ್ವೀರ್ ಆಸಿಫ್ ಅವರು ಮಾತನಾಡಿ
ಅಬ್ಬಾ ರಸ್ತೆ (ಸರ್ಕಾರಿ ಅತಿಥಿ ಗೃಹದಿಂದ ಕಾಳಿಕಾಂಬ ದೇವಸ್ಥಾನದ ವರೆಗೆ), ಬೆಂಗಳೂರು ನೀಲಗಿರಿ ರಸ್ತೆ ( ಡಾ. ಬಿ ಆರ್ ಅಂಬೇಡ್ಕರ್ ವೃತ್ತದಿಂದ ಪೌಂಟೆನ್ ವೃತ್ತದವರೆಗೆ ಹಾಗೂ ಫೈವ್ ಲೈಟ್ ವೃತ್ತದಿಂದ ಸಬ್ ಅರ್ಬನ್ ಕಡೆಯ ರಸ್ತೆ), ಮಲೇ ಮಹದೇಶ್ವರ ರಸ್ತೆ ( ಗೋಪಾಲಗೌಡ ಆಸ್ಪತ್ರೆ ವೃತ್ತದಿಂದ ಬುದ್ಧ ವೃತ್ತದವರೆಗೆ), ಚಾಮುಂಡಿ ವಿಹಾರ ಸ್ಟೇಡಿಯಂ ರಸ್ತೆ ( ಎಸ್ ಪಿ ವೃತ್ತದಿಂದ ಗೋಪಾಲಗೌಡ ಆಸ್ಪತ್ರೆ ವೃತ್ತದವರೆಗೆ), ಪುಲಿಕೇಶಿ ರಸ್ತೆ ( ಡಾ. ಬಿ ಆರ್ ಅಂಬೇಡ್ಕರ್ ವೃತ್ತದಿಂದ ಅಶೋಕ ರಸ್ತೆಯವರೆಗೆ), ಹೈದರ್ ಅಲಿ ರಸ್ತೆ ( ಡಾ. ಬಿ ಆರ್ ಅಂಬೇಡ್ಕರ್ ವೃತ್ತದಿಂದ ಅಜೀಜ್ ಸೇಠ್ ಜೋಡಿ ರಸ್ತೆಯವರೆಗೆ), ಡಾ. ರಾಜ್ ಕುಮಾರ್ ರಸ್ತೆ ಗಳ ಅಗಲೀಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್, ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎಸ್ ಯುಕೇಶ್ ಕುಮಾರ್, ಕೆ ಪಿ ಎ ನಿರ್ದೇಶಕರಾದ ವಿಷ್ಣುವರ್ಧನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
