ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ವಹಿಸಿ:ಶಾಸಕ ಜಿಟಿಡಿ

latha prabhukumar
4 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ವಹಿಸಿ:ಶಾಸಕ ಜಿಟಿಡಿ

ಏಪ್ರಿಲ್ ತಿಂಗಳ ಮೊದಲನೇ ವಾರದೊಳಗೆ ಪೂರ್ಣ ಮಾಹಿತಿ ಸಲ್ಲಿಸಲು ಸೂಚನೆ * ಸರ್ಕಾರಿ ಶಾಲೆಗಳ ರಕ್ಷಣೆಗೆ ಆರ್‌ಟಿಸಿ ಮಾಡಿಸಲು ಸಲಹೆ

ಜಿಪಂ ಸಭಾಂಗಣದಲ್ಲಿ ಗ್ರಾಪಂ ಆಡಳಿತಾಧಿಕಾರಿಗಳು, ಪಿಡಿಒ ಅಧಿಕಾರಿಗಳ ಸಭೆಯಲ್ಲಿ ಭಾಗಿ

ಮೈಸೂರು: ಮುಂದಿನ ಬೇಸಿಗೆ ಕಾಲದ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕಾ ಕ್ರಮಕೈಗೊಂಡು, ಸಾರ್ವಜನಿಕರಿಂದ ದೂರುಗಳು ಬರದಂತೆ ನಿಗಾವಹಿಸಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ತಾಕೀತು ಮಾಡಿದರು. ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಮೈಸೂರು ತಾಲ್ಲೂಕಿನ ಗ್ರಾಪಂಗಳ ಆಡಳಿತಾಧಿಕಾರಿಗಳು ಮತ್ತು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಗ್ರಾಪಂಗಳಲ್ಲಿ ಸದಸ್ಯರು ಇಲ್ಲದೆ ಇರುವ ಕಾರಣ ಆಡಳಿತಾಧಿಕಾರಿಗಳು ಹಾಗೂ ಪಿಡಿಒಗಳ ಪಾತ್ರ,ಜವಾಬ್ದಾರಿ ದೊಡ್ಡದಾಗಿದೆ. ಗ್ರಾಪಂಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಒಂದು ತಿಂಗಳು ಕಳೆದಿದೆ. ಅಧಿಕಾರಿಗಳು ತಂತಮ್ಮ ವ್ಯಾಪ್ತಿಯ ಗ್ರಾಪಂನಲ್ಲಿ ಸಮಸ್ಯೆಗಳು ಬರದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳು ದಿನಕ್ಕೊಮ್ಮೆ ಭೇಟಿ ನೀಡಲು ಸಾಧ್ಯವಾಗದೆ ಇದ್ದರೂ ವಾರಕ್ಕೊಮ್ಮೆ ಭೇಟಿ ನೀಡಬೇಕು. ಪಿಡಿಒಗಳ ಜತೆಗೆ ಸಮನ್ವಯತೆ ಮಾಡಿ ಕೆಲಸ ಮಾಡಬೇಕು ಎಂದರು.ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬರಬಹುದು. ಅದಕ್ಕಾಗಿ ಒಂದು ಪ್ಲಾನ್ ಮಾಡಿಕೊಳ್ಳಬೇಕು. ನೀರಿನ ಸಮಸ್ಯೆ ಬರುವ ಗ್ರಾಮಗಳನ್ನುಗುರುತಿಸಿ ಪರ್ಯಾಯ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಹಳ್ಳಿಗಳಲ್ಲಿ ಸಮಸ್ಯೆ ಉಂಟಾಗಬಹುದು ಎಂದು ನುಡಿದರು. ಗ್ರಾಮಗಳಲ್ಲಿ ಎಷ್ಟು ಶಾಲೆಗಳಿವೆ, ಅಂಗನವಾಡಿ ಕೇಂದ್ರಗಳು,ಸ್ಮಶಾನಗಳು ಎಷ್ಟು ಇವೆ ಎಂಬುದನ್ನು ಪರಿಶೀಲಿಸಿ ಮೂಲ ಸೌಕರ್ಯಗಳನ್ನು ಗಮನಿಸಬೇಕು. ಶಾಲೆ,ಅಂಗನವಾಡಿ,ಸ್ಮಶಾನಗಳಿಗೆ ಕುಡಿಯುವ ನೀರು ಒದಗಿಸುವಂತೆ ಮಾಡಬೇಕು. ಕುಡಿಯುವ ನೀರು ಒದಗಿಸುವುದು ಮೊದಲ ಆದ್ಯತೆಯಾಗಬೇಕು ಎಂದು ಕಿವಿಮಾತು ಹೇಳಿದರು. ಶಾಲೆಗಳನ್ನು ಪಟ್ಟಿ ಮಾಡಿಕೊಂಡು ಕೆಲಸ ಮಾಡಬೇಕು. ಗ್ರಾಮಕ್ಕೆ ನೀರು ಸರಬರಾಜು ಮಾಡುವ ಪೈಪ್‌ಲೈನ್‌ಗಳಲ್ಲಿ ಕೆಲವು ಬೀದಿಗಳಿಗೆ ಸಂಪರ್ಕ ಇಲ್ಲದಿದ್ದರೆ ಜೋಡಣೆ ಮಾಡಬೇಕು. ಯಾವುದಾದರೂ ಸ್ಮಶಾನದಲ್ಲಿ ಕುಡಿಯುವ ನೀರು ಇಲ್ಲದಿದ್ದರೆ ಗಮನಿಸಬೇಕು. ಅದೇ ರೀತಿ ಅಂಗನವಾಡಿ ಕೇಂದ್ರಗಳಲ್ಲೂ ನೋಡಬೇಕು ಎಂದು ಸೂಚಿಸಿದರು.

ಕ್ರಿಯಾಯೋಜನೆ ಮಾರ್ಪಾಡು ಮಾಡಿ: ಗ್ರಾಮಗಳಲ್ಲಿ ಅಭಿವೃದ್ದಿ ಕಾಮಗಾರಿಗಳ ಜತೆಗೆ ಕುಡಿಯುವ ನೀರಿಗೆ ಮೊದಲ ಆದ್ಯತೆ ಕೊಡಬೇಕು. ಹದಿನೈದನೇ ಹಣಕಾಸು ಆಯೋಗದಲ್ಲಿ ಉಳಿದಿರುವ ಹಣ, ಬಡ್ಡಿ ಹಣ ಹಾಗೂ ತೆರಿಗೆ ಸಂಗ್ರಹದ ರೂಪದಲ್ಲಿ ಬರುವ ಮೊತ್ತವನ್ನು ಸೇರಿಸಿ ಕ್ರಿಯಾಯೋಜನೆ ತಯಾರಿಸಬೇಕು. ಒಂದು ವೇಳೆ ೨೦೨೪-೨೫ರ ಸಾಲಿನಲ್ಲಿ ರೂಪಿಸಿರುವ ಕ್ರಿಯಾಯೋಜನೆಯಲ್ಲಿ ಉಳಿದಿರುವ ಅನುದಾನಕ್ಕೆ ತಕ್ಕಂತೆ ಮಾರ್ಪಾಡು ಮಾಡಿಕೊಳ್ಳಬೇಕು ಎಂದು ನುಡಿದರು.ಗ್ರಾಮಗಳಲ್ಲಿ ಯಾವ ಸಮಸ್ಯೆಗಳು ಇವೆ, ಅಂಗನವಾಡಿ,ಶಾಲೆ,ಸ್ಮಶಾನಗಳಲ್ಲಿ ಏನೇನು ಕೆಲಸಗಳು ಆಗಬೇಕು,ಕುಡಿಯುವ ನೀರು ಇದೆಯೇ ಅಥವಾ ಇಲ್ಲವೇ,ಕೊಠಡಿಗಳು ದುರಸ್ತಿ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು. ಒಂದು ವೇಳೆ ದುರಸ್ತಿಗೆ ಬಂದಿದ್ದರೆ ಅಂತಹ ಕಟ್ಟಡಗಳ ದುರಸ್ತಿಗೆ ಕ್ರಿಯಾಯೋಜನೆಯಲ್ಲಿ ಸೇರಿಸಬೇಕು ಎಂದು ನುಡಿದರು. ಗ್ರಾಪಂಗೆ ಬರುವ ಅನುದಾನ, ತೆರಿಗೆಯಲ್ಲಿ ಬರುವ ಒಟ್ಟು ಮೊತ್ತದಲ್ಲಿ ಆಡಳಿತಾತ್ಮಕ ವೆಚ್ಚ ಕಳೆದು ಉಳಿದ ಅನುದಾನಕ್ಕೆ ಕ್ರಿಯಾಯೋಜನೆ ತಯಾರು ಮಾಡಬೇಕು. ಇದರಲ್ಲಿ ಕುಡಿಯುವ ನೀರು,ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು.ಅದಕ್ಕೆ ಬೇಕಾದರೆ ಸಣ್ಣಪುಟ್ಟ ಮಾರ್ಪಾಡುಗಳನ್ನು ಮಾಡಿಕೊಂಡು ಸಲ್ಲಿಸಿದರೆ ಅನುಮೋದನೆ ಕೊಡಿಸಲಾಗುವುದು ಎಂದು ಭರವಸೆ ನೀಡಿದರು. ಸರ್ಕಾರದಿಂದ ನೀಡುವ ಅನುದಾನ ಬಳಕೆಯಾಗಬೇಕು. ತೆರಿಗೆ ಸಂಗ್ರಹದ ಹಣವನ್ನು ಸಮರ್ಪಕವಾಗಿ ಖರ್ಚು ಮಾಡಬೇಕು. ಗ್ರಾಪಂನಲ್ಲಿ ಈಗ ಆಡತಾಧಿಕಾರಿಗಳು ಇರುವ ಕಾರಣ ಯಾವುದೇ ಒತ್ತಡ ಇರಲ್ಲ.ತಮಗೆಸಿಕ್ಕ ಅವಕಾಶವನ್ನು ಗ್ರಾಮಗಳ ಅಭಿವೃದ್ದಿಗೆ ಮೀಸಲಿಡಬೇಕು ಎಂದರು.

ಶಾಲೆಗಳಿಗೆ ಹದ್ದುಬಸ್ತು:ಸರ್ಕಾರಿ ಶಾಲೆಗಳ ಜಾಗವನ್ನು ಹದ್ದುಬಸ್ತಿನಲ್ಲಿಟ್ಟು ಸಂರಕ್ಷಣೆ ಮಾಡಲು ಆರ್‌ಟಿಸಿ ಮಾಡಿಸಿಕೊಳ್ಳಬೇಕು. ಗ್ರಾಮ ಠಾಣಾ ಜಾಗದಲ್ಲಿರುವ ಶಾಲೆಗಳನ್ನು ಹೊರತುಪಡಿಸಿ ಉಳಿದ ಶಾಲೆಗಳಿಗೆ ಸರ್ವೆ ಮಾಡಿ ಆರ್‌ಟಿಸಿಯಲ್ಲಿ ಕೂರಿಸಬೇಕು. ಕಂದಾಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳು ಒಂದೊಂದುದಿನ ಒಂದೊಂದು ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳಲ್ಲಿ ಆರ್‌ಟಿಸಿಯಲ್ಲಿ ಹೆಸರನ್ನು ನಮೂದಿಸುವ ಕೆಲಸಮಾಡಬೇಕು ಎಂದು ಹೇಳಿದರು.ಸರ್ಕಾರಿ ಶಾಲೆಗೆ ವ್ಯಕ್ತಿಯೊಬ್ಬರು ತಮ್ಮ ಜಾಗವನ್ನು ದಾನಮಾಡಿದ್ದರು. ಅವರಿಗೆ ಹತ್ತು ಲಕ್ಷ ರೂಪಾಯಿ ಕೂಡ ನೀಡಲಾಗಿತ್ತು. ಈಗ ಅವರ ಮೊಮ್ಮಗ ನಮ್ಮತಾತನ ಜಾಗವೆಂದು ಹೇಳಿ ಬಂದಿದ್ದರು. ಹಾಗಾಗಿ, ಮುಂದೆ ಅಂತಹ ವಿಚಾರಗಳಿಗೆ ಅವಕಾಶ ಕೊಡದಂತೆ ಮೊದಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಇಒಗೆ ಹೇಳಿದರು. ಗ್ರಾಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕಸ ವರ್ಗೀಕರಣ ಕೆಲಸ ಮಾಡಬೇಕು. ಕಸ ವಿಂಗಡಣೆಗೆ ಜಾಗ ಇಲ್ಲದಿದ್ದರೆ ಗುರುತಿಸಬೇಕು. ಜಾಗ ಇರುವ ಕಡೆಗಳಲ್ಲಿ ತಕ್ಷಣವೇ ಕೆಲಸ ಶುರು ಮಾಡಬೇಕು ಎಂದು ಸೂಚಿಸಿದರು.

ಏಪ್ರಿಲ್ ಮೊದಲ ವಾರದೊಳಗೆ ;ಪಟ್ಟಿ: ಗ್ರಾಪಂಗಳಲ್ಲಿ ಆಗಬೇಕಿರುವ ಕೆಲಸಗಳು ಸೇರಿದಂತೆ ಸಮಗ್ರ ಮಾಹಿತಿಯನ್ನೊಳಗೊಂಡ ಮಾಹಿತಿ ಪುಸ್ತಕವನ್ನು ಏಪ್ರಿಲ್ ಮೊದಲನೇ ವಾರದೊಳಗೆ ತಯಾರಿಸಿ ಸಲ್ಲಿಸಬೇಕು. ನಂತರ,ಮತ್ತೊಂದು ಸಭೆ ನಡೆಸಿ ಪರಿಶೀಲನೆ ನಡೆಸಲಾಗುವುದು ಎಂದರು. ಸರ್ಕಾರದ ಅನುದಾನ,ತೆರಿಗೆ ಹಣ, ಕ್ರಿಯಾಯೋಜನೆಯಲ್ಲಿ ರೂಪಿಸುವ ಕಾಮಗಾರಿಗಳು, ಯಾವ್ಯಾವ ಕಾಮಗಾರಿಗಳಿಗೆ ಮೊದಲ ಆದ್ಯತೆ, ಶಾಲೆಗಳು,ಅಂಗನವಾಡಿ,ಸ್ಮಶಾನಗಳ ಪಟ್ಟಿ ಸಮೇತ ಎಲ್ಲ ವಿವರವನ್ನು ತಯಾರಿಸಬೇಕು ಎಂದರು.

ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್ ಮಾತನಾಡಿ, ಗ್ರಾಪಂಗಳಲ್ಲಿ ಯಾವುದೇ ಸಮಸ್ಯೆ ನಿರ್ವಹಣೆ ಮಾಡಬೇಕು. ಆಡಳಿತಾಧಿಕಾರಿಗಳಿಗೆ ಅನುಭವವಿದೆ. ಪಿಡಿಒಗಳಿಗೂ ಗ್ರಾಪಂ ವ್ಯಾಪ್ತಿಯಲ್ಲಿ ಎಲ್ಲಾ ವಿಚಾರಗಳು ಗೊತ್ತಿದೆ.ಆದ್ದರಿಂದ ಎಲ್ಲ ಅಧಿಕಾರಿಗಳು ವಾಸ್ತವತೆಯನ್ನು ಅರಿತು ಕೆಲಸ ಮಾಡಿದರೆ ಉತ್ತಮ ಎಂದರು. ತಾಪಂ ಇಒ ಕೃಷ್ಣ, ಆಡಳಿತಾಧಿಕಾರಿಗಳಾದ ಮಹದೇವಸ್ವಾಮಿ, ಅಶೋಕ್,ಶ್ವೇತಾ, ಮಾಯಪ್ಪ,ಶಿವಣ್ಣ, ಶಿವಕುಮಾರ್,ಜೀವನಕುಮಾರ್,್ ಸುರೇಶ್, ಪ್ರಕಾಶ್, ರವಿಕುಮಾರ್,ಚಿಕ್ಕಣ್ಣ, ಹರ್ಷದ್‌ಪಾಷ, ಯತೀಶ್, ಭವ್ಯ,ಸುಹಾಶ್,ಲೋಹಿತ್‌ಬಾಬು ಮತ್ತಿತರರು ಹಾಜರಿದ್ದರು.

-ಕೋಟ್–

ಗ್ರಾಪಂಗಳಲ್ಲಿ ಆಡಳಿತ ಮಂಡಳಿ ಇಲ್ಲದಿರುವ ಕಾರಣ ದೊಡ್ಡ ಜವಾಬ್ದಾರಿ ಇದೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮೊದಲ ಆದ್ಯತೆಯನ್ನಾಗಿ ಪರಿಗಣಿಸಬೇಕು. ಕಳೆದ ವರ್ಷದ ಹದಿನೈದನೇ ಹಣಕಾಸು ಆಯೋಗದಲ್ಲಿ ಖರ್ಚಾಗದೆ ಉಳಿದಿರುವ ಅನುದಾನವನ್ನು ಸೇರಿಸಿಕೊಂಡು ಕ್ರಿಯಾಯೋಜನೆ ತಯಾರು ಮಾಡಬೇಕು.

-ಜಿ.ಟಿ.ದೇವೇಗೌಡ,ಶಾಸಕರು.

ಮೈಸೂರಿನ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಮೈಸೂರು ತಾಲ್ಲೂಕಿನ ಗ್ರಾಪಂಗಳ ಆಡಳಿತಾಧಿಕಾರಿಗಳು ಮತ್ತು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಸಭೆಯಲ್ಲಿ ಶಾಸಕ ಜಿ.ಟಿ.ದೇವೇಗೌಡ, ಜಿಪಂ ಸಿಇಒ ಎಸ್.ಯುಕೇಶ್‌ಕುಮಾರ್,ತಾಪಂ ಇಒ ಕೃಷ್ಣ ಮತ್ತಿತರರು ಹಾಜರಿದ್ದರು.

Share This Article
Leave a Comment