ಪಬ್ಲಿಕ್ ಅಲರ್ಟ್ ನ್ಯೂಸ್:-ಶಾಲೆಗೆ, ಪೋಷಕರಿಗೆ ಕೀರ್ತಿ ತನ್ನಿ ಉನ್ನತ ವಿದ್ಯಾಭ್ಯಾಸಕ್ಕೆ ಗಮನ ಹರಿಸಿ-ಬಸವರಾಜು
ಚಿತ್ರ, ವರದಿ:ಸುತ್ತೂರು ನಂಜುಂಡನಾಯಕ
ಮೈಸೂರು: ಓದು ಹಾಗೂ ಉತ್ತಮ ಫಲಿತಾಂಶದ ವಿಚಾರದಲ್ಲಿ ಸರ್ಕಾರಿ ಶಾಲೆಗಳು ಇಂದು ಖಾಸಗಿ ಶಾಲೆಗಳನ್ನು ಮೀರಿಸುತ್ತಿದ್ದೆ. ಸರ್ಕಾರದ ಸವಲತ್ತುಗಳನ್ನು ಬಳಸಿಕೊಂಡು ಮಕ್ಕಳು ಉನ್ನತ ವಿದ್ಯಾಭ್ಯಾಸದತ್ತ ಗಮನ ಹರಿಸಿ, ತಾವು ಓದುವ ಶಾಲೆ ಹಾಗೂ ಪೋಷಕರಿಗೆ ಕೀರ್ತಿ ತರುವಂತಾಗಬೇಕೆಂದು ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು ಸಲಹೆ ನೀಡಿದರು.
ತಮ್ಮ ಹುಟ್ಟುಹಬ್ಬದ ಅಂಗವಾಗಿ, ಮೈಸೂರು ತಾಲೂಕು ದಡದಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ಮಕ್ಕಳಿಗೆ ಶಾಲಾ ಬ್ಯಾಗ್ ಹಾಗೂ ನೋಟ್ ಬುಕ್ ಸೇರಿದಂತೆ ಇನ್ನಿತರ ಲೇಖನ ಸಾಮಾಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.
ಪ್ರತಿ ವರ್ಷವೂ ನನ್ನ ಜನ್ಮದಿನಾಚರಣೆಯಂದು ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್ ಸೇರಿದಂತೆ ಶಾಲೆಗೆ ಅಗತ್ಯವಿರುವ ನೆರವನ್ನು ನೀಡುತ್ತಾ ಬಂದಿದ್ದೇನೆ. ಅಲ್ಲದೇ ವಿವಿಧ ಜನಪರ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಅಗತ್ಯವಿರುವವರಿಗೆ ಸಹಾಯಹಸ್ತ ಚಾಚುತ್ತಿದ್ದೇನೆ ಎಂದ ಅವರು, ನನ್ನ ಜೀವಿತಾವಧಿಯವರೆಗೂ ಸರ್ಕಾರಿ ಶಾಲಾ ಮಕ್ಕಳಿಗೆ ಯಾವುದೇ ತರಹದ ಸಹಾಯ ಮಾಡಲು ಬದ್ದನಿದ್ದೇನೆ ಎಂದು ಭರವಸೆ ನೀಡಿದರು.
ಸರ್ಕಾರಿ ಶಾಲೆಗಳು ಇಂದು ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುತ್ತಿದೆ. ಅದರಲ್ಲೂ ಎಸ್ ಎಸ್ಎಲ್ ಸಿಫಲಿತಾಂಶದಲ್ಲಿ ಸರ್ಕಾರಿ ಶಾಲಾ ಮಕ್ಕಳು ಅದ್ಬುತ ಸಾಧನೆ ಮಾಡುತ್ತಿದ್ದಾರೆ. ಆದ್ದರಿಂದ ಮಕ್ಕಳು ಸರ್ಕಾರದಿಂದ ದೊರಕುವ ಸವಲತ್ತುಗಳನ್ನು ಉಪಯೋಗಿಸಿಕೊಂಡು ಮತ್ತಷ್ಟು ಚೆನ್ನಾಗಿ ವಿದ್ಯಾಭ್ಯಾಸ ನಡೆಸಿ ಪೋಷಕರಿಗೆ ಹಾಗೂ ಶಾಲೆಗೆ ಕೀರ್ತಿ ತರುವಂತಹ ಸಾಧಕರಾಗಬೇಕು ಎಂದು ಕಿವಿಮಾತು ಹೇಳಿದರು.
ಇನ್ನೂ ಶಾಲಾ ಆಡಳಿತ ಮಂಡಳಿಯವರು ಸಹ ಯಾವುದೇ ನೆರವು, ಸಹಾಯದ ಅಗತ್ಯವಿದ್ದಲ್ಲಿ, ಸಂಕೋಚವಿಲ್ಲದೇ ತಮಗೆ ವಿಷಯ ತಿಳಿಸಬಹುದಾಗಿದ್ದು, ನಿಮ್ಮೊಂದಿಗೆ ಸದಾ ಇರುತ್ತೇನೆ ಎಂಬ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಮಹದೇವ್, ಚೇತನ್ ಶರ್ಮ, ಅಜಯ್ ರಾಜ್, ಗುರುರಾಜ್, ಮಧು, ನಂದೀಶ್, ಕುಮಾರ್, ಧನಂಜಯ್, ಬಸವರಾಜ್ ಅವರ ಅಭಿಮಾನಿ ಬಳಗದವರು, ದಡದಳ್ಳಿ ಗ್ರಾಮದ ಮುಖಂಡರು, ಬಸವರಾಜ ಅಭಿಮಾನಿ ಬಳಗದ ಎಲ್ಲಾ ಸದಸ್ಯರು ಅಭಿಮಾನಿಗಳು ಭಾಗವಹಿಸಿದ್ದರು.
