ಪಬ್ಲಿಕ್ ಅಲರ್ಟ್ ನ್ಯೂಸ್:-ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದಡಿ ಅಲ್ಪಸಂಖ್ಯಾತರಿಗೆ ಇರುವ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಿ – ಜಿ ಲಕ್ಷ್ಮೀಕಾಂತ ರೆಡ್ಡಿ
ಏಪ್ರಿಲ್ 23 (ಕರ್ನಾಟಕ ವಾರ್ತೆ) ಪ್ರಧಾನ ಮಂತ್ರಿಗಳ 15 ಅಂಶಗಳಡಿ ಕಾರ್ಯಕ್ರಮದಡಿ ಅಲ್ಪಸಂಖ್ಯಾತರಿಗೆ ಇರುವ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಪಾರದರ್ಶಕವಾಗಿ ತಲುಪಿಸುವ ಕಾರ್ಯವನ್ನು ಸಂಭಂದಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮಾಡಬೇಕು ಎಂದು ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮೀಕಾಂತ ರೆಡ್ಡಿ ಅವರು ತಿಳಿಸಿದರು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಹಾಗೂ ಸರ್ಕಾರದ ವಿವಿಧ ಇಲಾಖೆಗಳಿಂದ ಸಿಗುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಬೇಕು. ಫಲಾನುಭವಿಗಳ ಆಯ್ಕೆ ಪಾರದರ್ಶಕವಾಗಿ ಇರಬೇಕು. ಸೌಲಭ್ಯ ನೀಡುವಲ್ಲಿ ಇರುವ ಮಾನದಂಡವನ್ನು ಅನುಸರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಶ್ರಯ ಯೋಜನೆಯಡಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲಾಗುವುದು. ಪಟ್ಟಣ ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಿ ಮನೆಗಳ ಹಂಚಿಕೆ ಮಾಡಲಾಗುವುದು. ನರಸಿಂಹರಾಜ ಕ್ಷೇತ್ರದಲ್ಲಿ ಮನೆಗಳ ನಿರ್ಮಾಣಕ್ಕೆ ಡಿ ಪಿ ಆರ್ ಮಾಡಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಪಿ ಎಂ ಸ್ವ ನಿಧಿ ಯೋಜನೆಯಡಿ ಮೈಸೂರು ಮಹಾನಗರ ಪಾಲಿಕೆಯಿಂದ ಸೌಲಭ್ಯ ಪಡೆಯಲು ಬೀದಿ ಬದಿ ವ್ಯಾಪಾರಿಗಳು 30 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದು 22 ಸಾವಿರ ಜನರು ಸೌಲಭ್ಯ ಪಡೆದಿದ್ದಾರೆ ಎಂದು ತಿಳಿಸಿದರು.
ಸಮಿತಿಯ ಸದಸ್ಯರು ಮಾತನಾಡಿ ಸಯ್ಯಾಜಿರಾವ್ ರಸ್ತೆಯ ಬನುಮಯ್ಯ ಕಾಲೇಜಿನ ಪಕ್ಕದಲ್ಲಿರುವ ಶ್ರೀ ಶಾಂತಿನಾಥ ಜೈನ ಬಸದಿಯ ಜಾಗದ ಗಡಿಯನ್ನು ಗುರುತಿಸಿ ಕೊಡಬೇಕು. ಮೈಸೂರು ಜಿಲ್ಲೆಯನ್ನು ಮಾದಕ ವಸ್ತುಗಳ ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕು. ಮುಸ್ಲಿಂ ಸಮುದಾಯದಲ್ಲಿ ಹೆಚ್ಚಿನ ಬಾಲಕಾರ್ಮಿಕರು ಇದ್ದು, ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು. ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ ನೀಡಬೇಕು. ಸಾಲ ನೀಡುವಲ್ಲಿ ಸಿಬಿಲ್ ಇಲ್ಲ ಎಂದು ರಿಜೆಕ್ಟ್ ಮಾಡುತ್ತಾರೆ. ಸಾಲ ನೀಡುವಲ್ಲಿ ಸ್ಥಳೀಕರಣ ಮಾಡಬೇಕು ಎಂದು ಮನವಿ ಮಾಡಿದರು.
ಹಳ್ಳದ ಕೇರಿಗೆ ಮಹಾವೀರ ನಗರ ಎಂದು ಹೆಸರು ಇದ್ದು ಇಲ್ಲಿ ನಾಮಫಲಕ ಅಳವಡಿಸಬೇಕು. ಅಲ್ಪ ಸಂಖ್ಯಾತ ಸಮುದಾಯದ ನಿರುದ್ಯೋಗಿ ಯುವಕ ಯುವತಿಯರಿಗೆ ಕೌಶಲ್ಯ ತರಬೇತಿ ನೀಡಬೇಕು. ಗ್ರಾಮೀಣ ಭಾಗದ ಜನರಿಗೆ ಸೌಲಭ್ಯಗಳ ಬಗ್ಗೆ ಮಾಹಿತಿ ಇರುವುದಿಲ್ಲ ಆದ್ದರಿಂದ ವಿವಿಧ ಇಲಾಖೆಗಳಿಂದ ಅಲ್ಪಸಂಖ್ಯಾತ ಸಮುದಾಯದವರಿಗೆ ಇರುವ ಸೌಲಭ್ಯಗಳ ಕುರಿತು ಹೆಚ್ಚಿನ ಪ್ರಚಾರ ನೀಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಸಮಿತಿಯ ಸದಸ್ಯರಾದ ಸುರೇಶ್ ಕುಮಾರ್ ಜೈನ್, ಸುಭಾನುದ್ದೀನ್ , ಫಾಜಿಲ್, ನಿಪ್ತಿನ್ ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಶಿಲ್ಪಾ ಕೆ ಅವರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
