ಪಬ್ಲಿಕ್ ಅಲರ್ಟ್ ನ್ಯೂಸ್:-ಕನ್ನಡ ಭಾಷೆಗೆ ಗೌರವ ತಂದುಕೊಟ್ಟ ಮಹಾನ್ ಚೇತನ ಡಾ. ರಾಜಕುಮಾರ್: ಕೆ. ಹರೀಶ್ ಗೌಡ
ಮೈಸೂರು, ಏ.24(ಕರ್ನಾಟಕ ವಾರ್ತೆ):- ಗೋಕಾಕ್ ಹೋರಾಟದಲ್ಲಿ ಭಾಗವಹಿಸಿ ಮಾತೃಭಾಷೆಗಯಾದ ಕನ್ನಡ ಭಾಷೆಗೆ ಗೌರವ ತಂದುಕೊಟ್ಟ ಮಹಾನ್ ಚೇತನ ಡಾ. ರಾಜಕುಮಾರ್ ಎಂದು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಡಾ. ರಾಜಕುಮಾರ್ ಜಯಂತಿ ಅಂಗವಾಗಿ ಡಾ: ರಾಜ್ ಕುಮಾರ್ ಉದ್ಯಾನವನದಲ್ಲಿ ಡಾ: ರಾಜ್ ಕುಮಾರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಅಂದು ಡಾ. ರಾಜ್ಕುಮಾರ್ ಅವರು ಗೋಕಾಕ್ ಚಳವಳಿಯ ಮೂಲಕ ನಡೆಸಿದ ಹೋರಾಟವು ನಮ್ಮ ಮಾತೃಭಾಷೆಗೆ ಇಷ್ಟೊಂದು ಗೌರವ ಮತ್ತು ಬೆಲೆಯನ್ನು ತಂದುಕೊಡಲು ಸಾಧ್ಯವಾಯಿತು ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಕನ್ನಡ ನಾಡು, ನುಡಿ ಎಂದರೆ ಡಾ: ರಾಜ್ ಕುಮಾರ್ ಅವರಿಗೆ ಅತೀವ ಪ್ರೀತಿ ಅವರು ನಟಿಸಿದ ಚಲನಚಿತ್ರದಲ್ಲಿ ಮಾತ್ರವಲ್ಲ ಗೋಕಕ್ ಹೋರಾಟದಲ್ಲೂ ಕಾಣಬಹುದು. ಡಾ: ರಾಜ್ ಕುಮಾರ್ ಅವರಿಗೆ ಕನ್ನಡದ ಮೇಲಿದ್ದ ಅಭಿಮಾನ ಯುವಜನರಿಗೆ ಮಾದರಿಯಾಗಬೇಕು ಎಂದರು.
ಡಾ. ರಾಜ್ಕುಮಾರ್ ಅವರು ನಟಿಸಿರುವ ಸಿನಿಮಾಗಳು ಮನರಂಜನೆಯ ಜೊತೆಗೆ ಒಂದು ನೀತಿಪಾಠವನ್ನು ತಿಳಿಸುತ್ತದೆ. ಅವರ ಸಿನಿಮಾಗಳ ನೀತಿಪಾಠದಿಂದ ಬಹಳಷ್ಟು ಜನರು ತಮ್ಮ ಜೀವನಶೈಲಿಯನ್ನು ಬದಲಾವಣೆ ಮಾಡಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ. ಅವರ ಸಿನಿಮಾಗಳಲ್ಲಿದ್ದ ಸಂಭಾಷಣೆ ಮತ್ತು ಸಾಹಿತ್ಯದ ಸೊಗಡನ್ನು ಇಂದು ಬೇರೆ ಸಿನಿಮಾಗಳಲ್ಲಿ ಕಾಣಲು ಅಸಾಧ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ಚಿತ್ರರಂಗದಲ್ಲಿ ‘ಆಡು ಮುಟ್ಟದ ಸೊಪ್ಪಿಲ್ಲ, ಡಾ. ರಾಜ್ಕುಮಾರ್ ಅವರು ನಿರ್ವಹಿಸದ ಪಾತ್ರಗಳಿಲ್ಲ’ ಎನ್ನುವ ಮಾತಿದೆ. ನಟನೆಗೆ ಮಾತ್ರ ಸೀಮಿತವಾಗದೆ ಅವರ ಸಿರಿ ಕಂಠದಿಂದ ಹಾಡುಗಳನ್ನು ಹಾಡಿ ಜನರ ಮನಸ್ಸಿನಲ್ಲಿ ನೆಲೆಸಿದ್ದಾರೆ. ಅಂದಿನ ಕಾಲದಲ್ಲೇ ಅವರು ತಮ್ಮ ಸಿನಿಮಾಗಳಲ್ಲಿ ಆಂಗ್ಲ ಭಾಷೆಯ ಹಾಡುಗಳನ್ನು ಹಾಡುತ್ತಿದ್ದರು ಎಂದು ಶ್ಲಾಘಿಸಿದರು.
ಡಾ. ರಾಜ್ಕುಮಾರ್ ಅವರ ಜನ್ಮದಿನಾಚರಣೆಯನ್ನು ಆಚರಿಸುತ್ತಿರುವುದು ನಮಗೆಲ್ಲರಿಗೂ ಸಂತೋಷದ ವಿಷಯವಾಗಿದೆ. ಮುಂದಿನ ವರ್ಷಗಳಲ್ಲಿ ಇನ್ನೂ ಅದ್ದೂರಿಯಾಗಿ ಡಾ: ರಾಜ್ ಕುಮಾರ್ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಿ ಎಂದು ಅವರು ಆಶಿಸಿದರು.
ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀವತ್ಸ ಅವರು ಮಾತನಾಡಿ ಡಾ. ರಾಜಕುಮಾರ್ ಅವರ ನಟನೆಯ ಜೊತೆ ಅವರ ವ್ಯಕ್ತಿತ್ವ ಜನರ ಮನಸ್ಸಿನಲ್ಲಿ ಇಂದಿಗೂ ಅಜರಾಮರ ರಾಗಿ ಉಳಿಯಲು ಸಾಧ್ಯವಾಗಿದೆ. ಅವರ ವ್ಯಕ್ತಿತ್ವ ಹಾಗೂ ಕನ್ನಡ ಭಾಷೆಯ ಮೇಲೆ ಅವರಿಗಿದ್ದ ಪ್ರೀತಿ ಪ್ರತಿಯೊಬ್ಬರಿಗೆ ದಾರಿದೀಪವಾಗಬೇಕು ಎಂದರು.
ಡಾ. ರಾಜಕುಮಾರ್ ಅವರ ಚಿತ್ರಗಳು ಅತ್ಯಂತ ಶುದ್ಧವಾಗಿದ್ದು, ಕುಟುಂಬದ ಪ್ರತಿಯೊಬ್ಬರು ಒಟ್ಟಿಗೆ ಕುಳಿತು ನೋಡಬಹುದಾದಂತಹ ಚಿತ್ರಗಳಾಗಿರುತ್ತಿದ್ದವು. ಚಿಕ್ಕವಯಸ್ಸಿನಲ್ಲಿ ಹಳ್ಳಿಗಳಲ್ಲಿ ಟೆಂಟ್ ಥಿಯೇಟರ್ಗಳಲ್ಲಿ ಸಿನಿಮಾ ನೋಡುತ್ತಿದ್ದ ದಿನಗಳನ್ನು ನೆನಪಿಸಿಕೊಂಡರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ನಿರ್ಮಲ ಎಸ್. ಹೆಚ್ ಅವರು ಮಾತನಾಡಿ ಡಾ: ರಾಜ್ ಕುಮಾರ್ ಅವರು ಹಾಡಿರುವ ಹಾಡುಗಳು ರೋಮಾಂಚನ ಮೂಡಿಸುತ್ತದೆ. ಅವರ ನಟನೆಗೆ
ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದರೂ ಅಹಂಕಾರ ತೋರದೆ ಅಭಿಮಾನಿಗಳನ್ನು ‘ದೇವರು’ ಎಂದು ಕರೆದರು.
ಜೀವನ ಶೈಲಿ*. ಶಿಸ್ತು, ಸಮಯಪಾಲನೆ, ಹಿರಿಯರಿಗೆ ಗೌರವ, ಮಾತೃ ಭಾಷೆಯ ಮೇಲಿನ ಭಕ್ತಿ ಅಣ್ಣಾವ್ರು ನಮಗೆ ಬಿಟ್ಟುಹೋಗಿರುವ ಆಸ್ತಿ
ಎಂದರು.
ಡಾ;ರಾಜ್ ಕುಮಾರ್ ಕುರಿತು ಗೀತಗಾಯನ ಕಾರ್ಯಕ್ರಮವನ್ನು ಡಾ; ಲೋಹಿತ್ ಐ.ಡಿ ಅವರ ತಂಡದವರು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲೆಯ ಡಾ. ರಾಜಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷರಾದ ಮಹದೇವಸ್ವಾಮಿ, ಉಪಾಧ್ಯಕ್ಷರಾದ ಗೋವಿಂದರಾಜು ಗೌರವ ಸಲಹೆಗಾರರಾದ ಸಿದ್ದಪ್ಪ ಮತ್ತು ಸ್ವಾಮಿ ಕಾರ್ಯದರ್ಶಿಯಾದ ರಮೇಶ್, ಡಾ: ರಾಜ್ ಶಿವಸೈನ್ಯ ಅಭಿಮಾನಿಗಳ ಸಂಘದ ಅಧ್ಯಕ್ಷ ಬಿ.ಎನ್ ರವಿ, ಸದಸ್ಯರಾದ ಮಹೇಶ್, ದೊರೆ, ಮಂಜು ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.
