ಸುಪ್ರೀಂ ಕೋರ್ಟ್‌ ಆದೇಶದಂತೆ ದೇವರಾಜ ಮಾರುಕಟ್ಟೆ, ಲ್ಯಾನ್ಸ್‌ಡೌನ್‌ ಕಟ್ಟಡ ಸಂರಕ್ಷಣೆಗೆ, ನವೀಕರಣ ಮಾಡಿ: ಯದುವೀರ್‌ ಒಡೆಯರ್‌ ಆಗ್ರಹ

latha prabhukumar
2 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಸುಪ್ರೀಂ ಕೋರ್ಟ್‌ ಆದೇಶದಂತೆ ದೇವರಾಜ ಮಾರುಕಟ್ಟೆ, ಲ್ಯಾನ್ಸ್‌ಡೌನ್‌ ಕಟ್ಟಡ ಸಂರಕ್ಷಣೆಗೆ, ನವೀಕರಣ ಮಾಡಿ: ಯದುವೀರ್‌ ಒಡೆಯರ್‌ ಆಗ್ರಹ

ಸಿದ್ದರಾಮಯ್ಯಗೆ ಪತ್ರ ಬರೆದ ಮೈಸೂರು-ಕೊಡಗು ಸಂಸದರು

ಮೈಸೂರು, ಮೇ 8: ಮೈಸೂರಿನ ಪಾರಂಪರಿಕ ಕಟ್ಟಡಗಳಾಗಿರುವ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‌ಡೌನ್‌ ಕಟ್ಟಡದ ಸಂರಕ್ಷಣೆ ಹಾಗೂ ನವೀಕರಣಕ್ಕೆ ಅನುದಾನವನ್ನು ಶೀಘ್ರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಮನವಿ ಮಾಡಿದ್ದಾರೆ.

ಮೈಸೂರಿನ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಣೆ ಮಾಡುವುದೇ ನಮ್ಮ ಮುಖ್ಯ ಧ್ಯೇಯ. ಈ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ ಎಂದು ಸಂಸದರು ಹೇಳಿದ್ದಾರೆ.

ಮೈಸೂರಿನ ಐತಿಹಾಸಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‌ಡೌನ್ ಕಟ್ಟಡದ ಸಂರಕ್ಷಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ 4 ಮೇ 2026 ರಂದು ನೀಡಿದ ತೀರ್ಪು ಅತ್ಯಂತ ಮಹತ್ವದ್ದಾಗಿದೆ ಎಂದು ವಿವರಿಸಿದ್ದಾರೆ.

ಸುಪ್ರೀಂ ಕೋರ್ಟ್‌ ತೀರ್ಪು ಮನವರಿಕೆ
ಕಟ್ಟಡ ಕೆಡವಿ ಪುನರ್‌ ನಿರ್ಮಾಣದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. 19ನೇ ಶತಮಾನದ ಈ ಐತಿಹಾಸಿಕ ಕಟ್ಟಡವನ್ನು ಸಂರಕ್ಷಿಸಿ, ನವೀಕರಿಸಲು ಆದೇಶಿಸಿದೆ ಎಂದು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದಿದ್ದಾರೆ.

ತಜ್ಞರ ಸಮಿತಿ ಶಿಫಾರಸು ಮೇರೆಗೆ ಶೇ. 70 ದುರಸ್ತಿ ಸಾಧ್ಯ
ಐಐಟಿ ರೂರ್ಕಿ ಸಲ್ಲಿಸಿದ ವಿವರವಾದ ತಾಂತ್ರಿಕ ಅಧ್ಯಯನ ವರದಿ ಆಧರಿಸಿ ಸುಪ್ರೀಂ ಕೋರ್ಟ್‌ ಈ ತೀರ್ಪು ನೀಡಿದೆ. ಸುಮಾರು 70% ದುರಸ್ತಿ ಮಾಡಬಹುದಾಗಿದೆ. ಹಾಲಿ ಇರುವ ಅಡಿಪಾಯ ಸಂರಕ್ಷಣೆ ಮತ್ತು ನವೀಕರಣ ಸಾಧ್ಯವಾಗಲಿದೆ ಎಂದು ಯದುವೀರ್‌ ವಿವರಿಸಿದ್ದಾರೆ.

“ನಾಗರಿಕ ವಾಸ್ತುಶಿಲ್ಪ ಸಮೂಹ”ಗಳು ಮೈಸೂರಿನ ಅವಿಭಾಜ್ಯ ಅಂಗವಾಗಿದೆ. ಮೈಸೂರು-ಕೊಡಗು ಕ್ಷೇತ್ರವನ್ನು ಪ್ರತಿನಿಧಿಸುವ ಸಂಸತ್ ಸದಸ್ಯನಾಗಿ, ಮೈಸೂರಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಪ್ರವಾಸೋದ್ಯಮ ಸಂರಕ್ಷಿಸಲು ಬದ್ಧನಾಗಿದ್ದೇನೆ. ನ್ಯಾಯಾಂಗ ಆದೇಶವನ್ನು ಪಾಲಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಸಂಸದರು ಹೇಳಿದ್ದಾರೆ.

ಯೋಜನೆ ತಕ್ಷಣವೇ ಆರಂಭಿಸಲು ಸೂಚನೆ
ಈ ನಿಟ್ಟಿನಲ್ಲಿ ಐಐಟಿ ರೂರ್ಕಿ ಮತ್ತು ಇಂಟಾಚ್ ತಜ್ಞರ ಸಮಿತಿ ನೀಡಿರುವ ಶಿಫಾರಸಿನ ಅನ್ವಯ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‌ಡೌನ್ ನವೀಕರಣಕ್ಕೆ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ಮೈಸೂರು ನಗರ ನಿಗಮ (ಎಂಸಿಸಿ) ಮತ್ತು ಮೈಸೂರು ಅಭಿವೃದ್ಧಿ ಪ್ರಾಧಿಕಾರಗಳು (ಎಂಡಿಎ) ಈ ಯೋಜನೆಯನ್ನು ತಕ್ಷಣವೇ ಪ್ರಾರಂಭಿಸಬೇಕು ಎಂದು ಸೂಚನೆ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರದಿಂದ ಹಂಚಿಕೆಯಾದ ಹಣವನ್ನು ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಮಾತ್ರ ಬಳಸಲಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕಾಗಿದೆ ಎಂದಿದ್ದಾರೆ.

ಈ ಹಿಂದೆ ಬಜೆಟ್‌ನಲ್ಲಿಯೂ ಘೋಷಿಸಲಾಗಿತ್ತು
2024–25ರ ಬಜೆಟ್‌ನಲ್ಲಿ ದೇವರಾಜ ಮಾರುಕಟ್ಟೆಯ ನವೀಕರಣಕ್ಕೆ ₹95 ಕೋಟಿ ಮತ್ತು ಲ್ಯಾನ್ಸ್‌ಡೌನ್ ಕಟ್ಟಡಕ್ಕೆ ₹35 ಕೋಟಿ ಅನುದಾನ ಘೋಷಿಸಲಾಗಿತ್ತು ಎಂಬುದನ್ನು ನೆನಪಿಸಿಕೊಳ್ಳಬೇಕಾಗಿದೆ ಎಂದು ಯದುವೀರ್‌ ಒಡೆಯರ್‌ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‌ಡೌನ್‌ ಕೇವಲ ಕಟ್ಟಡಗಳಲ್ಲ, ಇವು ಮೈಸೂರಿನ ಜೀವಂತ ಸಾಂಸ್ಕೃತಿಕ ಮತ್ತು ವಾಣಿಜ್ಯ ಪರಂಪರೆಯನ್ನು ಪ್ರತಿನಿಧಿಸುತ್ತವೆ, ಮೈಸೂರಿನವರೇ ಆದ ಸಿಎಂ ಸಿದ್ದರಾಮಯ್ಯ ಅವರು ಇವುಗಳ ಸಂರಕ್ಷಣೆ ಮತ್ತು ನವೀಕರಣಕ್ಕೆ ಆದ್ಯತೆ ನೀಡಿ, ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವ ಭರವಸೆ ಇದೆ ಎಂದು ಸಂಸದ ಯದುವೀರ್‌ ಒಡರಯರ್‌ ಸ್ಪಷ್ಟಪಡಿಸಿದ್ದಾರೆ.

Share This Article
Leave a Comment