ಪಬ್ಲಿಕ್ ಅಲರ್ಟ್ ನ್ಯೂಸ್:-ನಾಡಿನ ಅಧಿದೇವತೆ, ಶಕ್ತಿ ದೇವತೆ ಚಾಮುಂಡಿ ತಾಯಿಯ ದರ್ಶನಕ್ಕೆ ಆಷಾಢ ಮಾಸದ ನಾಲ್ಕು ಶುಕ್ರವಾರ, ವರ್ಧಂತಿಯಂದು ಹೆಚ್ಚು ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸಲಿದ್ದು ಜಿಲ್ಲಾಡಳಿತ ಹಾಗೂ ಚಾಮುಂಡಿ ಬೆಟ್ಟ ಪ್ರಾಧಿಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ
ಆಷಾಢ ಶುಕ್ರವಾರ ಚಾಮುಂಡಿ ಬೆಟ್ಟ
ಚಾಮುಂಡಿ ಬೆಟ್ಟ
ಮೈಸೂರು: ಚಾಮುಂಡಿ ಬೆಟ್ಟಕ್ಕೆ ಆಷಾಢ ಮಾಸದ ನಾಲ್ಕು ಶುಕ್ರವಾರ ಹಾಗೂ ವರ್ಧಂತಿಯ ದಿನ ಅತಿ ಹೆಚ್ಚು ಭಕ್ತರು ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶ ನಿರ್ಬಂಧಿಸಿದ್ದು, ಲಲಿತ್ ಮಹಲ್ ಪ್ಯಾಲೇಸ್ ಮೈದಾನದಿಂದ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಭಕ್ತರು ತಮ್ಮ ಖಾಸಗಿ ವಾಹನಗಳನ್ನು ಚಾಮುಂಡಿ ಬೆಟ್ಟಕ್ಕೆ ತೆಗೆದುಕೊಂಡು ಹೋಗದೆ ಲಲಿತ್ ಮಹಲ್ ಪ್ಯಾಲೇಸ್ ಮೈದಾನದ ಬಳಿ ವಾಹನಗಳನ್ನು ನಿಲ್ಲಿಸಬೇಕಿದೆ.
“ಆಷಾಢ ಮಾಸದ ಜುಲೈ 17 ಶುಕ್ರವಾರ, ಜುಲೈ 18 ಶನಿವಾರ, ಜುಲೈ 19 ಭಾನುವಾರ ಹಾಗೂ 2ನೇ ಆಷಾಢ ಮಾಸದ ಜುಲೈ 24 ಶುಕ್ರವಾರ, ಜುಲೈ 25 ಶನಿವಾರ, ಜುಲೈ 26 ಭಾನುವಾರ ಹಾಗೂ 3ನೇ ಆಷಾಢ ಶುಕ್ರವಾರ ಜುಲೈ 31, ಆಗಸ್ಟ್ 1 ಶನಿವಾರ, ಆಗಸ್ಟ್ 2 ಭಾನುವಾರ ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ. ಆಗಸ್ಟ್ 4ಕ್ಕೆ ಚಾಮುಂಡೇಶ್ವರಿ ತಾಯಿಯ ವರ್ಧಂತಿ ಇರುವುದರಿಂದ ಆ ದಿನವೂ ಸಹ ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ. ಇದರ ಜೊತೆಗೆ ಕಡೆಯ ಶುಕ್ರವಾರ ಆಗಸ್ಟ್ 7, ಆಗಸ್ಟ್ 8 ಶನಿವಾರ ಹಾಗೂ ಆಗಸ್ಟ್ 9ರ ಭಾನುವಾರ ಎಲ್ಲಾ ರೀತಿಯ ಖಾಸಗಿ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ” ಎಂದು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಆದೇಶಿಸಿದ್ದಾರೆ.
“ಆಷಾಢ ಮಾಸದ ಶುಕ್ರವಾರ ಬೆಳಗಿನ ಜಾವ 3 ಗಂಟೆಯಿಂದಲೇ ಮೂಲ ಚಾಮುಂಡೇಶ್ವರಿ ತಾಯಿಗೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಬಳಿಕ ವಿಶೇಷ ಅಲಂಕಾರ ಮಾಡಿ ಬೆಳಗಿನ 6:30ರ ಸಮಯಕ್ಕೆ ಭಕ್ತರಿಗೆ ದರ್ಶನದ ವ್ಯವಸ್ಥೆ ಮಾಡಲಾಗುವುದು. ಇದರ ಜೊತೆಗೆ ಉತ್ಸವ ಮೂರ್ತಿಗೂ ವಿಶೇಷ ಅಲಂಕಾರ ಮಾಡಲಾಗುವುದು” ಎಂದು ದೇವಾಲಯದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಮಾಹಿತಿ ನೀಡಿದ್ದು, “ಆಷಾಢ ಮಾಸದಲ್ಲಿ ಶಕ್ತಿ ದೇವತೆಯ ದರ್ಶನ ಮಾಡಿದರೆ ಇಷ್ಟಾರ್ಥ ನೆರವೇರುತ್ತದೆ ಹಾಗೂ ಕಷ್ಟಗಳು ದೂರಾಗುತ್ತವೆ” ಎಂದರು.
1 ಲಕ್ಷ ಲಾಡು ತಯಾರಿ: “ಈ ಬಾರಿ ಆಷಾಢ ಮಾಸದಲ್ಲಿ ಭಕ್ತರಿಗೆ ನೀಡಲು ಒಂದು ಲಕ್ಷ ಲಾಡುಗಳನ್ನು ತಯಾರಿಸಲಾಗುತ್ತಿದ್ದು, ಇದರ ಜೊತೆಗೆ ಲಕ್ಷಕ್ಕೂ ಹೆಚ್ಚು ಚಾಮುಂಡೇಶ್ವರಿ ತಾಯಿಯ ಕುಂಕುಮವನ್ನು ಪ್ಯಾಕ್ ಮಾಡಲಾಗುತ್ತಿದೆ. ಭಕ್ತರಿಗೆ ಹಂಚಲು ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಸಾಮಾನ್ಯ ಭಕ್ತರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ, 2,000 ರೂ. ಟಿಕೆಟ್ ಪಡೆದವರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ” ಎಂದು ಚಾಮುಂಡಿ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರೂಪ ಮಾಹಿತಿ ನೀಡಿದರು.
ಆಷಾಢ ಶುಕ್ರವಾರ ಚಾಮುಂಡಿ ಬೆಟ್ಟ
1 ಲಕ್ಷ ಲಡ್ಡು ತಯಾರು
ಪ್ಲಾಸ್ಟಿಕ್ ನಿಷೇಧ: ಬೆಟ್ಟಕ್ಕೆ ಬರುವ ಭಕ್ತರು ಪ್ಲಾಸ್ಟಿಕ್ ಬಾಟಲಿಗಳನ್ನು ತರದಂತೆ ಪಾಲಿಕೆ ತಿಳಿಸಿದ್ದು, ಇದರ ಜೊತೆಗೆ ತ್ಯಾಜ್ಯವನ್ನು ಪಾಲಿಕೆ ಇಟ್ಟಿರುವ ಕಸದ ಬುಟ್ಟಿಯಲ್ಲಿ ಹಾಕಬೇಕು ಎಂದು ಸೂಚಿಸಿದ್ದಾರೆ. ಮೈಸೂರಿನಲ್ಲಿ ಆಷಾಢ ಮಾಸದ ಶುಕ್ರವಾರದ ದಿನ ಸಾರ್ವಜನಿಕ ಸ್ಥಳದಲ್ಲಿ ಹಾಗೂ ಬೆಟ್ಟದ ಸುತ್ತ ಪ್ರಸಾದ ಹಂಚುವವರು ಪಾಲಿಕೆಯಿಂದ ಹೊರಡಿಸಿರುವ ಸೂಚನೆ ಪಾಲಿಸಬೇಕೆಂದು ತಿಳಿಸಲಾಗಿದೆ.
ಆಷಾಢ ಶುಕ್ರವಾರ ಚಾಮುಂಡಿ ಬೆಟ್ಟ
ಭದ್ರತೆ ಪರಿಶೀಲನೆ.
ಭಕ್ತರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಚಾಮುಂಡಿ ಬೆಟ್ಟದ ಕೆಳಗೆ ಜಿಲ್ಲಾಡಳಿತ ಹಾಗೂ ಚಾಮುಂಡಿ ಬೆಟ್ಟದ ಮೇಲೆ ಪ್ರಾಧಿಕಾರ ಸರ್ವ ರೀತಿಯಲ್ಲೂ ವ್ಯವಸ್ಥೆ ಮಾಡಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ತಿಳಿಸಿದ್ದಾರೆ.
