ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ವರ್ಷದ ಸಂಭ್ರಮದ ಆರಂಭ: ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಬ್ಯಾಗ್ ವಿತರಣೆ- ಕೆ ಹರೀಶ್ ಗೌಡ

latha prabhukumar
2 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ವರ್ಷದ ಸಂಭ್ರಮದ ಆರಂಭ: ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಬ್ಯಾಗ್ ವಿತರಣೆ- ಕೆ ಹರೀಶ್ ಗೌಡ

ಮೈಸೂರು, ಜೂನ್ 01 (ಕರ್ನಾಟಕ ವಾರ್ತೆ ) ಬೇಸಿಗೆ ರಜೆಯ ನಂತರ ಇಂದಿನಿಂದ ಹೊಸ ಶೈಕ್ಷಣಿಕ ವರ್ಷ ಅಧಿಕೃತವಾಗಿ ಪ್ರಾರಂಭಗೊಂಡಿದ್ದು, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕಾ ಹಬ್ಬಕ್ಕೆ ಸಡಗರಕ್ಕೆ ಚಾಮರಾಜ ಕ್ಷೇತ್ರದ ಶಾಸಕರಾದ ಕೆ ಹರೀಶ್ ಗೌಡ ಅವರು
ಚಾಲನೆ ನೀಡಿದರು.

ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಸ್ಕೂಲ್ ಬ್ಯಾಗ್‌ಗಳನ್ನು ವಿತರಿಸುವ ಮೂಲಕ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳಿಗೆ ಶುಭಾಶಯ ಹೇಳಿದರು.

ಇಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ವತಿಯಿಂದಮೈಸೂರು ದಕ್ಷಿಣ ವಲಯದ ವ್ಯಾಪ್ತಿಯಲ್ಲಿ ತಾಲ್ಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಮತ್ತು ಮಹಾ ಪೋಷಕ ಸಭೆಯನ್ನು  ಸರ್ಕಾರಿ ಪ್ರೌಢಶಾಲೆ, ಕುಕ್ಕರಹಳ್ಳಿಯಲ್ಲಿ  ಆಯೋಜಿಸಿಲಾಗಿತ್ತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬೇಸಿಗೆ ರಜೆಯನ್ನು ಸಂತೋಷದಿಂದ ಕಳೆದು ಮರಳಿ ಶಾಲೆಗೆ ಬಂದಿದ್ದೀರಿ ಸರ್ಕಾರಿ ಶಾಲೆಗಳಲ್ಲಿ ಯಾವುದೇ ರೀತಿಯ ತಾರತಮ್ಯವಿಲ್ಲದೆ ಎಲ್ಲ ಮಕ್ಕಳಿಗೂ ಸಮಾನ ಮತ್ತು ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ. ಪ್ರತಿಯೊಬ್ಬ ಮಗುವಿನ ಅಗತ್ಯಕ್ಕೆ ತಕ್ಕಂತೆ ಶಿಕ್ಷಕರು ಉತ್ತಮ ಬೋಧನೆ ಮಾಡುತ್ತಿದ್ದಾರೆ. ಸಾರ್ವಜನಿಕರು ಮತ್ತು ವಿವಿಧ ಮಹನೀಯರು ಸರ್ಕಾರಿ ಶಾಲೆಗಳಿಗೆ ಉದಾರವಾಗಿ ದಾನ-ದತ್ತಿಗಳನ್ನು ನೀಡುವ ಮೂಲಕ ಶಾಲೆಗಳನ್ನು ಉನ್ನತ ಮಟ್ಟಕ್ಕೆ ಬೆಳೆಸಲು ಕೈಜೋಡಿಸುತ್ತಿದ್ದಾರೆ. ಆದ್ದರಿಂದ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು ಎಂದು ಹೇಳಿದರು

ಯಾವೊಂದು ಮಗುವೂ ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣವನ್ನು ಪಡೆದುಕೊಂಡಾಗ ಮಾತ್ರ ಜೀವನದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯ. ಶಿಕ್ಷಣದಲ್ಲಿ ಪರಿಣಿತಿ ಮತ್ತು ಜ್ಞಾನವನ್ನು ಗಳಿಸಿಕೊಂಡಾಗ ಮಾತ್ರ ಬದುಕಿನಲ್ಲಿ ಉತ್ತಮ ಅವಕಾಶಗಳು ಹುಡುಕಿಕೊಂಡು ಬರುತ್ತವೆ ಎಂದರು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣದ ಮೌಲ್ಯ ಹೆಚ್ಚಾಗಿದೆ  ವಿಶೇಷವಾಗಿ 10ನೇ ತರಗತಿ ವಿದ್ಯಾರ್ಥಿಗಳು ಈಗಿನಿಂದಲೇ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಶಿಕ್ಷಕರು ಮಾಡುವ ಪಾಠ-ಪ್ರವಚನಗಳನ್ನು ಶ್ರದ್ಧೆಯಿಂದ ಕೇಳಿ, ಮುಂಬರುವ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಬೇಕು. ಆಗ ಮಾತ್ರ ಮುಂದಿನ ಉನ್ನತ ಶಿಕ್ಷಣಕ್ಕಾಗಿ ಉತ್ತಮ ಕಾಲೇಜುಗಳಿಗೆ ಪ್ರವೇಶ ಪಡೆಯಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ (ಬಿ.ಇ.ಒ) ಕೃಷ್ಣ ಅವರು ಮಾತನಾಡಿ  ಇಂದು ವೇದಿಕೆಯ ಮೇಲಿರುವ ಗಣ್ಯರೆಲ್ಲರೂ ಬಡತನ ಮತ್ತು ಕಷ್ಟಗಳ ನಡುವೆಯೇ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಅತ್ಯುತ್ತಮ ಶಿಕ್ಷಣ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಸರ್ಕಾರವು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಹಲವಾರು ಉಚಿತ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದೆ. ಈ ಎಲ್ಲಾ ಸೌಲಭ್ಯಗಳನ್ನು  ವಿದ್ಯಾರ್ಥಿಗಳು ಸರಿಯಾಗಿ ಬಳಸಿಕೊಳ್ಳಬೇಕು. ಆ ಮೂಲಕ ಜ್ಞಾನವಂತರಾಗಿ, ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿಯನ್ನು ಹೊಂದಬೇಕು ಎಂದರು

ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಸೀಮಿತವಾಗದೆ, ಗುಣಾತ್ಮಕ ಶಿಕ್ಷಣವನ್ನು ಪಡೆಯಬೇಕು. ಆ ಮೂಲಕ ದೇಶದ ಜವಾಬ್ದಾರಿಯುತ ಹಾಗೂ ಒಳ್ಳೆಯ ಪ್ರಜೆಗಳಾಗಿ ರೂಪುಗೊಂಡು, ಜೀವನದಲ್ಲಿ ಉನ್ನತ ಮಟ್ಟಕ್ಕೇರಬೇಕು. ಸಮಾಜದಲ್ಲಿ ಎಲ್ಲರಿಗೂ ಮಾದರಿಯಾಗಿ ಒಳ್ಳೆಯ ಹೆಸರನ್ನು ಗಳಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ DPEO ವಿಜಯ್ ಕುಮಾರ್, ಸರ್ಕಾರಿ ಪ್ರೌಢ ಶಾಲೆ ಕುಕ್ಕರಳ್ಳಿಯ ಮುಖ್ಯ ಶಿಕ್ಷಕರಾದ ಚಂದ್ರ ಆರ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕರಲ್ಲಿಯ ಮುಖ್ಯ ಶಿಕ್ಷಕರಾದ ವಿಕ್ಟೊರಿಯ ಎನ್, ನಗರ ಕಾರ್ಯದರ್ಶಿಯಾದ ಸುಧೀರ್, ಸುರೇಶ T. P ಮಾಜಿ ಸೈನಿಕರಾದ ವಿಶ್ವನಾಥ್, ಮಲ್ಲಮ್ಮ ಶಶಿ ಪೈ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment