ಪಬ್ಲಿಕ್ ಅಲರ್ಟ್ ನ್ಯೂಸ್:-ನಗರದಲ್ಲಿ ಅನಧಿಕೃತವಾಗಿ ನಿಲುಗಡೆ ಮಾಡಿರುವ 382 ವಾಹನಗಳಿಗೆ ನೋಟಿಸ್ ಜಾರಿ
ಮೈಸೂರು ನಗರದ ಸಾರ್ವಜನಿಕ ರಸ್ತೆಗಳು, ಪಾದಚಾರಿ ಮಾರ್ಗಗಳು ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ದೀರ್ಘಕಾಲದಿಂದ ಅನಧಿಕೃತವಾಗಿ ನಿಲುಗಡೆ ಮಾಡಿರುವ ಹಾಗೂ ಬಳಕೆಯಲ್ಲಿಲ್ಲದ ವಾಹನಗಳನ್ನು ತೆರವುಗೊಳಿಸಲು ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಕ್ರಮ ಕೈಗೊಳ್ಳಲಾಗಿದೆ.
ಪಾಲಿಕೆಯ ವ್ಯಾಪ್ತಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಒಟ್ಟು 382 ಪರಿತ್ಯಕ್ತ/ಅನುಪಯುಕ್ತ ವಾಹನಗಳನ್ನು ಗುರುತಿಸಲಾಗಿದ್ದು, ಸದರಿ ವಾಹನಗಳ ಮೇಲೆ ನೋಟಿಸ್ ಅಂಟಿಸುವ ಕಾರ್ಯಕ್ಕೆ ದಿನಾಂಕ 25.08.2026ರಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀಮತಿ ಸವಿತಾ ಎಂ.ಕೆ. ಅವರು ಚಾಲನೆ ನೀಡಿದರು.
ಸಾರ್ವಜನಿಕ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳಲ್ಲಿ ಇಂತಹ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟಾಗುವುದರೊಂದಿಗೆ, ನಗರದ ಸ್ವಚ್ಛತೆ ಮತ್ತು ಸೌಂದರ್ಯಕ್ಕೂ ಧಕ್ಕೆಯಾಗುತ್ತಿದೆ. ಅಲ್ಲದೆ, ಕೆಲವು ವಾಹನಗಳು ತ್ಯಾಜ್ಯ ಸಂಗ್ರಹಣೆ, ಅಕ್ರಮ ಚಟುವಟಿಕೆ ಹಾಗೂ ಸೊಳ್ಳೆ ಸೇರಿದಂತೆ ರೋಗವಾಹಕಗಳ ಉತ್ಪತ್ತಿಗೆ ಕಾರಣವಾಗುವ ಸಾಧ್ಯತೆಯಿದೆ.
ಆದ್ದರಿಂದ, ನೋಟಿಸ್ ಅಂಟಿಸಿದ ದಿನಾಂಕದಿಂದ 7 ದಿನಗಳೊಳಗಾಗಿ ಸಂಬಂಧಪಟ್ಟ ವಾಹನದ ಮಾಲೀಕರು ತಮ್ಮ ವಾಹನವನ್ನು ಸದರಿ ಸ್ಥಳದಿಂದ ತೆರವುಗೊಳಿಸಬೇಕು. ನಿಗದಿತ ಅವಧಿಯೊಳಗೆ ವಾಹನವನ್ನು ತೆರವುಗೊಳಿಸದಿದ್ದಲ್ಲಿ, ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ, 1976ರ ಕಲಂ 127 ಹಾಗೂ ಮೈಸೂರು ಮಹಾನಗರ ಪಾಲಿಕೆಯ ಉಪವಿಧಿಗಳು ಮತ್ತು ಪಾಲಿಕೆ ಪರಿಷತ್ತಿನ ನಿರ್ಣಯದನ್ವಯ, ವಾಹನವನ್ನು ಪರಿತ್ಯಕ್ತ/ಅನುಪಯುಕ್ತ ವಾಹನವೆಂದು ಪರಿಗಣಿಸಿ ಟೋಯಿಂಗ್ ಮೂಲಕ ತೆರವುಗೊಳಿಸಲಾಗುವುದು. ವಾಹನ ತೆರವು ಹಾಗೂ ಸಾಗಾಣಿಕೆ ವೆಚ್ಚವನ್ನು ಸಂಬಂಧಪಟ್ಟ ವಾಹನದ ಮಾಲೀಕರಿಂದ ವಸೂಲಿ ಮಾಡಲಾಗುವುದು. ಅಗತ್ಯವಿದ್ದಲ್ಲಿ ವಾಹನವನ್ನು ಹರಾಜು ಅಥವಾ ಸ್ಕ್ರ್ಯಾಪ್ ಮಾಡುವ ಕ್ರಮವನ್ನೂ ಕೈಗೊಳ್ಳಲಾಗುವುದು.
ವಾಹನ ಮಾಲೀಕರು ಪಾಲಿಕೆಯ ಕ್ರಮಕ್ಕೆ ಅವಕಾಶ ನೀಡದೆ, ನಿಗದಿತ ಅವಧಿಯೊಳಗೆ ತಮ್ಮ ವಾಹನಗಳನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸಿ ಸಾರ್ವಜನಿಕ ರಸ್ತೆ ಮತ್ತು ಸ್ಥಳಗಳನ್ನು ಅಡೆತಡೆಮುಕ್ತವಾಗಿಡಲು ಸಹಕರಿಸುವಂತೆ ಆಯುಕ್ತರು ಮನವಿ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆಯ ಕಾರ್ಯಪಾಲಕ ಅಭಿಯಂತರರು (ಪರಿಸರ), ಪರಿಸರ ಅಭಿಯಂತರರು, ಆರೋಗ್ಯ ನಿರೀಕ್ಷಕರು ಹಾಗೂ ಮೇಲ್ವಿಚಾರಕರು ಉಪಸ್ಥಿತರಿದ್ದರು.
