ಅರ್ಹ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳನ್ನು ತಲುಪಿಸಿ: ಅರುಣ್ ಕುಮಾರ್ ಎಸ್

latha prabhukumar
2 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಅರ್ಹ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳನ್ನು ತಲುಪಿಸಿ: ಅರುಣ್ ಕುಮಾರ್ ಎಸ್

ಮೈಸೂರು.ಆಗಸ್ಟ್.27(ಕರ್ನಾಟಕ ವಾರ್ತೆ):-
ಸರ್ಕಾರ ಆರ್ಥಿಕವಾಗಿ ಹಿಂದುಳಿದವರ ಕುಟುಂಬಗಳನ್ನು ಸದೃಢವಾಗಿಸಲು ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದು, ಅರ್ಹ ಫಲಾನುಭವಿಗಳಿಗೆ ತಲುಪಿಸಿ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ಅರುಣ್ ಕುಮಾರ್ ಎಸ್ ಅವರು ತಿಳಿಸಿದರು.

ಅವರು ಇಂದು ಜಿಲ್ಲಾ ಪಂಚಾಯತ್ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು. ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳು ಮೃತವಾದ ನಂತರ ಅವರ ಖಾತೆಗೆ ಜಮೆಯಾಗಿರುವ ಗೃಹ ಲಕ್ಷ್ಮಿ ಹಣದ ವಿವರವನ್ನು ಸಭೆಗೆ ಒದಗಿಸುವಂತೆ ತಿಳಿಸಿದರು.

ಜಿಲ್ಲೆಯಲ್ಲಿ 15724 ಗೃಹಲಕ್ಷ್ಮಿ ಫಲಾನುಭವಿಗಳು ಮೃತವಾಗಿದ್ದು, ಅವರ ನಂತರ ಸದರಿ ಕುಟುಂಬಗಳಲ್ಲಿ ಅರ್ಹ ಫಲಾನುಭವಿಗಳಿದ್ದಲ್ಲಿ ಅವರಿಗೆ ಸೌಲಭ್ಯ ದೊರಕುವಂತೆ ಸಹಕರಿಸಬೇಕು ಇಲ್ಲಾವಾದಲ್ಲಿ ಸೌಲಭ್ಯ ತಡೆಹಿಡಿಯುವ ಕೆಲಸವಾಗಬೇಕು ಎಂದರು.

ಜಿಲ್ಲಾ ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಪ್ರೊ ಶಿವಕುಮಾರ್ ಅವರು ಮಾತನಾಡಿ ಜನನ- ಮರಣ ವಿವರ 21 ದಿನದೊಳಗೆ ಕುಟುಂಬ ಆ್ಯಪ್ ನಲ್ಲಿ ವರದಿಯಾಗುತ್ತದೆ. ಈ ಹಿನ್ನಲೆಯಲ್ಲಿ ಮರಣ ಹೊಂದಿದ ತಕ್ಷಣ ಗೃಹಲಕ್ಷ್ಮಿ ಫಲಾನುಭವಿಗಳಿಗೆ ನೀಡಲಾಗುವ ಸೌಲಭ್ಯವನ್ನು ತಡೆಹಿಡಿಯಬೇಕು ಎಂದರು‌.

ಜಿಲ್ಲಾ ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಹುಣಸೂರು ಬಸವಣ್ಣ ಅವರು ಮಾತನಾಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಗೃಹಲಕ್ಷ್ಷಿ ಯೋಜನೆಯ ಫಲಾನುಭವಿಗಳು ಯೋಜನೆಯ ತೊಂದರೆಗಳ ನಿವಾರಣೆಗಾಗಿ ಆಗಮಿಸಿದಾಗ ಅವರೊಂದಿಗೆ ಸೌಜನ್ಯದಿಂದ ವರ್ತಿಸಿ ಸಮಸ್ಯೆಯನ್ನು ಪರಿಹರಿಸಿ ಎಂದರು.

ಗ್ಯಾರೆಂಟಿ ಯೋಜನೆಗಳ ಪ್ರಾಧಿಕಾರದ ಸದಸ್ಯರಾದ ಸಾಮಾ ಯೋಗೇಶ್ ಅವರು ಮಾತನಾಡಿ ಗೃಹ ಲಕ್ಷ್ಮಿ ಯೋಜನೆಯಲ್ಲಿ ಮರಣ ಹೊಂದಿದ ಫಲಾನುಭವಿಗಳ ಕುಟುಂಬದಲ್ಲೇ ಸೂಕ್ತ ಅರ್ಹ ಮಹಿಳೆಯರಿದ್ದರೆ ಅದೇ ಪಡಿತರ ಚೀಟಿಯಲ್ಲಿ ಅವರನ್ನು ತಕ್ಷಣ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಬೇಕು. ಒಂದು ವೇಳೆ ಅರ್ಹ ಮಹಿಳೆಯರಿಲ್ಲದಿದ್ದರೆ, ಅಂತಹ ಕುಟುಂಬಗಳ ಸ್ಪಷ್ಟ ಮಾಹಿತಿಯನ್ನು ಸಿದ್ಧಪಡಿಸಿ ಸಲ್ಲಿಸಬೇಕು ಎಂದರು.

ಮರಣ ಹೊಂದಿದವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಿದ ನಂತರ, ಹೊಸದಾಗಿ ಅರ್ಹತೆ ಪಡೆದ ಕುಟುಂಬಸ್ಥರು ಅಥವಾ ಪರ್ಯಾಯ ಫಲಾನುಭವಿಗಳನ್ನು ಗುರುತಿಸಿ ಎಷ್ಟು ಜನರಿಗೆ ಪಾವತಿ ಮಾಡಲಾಗಿದೆ ಎಂಬ ವಿವರ ನೀಡುವಂತೆ ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್ ಅವರು ಮಾತನಾಡಿ ಗೃಹಲಕ್ಷ್ಮಿ ಫಲಾನುಭವಿಗಳು ಮೃತವಾದ ನಂತರವು ಅವರಿಗೆ ಜಮೆಯಾಗಿರುವ ಅಂದಾಜು 2.16 ಕೋಟಿ ಹಣವಿರುತ್ತದೆ. ಮೃತರಾದವರ ಖಾತೆಯ ವಹಿವಾಟು ಸ್ಥಗಿತಗೊಳಿಸಿ ಮರಣ ನಂತರ ಜಮೆಯಾಗಿರುವ ಹಣವನ್ನು ಹಿಂಪಡೆಯುವ ಕೆಲಸವಾಗಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಕರಿಗೌಡ ಬಿ, ಸದಸ್ಯರಾದ ಲಲಿತ, ಶಿವಣ್ಣ, ಅಬ್ದುಲ್ ಖಾದರ್, ಚೆಲುವರಾಜು,‌ ರಾಘು, ಕೆ. ಮಾರುತಿ, ಚಾಮರಾಜು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸವಿತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಾಗರಾಜು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು

Share This Article
Leave a Comment