ಪಬ್ಲಿಕ್ ಅಲರ್ಟ್ ನ್ಯೂಸ್:-ವಿಶ್ವ ವಿಖ್ಯಾತ ಮೈಸೂರು ದಸರಾ ಪ್ರಮುಖ ಆಕರ್ಷಣೆ ಜಂಬೂಸವಾರಿ – ಡಾ ಯತೀಂದ್ರ ಸಿದ್ದರಾಮಯ್ಯ
ಮೈಸೂರು ಆಗಸ್ಟ್ 26 (ಕರ್ನಾಟಕ ವಾರ್ತೆ) ವಿಶ್ವ ವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂಸವಾರಿ ಆಗಿದ್ದು, ಜಂಬೂ ಸವಾರಿಯಲ್ಲಿ ಭಾಗವಹಿಸುವ ಆನೆಗಳ ಗಜ ಪಯಣಕ್ಕೆ ಇಂದು ಚಾಲನೆ ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಯತೀಂದ್ರ ಸಿದ್ದರಾಮಯ್ಯ ಅವರು ತಿಳಿಸಿದರು.
ಇಂದು ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿ ಗ್ರಾಮದಲ್ಲಿ ದಸರಾ ಗಜಪಯಣ 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮೈಸೂರು ದಸರಾಕ್ಕೆ 400 ಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವಿದೆ. ನಾಡಹಬ್ಬ ದಸರಾ ನಮ್ಮ ಸಂಸ್ಕೃತಿ ಕಲೆ ಸಾಹಿತ್ಯ ವನ್ನು ಬಿಂಬಿಸುವ ಹಬ್ಬ. ದಸರಾ ವಿಶ್ವವಿಖ್ಯಾತ ವಾಗಿದೆ. ದಸರಾದಲ್ಲಿ ಪ್ರಮುಖ ಆಕರ್ಷಣೆ ಜಂಬೂಸವಾರಿ. ನಮ್ಮ ಗಜ ಪಡೆಯು ಜಂಬೂಸವಾರಿಯಲ್ಲಿ ಆನೆ ಅಂಬಾರಿಯನ್ನು ಹೊತ್ತು ಸಾಗುತ್ತದೆ. ಇಂದು ಆನೆಗಳನ್ನು ಮೈಸೂರಿಗೆ ಕರೆದುಕೊಂಡು ಹೋಗಿ 2 ತಿಂಗಳು ತರಬೇತಿ ನೀಡಲಾಗುತ್ತದೆ. ಅಲ್ಲಿ ಉತ್ತಮ ಪೌಷ್ಟಿಕ ಆಹಾರವನ್ನು ನೀಡಲಾಗುತ್ತದೆ. ಅಲ್ಲದೆ ವರ್ಷ ಪೂರ್ತಿ ಪೌಷ್ಠಿಕ ಆಹಾರ ನೀಡಿ ಆನೆಗಳ ಆರೋಗ್ಯ ತಪಾಸಣೆಯನ್ನು ಕಾಲ ಕಾಲಕ್ಕೆ ಮಾಡಲಾಗುತ್ತದೆ ಎಂದರು.
ಸುಮಾರು 6 ವರ್ಷಗಳ ಕಾಲ ಅಂಬಾರಿಯನ್ನು ಹೊತ್ತು ನಿವೃತ್ತಿ ಹೊಂದಿದ ಅಭಿಮನ್ಯು ಆನೆಗೆ ಇಂದು ಬೀಳ್ಕೊಡುಗೆ ನೀಡಲಾಗುತ್ತಿದೆ. ಅಭಿಮನ್ಯು ಆರೋಗ್ಯ ಯುತವಾಗಿ ನೂರಾರು ವರ್ಷ ಬದುಕಲಿ ಎಂದು ಹಾರೈಸುತ್ತೇನೆ. ಅರಣ್ಯದಂಚಿನ ರೈತರು ಸಾಗುವಳಿ ಮಾಡುತ್ತಿರುವ ಪ್ರದೇಶ ಹಾಗೂ ಮನೆ ಕಟ್ಟಿಕೊಂಡಿರುವ ಪ್ರದೇಶ ಅರಣ್ಯ ಇಲಾಖೆಗೆ ಸೇರಿದ್ದು ಎಂದು ತೊಂದರೆ ಆಗುತ್ತಿರುವ ಕುರಿತು ಹುಣಸೂರು ಶಾಸಕರಾದ ಜಿ ಡಿ ಹರೀಶ್ ಗೌಡ ಅವರು ಗಮನ ಸೆಳೆದಿದ್ದು, ಈ ಬಗ್ಗೆ ಕಂದಾಯ ಮತ್ತು ಅರಣ್ಯ ಇಲಾಖೆಯ ಜಂಟಿ ಸರ್ವೇ ಮಾಡಿ ಪರಿಹಾರ ಕಂಡುಕೊಳ್ಳಲಾಗುವುದು. ಲಕ್ಷ್ಮಣ ತೀರ್ಥ ನದಿಗೆ ಚರಂಡಿ ನೀರು ಸೇರದಂತೆ ತಡೆಯಲು ಒಳಚರಂಡಿ ವ್ಯವಸ್ಥೆ ಮಾಡಲು ಅನುಧಾನ ನೀಡಿ ಕ್ರಮ ವಹಿಸಲಾಗುವುದು ಎಂದರು.
ಮಾನವ ಮತ್ತು ಪ್ರಾಣಿ ಸಂಘರ್ಷ ತಡೆಯಲು ಬ್ಯಾರಿಕೇಡ್ ವ್ಯವಸ್ಥೆ ಹಾಗೂ ಬೇಲಿ ವ್ಯವಸ್ಥೆ ಮಾಡಲಾಗಿದೆ. ಪ್ರಾಣಿಗಳ ಜೊತೆ ಸೌಹಾರ್ದತೆಯಿಂದ ವರ್ತಿಸಬೇಕು. ಪ್ರಾಣಿಗಳಿಗೆ ತೊಂದರೆ ನೀಡದೇ ಕಾಡಿನಲ್ಲಿ ಸ್ವತಂತ್ರ್ಯವಾಗಿ ಇರಲು ಬಿಡಬೇಕು. ಈ ಬಾರಿ ದಸರಾದಲ್ಲಿ ಏರ್ ಶೋ ಮಾಡಲು ಕ್ರಮ ವಹಿಸಲಾಗುವುದು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ ಡಿ ಹರೀಶ್ ಗೌಡ ಅವರು ಮಾತನಾಡಿ 400 ವರ್ಷಗಳ ಇತಿಹಾಸ ಇರುವ ಮೈಸೂರು ದಸರಾ ಒಂದು ವಿಶಿಷ್ಟ ಕಾರ್ಯಕ್ರಮ, ಅಂದಿನ ಮಹಾರಾಜರ ಕಾಲದಿಂದ ಇಂದಿನ ಪ್ರಜಾಪ್ರಭುತ್ವದ ಕಾಲದಲ್ಲಿಯೂ ದಸರಾವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ದಸರಾವು ನಮ್ಮ ಹುಣಸೂರು ತಾಲೂಕಿನಿಂದ ಗಜಪಯಣದ ಮೂಲಕ ಆರಂಭವಾಗುತ್ತದೆ. ಇದು ಹುಣಸೂರಿನ ಜನತೆಗೆ ಹೆಮ್ಮೆಯ ವಿಷಯ. ಕಳೆದ ಹಲವು ವರ್ಷಗಳಿಂದ ಅಂಬಾರಿ ಹೊತ್ತಿದ್ದ ಅಭಿಮನ್ಯುಗೆ ಬೀಳ್ಕೊಡುಗೆ ನೀಡಲಾಗುತ್ತಿದೆ. ಆನೆಗಳಲ್ಲಿ ಭೀಮ, ಮಹೇಂದ್ರ, ಅಭಿಮನ್ಯು ಎಂದರೆ ಕ್ರೇಜ್ ಆನೆಗಳು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿವೆ ಎಂದರು.
ಈ ಬಾರಿ ಬರ ಬಂದಿದ್ದು, ಹುಣಸೂರು ತಾಲ್ಲೂಕಿನಲ್ಲಿ ಕೆರೆ ಕಟ್ಟೆಗಳಿಗೆ ನೀರು ತುಂಬಿಸಲು ಕಷ್ಟವಾಗಿದೆ. ಹುಣಸೂರು ತಾಲ್ಲೂಕಿನಲ್ಲಿ ಹೆಚ್ಚಿನ ಬೆಳೆ ನಷ್ಟವಾಗಿದೆ. ಹುಣಸೂರು ತಾಲ್ಲೂಕನ್ನು ಬರ ಪೀಡಿತ ತಾಲ್ಲೂಕು ಆಗಿ ಘೋಷಣೆ ಮಾಡಬೇಕು. ಕಾಡಂಚಿನ ಪ್ರದೇಶಗಳಲ್ಲಿ ರೈತರು ವ್ಯವಸಾಯ ಮಾಡುತ್ತಿದ್ದು, ಈ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದು ಎಂದು ನೋಟಿಸ್ ಗಳನ್ನು ನೀಡಲಾಗುತ್ತಿದೆ. ಆದ್ದರಿಂದ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೇ ಮಾಡಿ ಅರಣ್ಯ ಗಡಿಯನ್ನು ಗುರುತಿಸಬೇಕು. ರೈತರಿಗೆ ತೊಂದರೆ ಆಗದಂತೆ ಸರ್ಕಾರ ಕ್ರಮ ವಹಿಸಬೇಕು. ಕಾಡುಪ್ರಾಣಿಗಳಿಂದ ಬೆಳೆ ನಷ್ಟ ಆದರೆ ಪರಿಹಾರವನ್ನು ನೀಡಬೇಕು ಎಂದು ಮನವಿ ಮಾಡಿದರು. ಲಕ್ಷ್ಮಣ ತೀರ್ಥ ನದಿ ಕಲುಷಿತವಾಗುತ್ತಿದ್ದು, ಒಳ ಚರಂಡಿ ನೀರನ್ನು ಲಕ್ಷ್ಮಣ ತೀರ್ಥ ನದಿಗೆ ಬಿಡದಂತೆ ಕ್ರಮವಹಿಸಬೇಕು ಎಂದರು.
ದಸರಾ ಗಜಪಯಣದ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು. ಆನೆಗಳ ಮಾವುತರಿಗೆ ಹಾಗೂ ಕಾವಡಿಗಳಿಗೆ ಸನ್ಮಾನ ಮಾಡಲಾಯಿತು. ಅರ್ಜುನ ಪ್ರಶಸ್ತಿಯನ್ನು ಅಭಿಮನ್ಯು ಮಾವುತ ವಸಂತ ಹಾಗೂ ಕಾವಡಿ ರಾಘು ಜೆ ಕೆ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅರಣ್ಯ ವಸತಿ ವಿಹಾರಧಾಮಗಳ ಅಧ್ಯಕ್ಷರು ಹಾಗೂ ಹೆಚ್ ಡಿ ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಅನಿಲ್ ಚಿಕ್ಕಮಾದು, ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ ರವಿಶಂಕರ್, ಕರ್ನಾಟಕ ಮೃಗಾಲಯದ ಅಧ್ಯಕ್ಷರಾದ ರಂಗಸ್ವಾಮಿ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾದ ರಾಮಪ್ಪ, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷರಾದ ಪುಷ್ಪ ಅಮರನಾಥ್, ಪ್ರಾದೇಶಿಕ ಆಯುಕ್ತರಾದ ನಿತೀಶ್ ಪಾಟೀಲ್, ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳಾದ ಎಸ್ ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಲ್ಲಿಕಾರ್ಜುನ ಬಾಲದಂಡಿ, ಡಿ ಸಿ ಎಫ್ ಪ್ರಭುಗೌಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
