ಪಬ್ಲಿಕ್ ಅಲರ್ಟ್ ನ್ಯೂಸ್:-ಭೂಮಿ ಕಳೆದುಕೊಂಡು ೨೦ ವರ್ಷವಾದರೂ ದಕ್ಕದ ಪರಿಹಾರ
ಕೆಐಎಡಿಬಿ ಅಧಿಕಾರಿಗಳ ವಿರುದ್ಧ ರೈತಸಂಘ, ಹಸಿರು ಸೇನೆ ಪ್ರತಿಭಟನೆ
ಮೇ.೩೦ರ ತನಕ ಗಡುವು, ನಂತರ ಬಾರುಕೋಲು ಚಳವಳಿ ಎಚ್ಚರಿಕೆ*
ಮೈಸೂರು : ಕೈಗಾರಿಕಾ ಅಭಿವೃದ್ಧಿಗೆ ರೈತರಿಂದ ಭೂಮಿ ವಶಪಡಿಸಿಕೊಂಡು ಪರಿಹಾರವಾಗಿ ಅಭಿವೃದ್ಧಿ ಪಡಿಸಿದ ನಿವೇಶನ ನೀಡಲು ಮೀನಾಮೇಷ ಎಣಿಸುತ್ತಿರುವ ಕೆಐಎಡಿಬಿ ವಿರುದ್ಧ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಸಯ್ಯಾಜಿರಾವ್ ರಸ್ತೆಯಲ್ಲಿನ ಕೆಐಎಡಿಬಿ ಕಚೇರಿ ಎದುರು ಕರ್ನಾಟಕ ರಾಜ್ಯ ರೈತಸಂಘ, ಹಸಿರು ಸೇನೆಯ ಪದಾಧಿಕಾರಿಗಳು ರಾಜ್ಯಾಧ್ಯಕ್ಷರಾದ ವಿದ್ಯಾಸಾಗರ್ ನೇತೃತ್ವದಲ್ಲಿ ಜಮಾಯಿಸಿ, ಕೆಐಎಡಿಬಿ ಅಧಿಕಾರಿಗಳ ನಿರ್ಲಕ್ಷö್ಯತನ, ಬೇಜವಾಬ್ದಾರಿತನದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸದರು.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷರಾದ ವಿದ್ಯಾಸಾಗರ್ ಮಾತನಾಡಿ, ೨೦ ವರ್ಷಗಳ ಹಿಂದೆ ನಂಜನಗೂಡು ತಾಲ್ಲೂಕು. ವರುಣಾ ಹೋಬಳಿ ಇಮ್ಮಾವು ಗ್ರಾಮದ ಸರ್ವೆ ನಂ. ೪೮೬ರಲ್ಲಿ ಇಮ್ಮಾವು ರಘು ಎಂಬ ರೈತನ ಒಂದು ಎಕರೆ ಜಮೀನನ್ನು ಕೈಗಾರಿಕಾ ಅಭಿವೃದ್ಧಿ ಮಂಡಳಿ ವಶಪಡಿಸಿಕೊಂಡಿತ್ತು. ಜಮೀನು ಕಳೆದುಕೊಂಡು ಬೀದಿಗೆ ಬಿದ್ದ ರೈತನಿಗೆ ಅಭಿವೃದ್ಧಿ ಪಡಿಸಿದ ನಿವೇಶನ ನೀಡುವುದಾಗಿ ಕೆಐಎಡಿಬಿ ಅಧಿಕಾರಿಗಳು ಭರವಸೆ ನೀಡಿದರೂ ನಿವೇಶನ ಕೊಡಲಿಲ್ಲ, ನಂತರ ರೈತ ಇಮ್ಮವು ರಘು ನ್ಯಾಯಾಲಯದ ಮೆಟ್ಟಿಲು ಏರಿದರು. ನ್ಯಾಯಾಲಯ ರಘು ಅವರಿಗೆ ಅಭಿವೃದ್ಧಿಪಡಿಸಿದ ನಿವೇಶನ ನೀಡುವಂತೆ ಆದೇಶ ನೀಡಿ ಒಂದು ವರ್ಷವಾದರೂ ಅಧಿಕಾರಿಗಳು, ರೈತ ರಘು ಅವರಿಗೆ ಕೇವಲ ನಿವೇಶನ ಮಂಜೂರು ಮಾಡಿರುವ ದಾಖಲೆ ನೀಡಿ ಕೈ ತೊಳೆದುಕೊಂಡಿದ್ದಾರೆ. ಇಂದಿನ ತನಕವೂ ಅವರಿಗೆ ನಿವೇಶನವನ್ನು ಅಳತೆ ಮಾಡಿಸಿ ಹದ್ದುಬಸ್ತು ಮಾಡಿಕೊಟ್ಟಿರುವುದಿಲ್ಲ, ಜತೆಗೆ ನೋಂದಣಿಯೂ ಆಗಿಲ್ಲ, ಇಂದು ಕೆಐಎಡಿಬಿ ಜಂಟಿ ನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ಮಾಡಿದಾಗ, ಅವರು ಮೇ.೨೭ರ ತನಕ ಸಮಯಾವಕಾಶ ಕೋರಿದ್ದಾರೆ. ನಾವು ಮೇ.೩೦ ರವರೆಗೂ ಅವಕಾಶ ನೀಡುತ್ತೇವೆ. ಆ ದಿನವೂ ರೈತ ಇಮ್ಮಾವು ರಘು ಅವರಿಗೆ ನಿಗದಿ ಮಾಡಿರುವ ನಿವೇಶನವನ್ನು ಅಳತೆ ಮಾಡಿಸಿ, ಹದ್ದುಬಸ್ತು ಮಾಡಿಕೊಟ್ಟು, ನೋಂದಣಾಧಿಕಾರಿಗಳ ಕಚೇರಿಯಲ್ಲಿ ರಿಜಿಸ್ಟೆçÃಷನ್ ಮಾಡಿಸಿಕೊಡಬೇಕು. ಇಲ್ಲಿದಿದ್ದಲ್ಲಿ ಇದೇ ಕಚೇರಿ ಎದುರು ಸಾವಿರಾರು ರೈತರೊಂದಿಗೆ ಬಾರುಕೋಲು ಚಳವಳಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಭೂಮಿ ಕಳೆದುಕೊಂಡ ರೈತ ಇಮ್ಮಾವು ರಘು ಮಾತನಾಡಿ, ೨೦ ವರ್ಷದ ಹಿಂದೆ ನನ್ನ ಒಂದು ಎಕರೆ ಭೂಮಿಯನ್ನು ಕೈಗಾರಿಕಾ ಅಭಿವೃದ್ಧಿ ಮಂಡಳಿಯವರು ಬಲವಂತವಾಗಿ ವಶಪಡಿಸಿಕೊಂಡಿದ್ದಾರೆ. ಭೂಮಿ ಕಳೆದುಕೊಂಡು ನಾನು ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದೇನೆ. ಈಗ ನನಗೆ ೬೦ ವರ್ಷ ವಯಸ್ಸಾಗಿದೆ. ದುಡಿಯುವ ಶಕ್ತಿ ಇಲ್ಲ, ನನಗೆ ಗಂಡು ಮಕ್ಕಳಿಲ್ಲ, ಒಬ್ಬ ಹೆಣ್ಣು ಮಗಳು ಇದ್ದಾಳೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರದಲ್ಲಿಯೇ ನನಗೆ ಅನ್ಯಾಯವಾಗಿದೆ. ಕೂಡಲೇ ಅವರು ಈ ವಿಷಯವನ್ನು ಗಂಭಿರವಾಗಿ ಪರಿಗಣಿಸಿ ಕೆಐಎಡಿಬಿ ಅಧಿಕಾರಿಗಳಿಗೆ ತಿಳಿವಳಿಗೆ ಹೇಳಿ ನನಗೆ ನಿಗದಿ ಮಾಡಿರುವ ನಿವೇಶನವನ್ನು ನೋಂದಣಿ ಮಾಡಿಸಿಕೊಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತಸಂಘ, ಹಸಿರು ಸೇನೆಯ ಮೈಸೂರು ಜಿಲ್ಲಾ ಅಧ್ಯಕ್ಷರಾದ ಸತೀಶ್, ನಗರ ಅಧ್ಯಕ್ಷ ಕುಮಾರ್ ಬಸಪ್ಪ, ಜಿಲ್ಲಾ ಕಾರ್ಯದರ್ಶಿ ಸೈಯದ್ ಮುತಿ-ಉರ್ ರೆಹಮಾನ್, ಮಾಧ್ಯಮ ಕಾರ್ಯದರ್ಶಿ ಬಿಪಿನ್, ನಂಜನಗೂಡು ತಾಲ್ಲೂಕು ಕಾರ್ಯದರ್ಶಿ ದೇವರಾಜು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆನಂದ್ ಆಯರಹಳ್ಳಿ, ಹಿರಿಯ ಮುಖಂಡ ಹುಚ್ಚಣ್ಣ ಕೆ.ಎಸ್.ಹುಂಡಿ ಮತ್ತಿತರರು ಇದ್ದರು.
