ಪಬ್ಲಿಕ್ ಅಲರ್ಟ್ ನ್ಯೂಸ್:-ಸೋಲಾರ್ ರೂಫ್‌ಟಾಪ್ ಯೋಜನೆ ಜಾಗೃತಿ ಅಗತ್ಯ: ನಿತೇಶ್ ಪಾಟೀಲ್
- ಪಿಎಂ ಸೂರ್ಯಘರ್ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಸೆಸ್ಕ್ ಎಂಡಿ ಸೂಚನೆ
ಮೈಸೂರು, ಮೇ 19, 2026 :
ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದ್ದು, ಹೆಚ್ಚಿನ ಗ್ರಾಹಕರು ಯೋಜನೆಯ ಸೌಲಭ್ಯ ಪಡೆಯುವಂತೆ ಅಧಿಕಾರಿಗಳು ಹಾಗೂ ಪೂರೈಕೆದಾರರು(ವೆಂಡರ್‌ಗಳು) ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಪ್ರಾದೇಶಿಕ ಆಯುಕ್ತರು ಹಾಗೂ ಸೆಸ್ಕ್ ಪ್ರಭಾರ ವ್ಯವಸ್ಥಾಪಕ ನಿರ್ದೇಶಕರಾದ ನಿತೇಶ್ ಪಾಟೀಲ್ ಸೂಚಿಸಿದರು.
ಮೈಸೂರಿನ ವಿಜಯನಗರ ಎರಡನೇ ಹಂತದಲ್ಲಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ಪ್ರಧಾನ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಪೂರೈಕೆದಾರರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
“2024ರಲ್ಲಿ ಯೋಜನೆ ಆರಂಭವಾಗಿದ್ದರೂ ಈವರೆಗೂ ನಿರೀಕ್ಷಿತ ಅರ್ಜಿಗಳು ಬಂದಿಲ್ಲ. ವಿದ್ಯುತ್ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸೋಲಾರ್ ರೂಫ್ ಟಾಪ್ ಅಳವಡಿಸಿಕೊಂಡರೆ ಗ್ರಾಹಕರಿಗೆ ವಾರ್ಷಿಕವಾಗಿ ಅಂದಾಜು ಕನಿಷ್ಠ 25 ಸಾವಿರ ರೂ. ಉಳಿತಾಯವಾಗುವ ಸಾಧ್ಯತೆ ಇದೆ. ಯೋಜನೆಯ ಅನುಷ್ಠಾನಕ್ಕೆ ಸರ್ಕಾರದಿಂದ ಸಬ್ಸಿಡಿ ಸೌಲಭ್ಯವಿದ್ದು, ಯೋಜನೆ ಗ್ರಾಹಕರಿಗೆ ಲಾಭದಾಯಕವಾಗಿದೆ. ಈ ಬಗ್ಗೆ ಜನರಿಗೆ ಸಮರ್ಪಕ ಮಾಹಿತಿ ನೀಡುವ ಮೂಲಕ ಹೆಚ್ಚು ಗ್ರಾಹಕರು ಯೋಜನೆಯ ಬಳಕೆಗೆ ಮುಂದಾಗುವಂತೆ ಜಾಗೃತಿ ಮೂಡಿಸಬೇಕು” ಎಂದು ಹೇಳಿದರು.
“ಗ್ರಾಹಕರಿಗೆ ವೆಂಡರ್‌ಗಳ ಮಾಹಿತಿ ಸುಲಭವಾಗಿ ದೊರೆಯುವ ವ್ಯವಸ್ಥೆ ಆಗಬೇಕಿದೆ. ಇದರಿಂದಾಗಿ ಗ್ರಾಹಕರು ತಮ್ಮ ಅಗತ್ಯತೆ ಮತ್ತು ಅನುಕೂಲಕ್ಕೆ ತಕ್ಕಂತೆ ವೆಂಡರ್‌ಗಳ ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಮತ್ತೊಂದೆಡೆ ಸೋಲಾರ್ ರೂಫ್ ಟಾಪ್ ಅಳವಡಿಕೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ ಕೂಡಲೇ ಸೆಸ್ಕ್ ಅಧಿಕಾರಿಗಳು ಅರ್ಜಿ ಪರಿಶೀಲಿಸುವ ಪ್ರಕ್ರಿಯೆ ತ್ವರಿತವಾಗಿ ನಡೆಯಬೇಕು. ಕೆಲವು ಗ್ರಾಹಕರು ವೆಂಡರ್ ಆಯ್ಕೆ ಮಾಡದೇ ಇರುವುದರಿಂದ ಅವರಿಗೆ ಯೋಜನೆ ಕುರಿತು ಸಮರ್ಪಕ ಅರಿವು ಇಲ್ಲದಿರುವುದು ಕಂಡು ಬರುತ್ತಿದೆ. ಅಂತಹ ಗ್ರಾಹಕರನ್ನು ಸಂಪರ್ಕಿಸಿ ಯೋಜನೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು” ಎಂದು ಸೂಚಿಸಿದರು.
“ಪಾಲಿಕೆ, ಜಿಲ್ಲಾಡಳಿತ ಹಾಗೂ ಇತರೆ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಯೋಜನೆ ಜಾರಿಗೊಳಿಸಬೇಕು. ಸಂಭಾವ್ಯ ಗ್ರಾಹಕರನ್ನು ಭೇಟಿಯಾಗಿ, ವೆಂಡರ್‌ಗಳು ಯೋಜನೆಯ ಲಾಭಗಳ ಬಗ್ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಬೇಕು. ವೆಂಡರ್‌ಗಳು ಅರ್ಜಿ ಪರಿಶೀಲನೆಯಾದ ಐದು ದಿನಗಳಲ್ಲಿ ಸ್ಮಾರ್ಟ್ ಮೀಟರ್ ಸೇರಿದಂತೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಮುಗಿಸಬೇಕು. ಸೋಲಾರ್ ರೂಫ್ ಟಾಪ್ ಅಳವಡಿಸಿಕೊಳ್ಳಲು ಗ್ರಾಹಕರಿಗೆ ವಿಶ್ವಾಸ ಮೂಡಿಸಬೇಕು” ಎಂದರು.
ಸಭೆಯಲ್ಲಿ ಸೆಸ್ಕ್ ತಾಂತ್ರಿಕ ನಿರ್ದೇಶಕರಾದ ಶರಣಮ್ಮ ಎಸ್. ಜಂಗಿನ, ಮುಖ್ಯ ಇಂಜಿನಿಯರ್ ಎಲ್. ಲೋಕೇಶ್, ಅಧೀಕ್ಷಕ ಇಂಜಿನಿಯರ್‌ಗಳಾದ ಸುನೀಲ್ ಕುಮಾರ್, ಸೋಮಶೇಖರ್, ಪ್ರಧಾನ ವ್ಯವಸ್ಥಾಪಕರಾದ ಎಚ್.ಆರ್. ದಿನೇಶ್, ಆರ್. ರಾಮಸ್ವಾಮಿ ಇತರರಿದ್ದರು.
ಬಾಕ್ಸ್
ಯೋಜನೆ ಪ್ರಚಾರಕ್ಕೆ ‘ಸೋಲಾರ್ ತಿಂಗಳು’ ಆಚರಣೆ
ಸಾರ್ವಜನಿಕರಲ್ಲಿ ಪ್ರಧಾನಮಂತ್ರಿ ಸೂರ್ಯಘರ್ ಯೋಜನೆ ಕುರಿತಂತೆ ಹೆಚ್ಚಿನ ಜಾಗೃತಿ ಮೂಡಿಸಿ, ಯೋಜನೆಗೆ ಪ್ರಚಾರ ಮೂಡಿಸುವ ಉದ್ದೇಶದಿಂದ 2026ರ ಮೇ ತಿಂಗಳನ್ನು ʼಸೋಲಾರ್ ತಿಂಗಳು’ ಆಚರಿಸಲಾಗುತ್ತಿದೆ. ಬೇಸಿಗೆಯಲ್ಲಿ ಸೂರ್ಯ ಕಿರಣದ ಪ್ರಮಾಣ ಹೆಚ್ಚಿರುವ ಹಿನ್ನೆಲೆ, ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ನಿರ್ದೇಶನದಂತೆ ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಈ ಅಭಿಯಾನ ನಡೆಸಲಾಗುತ್ತಿದೆ. ಸೋಲಾರ್ ತಿಂಗಳು ಆಚರಣೆ ಮೂಲಕ ಪಿಎಂ ಸೂರ್ಯಘರ್ ಯೋಜನೆಗೆ ಸಂಬಂಧಿಸಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳ ನೋಂದಣಿ, ಗರಿಷ್ಠ ಸಂಖ್ಯೆಯ ಸೋಲಾರ್ ರೂಫ್ ಟಾಪ್ ಘಟಕಗಳ ಅನುಷ್ಠಾನ, ಸ್ಥಳ ಪರಿಶೀಲನೆ ಕಾರ್ಯವನ್ನು ಚುರುಕುಗೊಳಿಸುವುದು ಹಾಗೂ ಹೊಸ ವೆಂಡರ್‌ಗಳ ನೋಂದಣಿ ಅಂಶಗಳ ಮೇಲೆ ವಿಶೇಷ ಒತ್ತು ನೀಡಲು ಸೂಚಿಸಲಾಗಿದೆ. ಪಿಎಂ ಸೂರ್ಯ ಘರ್ ಯೋಜನೆ ಕುರಿತ ಮಾಹಿತಿಗಾಗಿ ಹೆಲ್ಪ್ ಡೆಸ್ಕ್ ಸಂಖ್ಯೆ 9448994706 ಅಥವಾ ಹತ್ತಿರದ ಸೆಸ್ಕ್ ಕಚೇರಿಯನ್ನು ಸಂಪರ್ಕಿಸಬಹುದು.
