ಪಬ್ಲಿಕ್ ಅಲರ್ಟ್ ನ್ಯೂಸ್:-ಹೆಣ್ಣುಮಕ್ಕಳು ತಮ್ಮೊಳಗಿನ ಅಗಾಧ ಶಕ್ತಿಯನ್ನು ಗುರುತಿಸಿಕೊಳ್ಳಬೇಕು: ಚುಕ್ಕಿ ನಂಜುಂಡಸ್ವಾಮಿ
ಮೈಸೂರು, ಸೆ. 22 (ಕರ್ನಾಟಕ ವಾರ್ತೆ ):-
ಹೆಣ್ಣುಮಕ್ಕಳಿಗೆ ತಮ್ಮ ಜೀವನವನ್ನು ರೂಪಿಸಿಕೊಂಡು ಆರ್ಥಿಕವಾಗಿ ಸದೃಢರಾಗುವ ಆಗಾಧ ಶಕ್ತಿ ಹೊಂದಿರುತ್ತಾರೆ. ಜೀವನದಲ್ಲಿ ಗುರಿ ನಿಗಧಿಪಡಿಸಿಕೊಂಡು ಉನ್ನತ ಸಾಧನೆ ಮಾಡಿ
ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಅಧ್ಯಕ್ಷೀಯ ಮಂಡಳಿ ಸದ್ಯಸರು ಚುಕ್ಕಿ ನಂಜುಂಡಸ್ವಾಮಿ ಅವರು ಹೇಳಿದರು.
ಇಂದು ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ವತಿಯಿಂದ ಮುಕ್ತ ಸಭಾಂಗಣದಲ್ಲಿ ಸಾಂಸ್ಕೃತಿಕ ವೇದಿಕೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜ ಅಥವಾ ಕುಟುಂಬ ಏನೇ ಹೇಳಿದರೂ, ಹೆಣ್ಣುಮಕ್ಕಳು ತಮ್ಮೊಳಗಿನ ಅಗಾಧವಾದ ಶಕ್ತಿಯನ್ನು ಗುರುತಿಸಿಕೊಳ್ಳಬೇಕು. ಕೇವಲ ಪದವಿ ಮುಗಿಸಿ ಮದುವೆಯಾಗಿ ಕುಟುಂಬದ ಸೇವೆಯಲ್ಲೇ ಜೀವನ ಕಳೆದುಕೊಳ್ಳುವುದಕ್ಕಿಂತ ಹೆಚ್ಚಾಗಿ, ತಮ್ಮ ಆಸಕ್ತಿ ಇರುವ ವಿಭಾಗದಲ್ಲಿ ಕುತೂಹಲಗಳ ಬೆನ್ನತ್ತಿ ಸಾಗಬೇಕು ಎಂದರು.
ಕೊನೆಯವರೆಗೂ ನಮ್ಮೊಂದಿಗೆ ಉಳಿಯುವುದು ನಾವು ಗಳಿಸಿದ ಜ್ಞಾನ ಮತ್ತು ಅನುಭವ ಮಾತ್ರ. ಅದೇ ನಮ್ಮನ್ನು ಸಮಾಜದಲ್ಲಿ ಸ್ವಾವಲಂಬಿಯಾಗಿ ಎದ್ದು ನಿಲ್ಲುವಂತೆ ಮಾಡುತ್ತದೆ.
ಕಾಲೇಜಿನ ಎನ್ಎಸ್ಎಸ್, ಎನ್ಸಿಸಿ, ಕ್ರೀಡೆ, ಸ್ಕೌಟ್ಸ್ ಅಂಡ್ ಗೈಡ್ಸ್ ಹಾಗೂ ರೆಡ್ ಕ್ರಾಸ್ನಂತಹ ಚಟುವಟಿಕೆಗಳಲ್ಲಿ ವಿದ್ಯಾರ್ಥಿನಿಯರು ಸಕ್ರಿಯವಾಗಿ ಪಾಲ್ಗೊಂಡು ತಮ್ಮ ವ್ಯಕ್ತಿತ್ವವನ್ನು ಸಮಗ್ರವಾಗಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಖ್ಯಾತ ಗಾಯಕ ಹರ್ಷ ಅವರು ಮಾತನಾಡಿ ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ ಎಂಬಂತೆ ಮಹಿಳೆಯರನ್ನು ಗೌರವಿಸುವ ಸ್ಥಳದಲ್ಲಿ ದೇವತೆಗಳು ನೆಲೆಸುತ್ತಾರೆ. ಹೆಣ್ಣುಮಕ್ಕಳು ವಿದ್ಯಾಭ್ಯಾಸ ಮಾಡುವ ಈ ಪವಿತ್ರ ಸಂಸ್ಥೆಯಾಗಿದೆ ಎಂದು ಹೇಳಿದರು.
ಪ್ರತಿಯೊಬ್ಬರೂ ಜೀವನದಲ್ಲಿ ತಮ್ಮ ತಾಯಿ, ತಂದೆ ಮತ್ತು ವಿದ್ಯೆ-ಬುದ್ಧಿ ಕಲ್ಪಿಸಿದ ಗುರುಗಳನ್ನು ಸದಾ ಸ್ಮರಿಸಬೇಕು. ಹೆತ್ತವರ ತ್ಯಾಗ ಹಾಗೂ ಮಾರ್ಗದರ್ಶನ ನೀಡಿದ ಗುರುಗಳಿಗೆ ಸದಾ ಋಣಿಯಾಗಿರಬೇಕು ಎಂದರು.
ಶಿಕ್ಷಣ ಎಂದರೆ ಬರಿ ಜ್ಞಾನವಲ್ಲ, ಗಳಿಸಿದ ವಿದ್ಯೆಯನ್ನು ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳುತ್ತೇವೆ ಎಂಬುದು ‘ಬುದ್ಧಿ’ಯಾಗಿದೆ. ಕಲೆ, ಕ್ರೀಡೆಗಳು ಮನಸ್ಸು ಮತ್ತು ದೇಹವನ್ನು ಸಶಕ್ತಗೊಳಿಸುತ್ತವೆ ಎಂದು ತಿಳಿಸಿದರು.
ನಮ್ಮ ಸಂಸ್ಕೃತಿ, ಜಾನಪದ ಕಲೆ, ನಾಡು, ನುಡಿ ಹಾಗೂ ರೈತರು ಮತ್ತು ಯೋಧರನ್ನು ಸದಾ ಗೌರವಿಸಬೇಕು. “ಧರ್ಮೋ ರಕ್ಷತಿ ರಕ್ಷಿತಃ” ಎಂಬಂತೆ ಸನ್ಮಾರ್ಗದಲ್ಲಿ ಸಾಗಿದರೆ ಧರ್ಮವೇ ನಮ್ಮನ್ನು ಕಾಯುತ್ತದೆ ಎಂದರು.
ಅಂತರಾಷ್ಟ್ರೀಯ ಕ್ರೀಡಾಪಟು ಹಾಗೂ ನಿವೃತ್ತ ಕಂದಾಯ ನಿರೀಕ್ಷಕ ಯೋಗೇಂದ್ರ ಎಂ ಅವರು ಮಾತನಾಡಿ ಕ್ರೀಡೆಗಳು ಕೇವಲ ಆಟ ಅಥವಾ ಹವ್ಯಾಸಗಳಲ್ಲ, ಅವು ನಮ್ಮ ದಿನನಿತ್ಯದ ಜೀವನಶೈಲಿಯ ಒಂದು ಪ್ರಮುಖ ಭಾಗವಾಗಿವೆ ಎಂದರು.
ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೇಹದ ಕ್ಯಾಲೋರಿಗಳು ಕರಗಿ, ಸ್ನಾಯುಗಳು ಹಾಗೂ ಮೂಳೆಗಳು ಬಲಗೊಳ್ಳುತ್ತವೆ. ಜೊತೆಗೆ ನಿಯಮಿತ ವ್ಯಾಯಾಮವು ಹೃದಯವನ್ನು ಆರೋಗ್ಯವಾಗಿಡಲು ಮತ್ತು ಕಾಯಿಲೆಗಳಿಂದ ರಕ್ಷಿಸಲು ನೆರವಾಗುತ್ತದೆ ಎಂದು ಹೇಳಿದರು.
ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಪ್ರಾಂಶುಪಾಲರಾದ ಡಾ. ರೇಣುಕಾ ಬಾಯಿ ವಿ. ಅವರು ಮಾತನಾಡಿ ಸಾಧನೆಗೆ ಬಡತನ, ಜಾತಿ ಅಥವಾ ಧರ್ಮಗಳು ಎಂದಿಗೂ ಅಡ್ಡಿಯಾಗುವುದಿಲ್ಲ. ವಿದ್ಯಾರ್ಥಿನಿಯರು ತಮ್ಮದೇ ಆದ ನಿರ್ದಿಷ್ಟ ಗುರಿಯನ್ನು ಹೊಂದಿಸಿಕೊಂಡು, ಸತತ ಪರಿಶ್ರಮ ಹಾಗೂ ದೃಢ ಸಂಕಲ್ಪದಿಂದ ಶ್ರಮಿಸಿದರೆ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಸಂಚಾಲಕರು, ಐಕ್ಯೂಎಸಿ ಡಾ. ಮುತ್ತುರಾಜ ಎಸ್, ಖಜಾಂಚಿ ಡಾ. ಶಿಲ್ಪ ಹೆಚ್ ಆರ್ ,ಸಂಚಾಲಕರು ರಜನಿ ಎಂ ಎನ್ , ಪತ್ರಾಂಕಿತ ವ್ಯವಸ್ಥಾಪಕರು ಲಲಿತಕುಮಾರಿ, ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
