ಪಬ್ಲಿಕ್ ಅಲರ್ಟ್ ನ್ಯೂಸ್:-ಯುವ ಶಕ್ತಿ ಉತ್ತಮ ಸಮಾಜ ಕಟ್ಟುವ ಕನಸು ಕಾಣಿ: ಯತೀಂದ್ರ ಸಿದ್ದರಾಮಯ್ಯ
ಮೈಸೂರು,ಸೆ.28(ಕರ್ನಾಟಕ ವಾರ್ತೆ):-
ಯುವ ಶಕ್ತಿ ದೇಶದ ಬಹು ದೊಡ್ಡ ಶಕ್ತಿ. ಯುವಕರು ಉತ್ತಮ ಸಮಾಜ ಕಟ್ಟುವ ಕನಸು ಕಾಣಬೇಕು. ಕನಸನ್ನು ಗುರಿ ಮಾಡಿಕೊಂಡು ಸಾಧನೆ ಮಾಡಬೇಕು ಎಂದು ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ: ಯತೀಂದ್ರ ಸಿದ್ದರಾಮಯ್ಯ ಅವರು ತಿಳಿಸಿದರು.
ಅವರು ಇಂದು ಕುವೆಂಪು ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಹಿನ್ನಲೆ ಗಾಯಕ ವಿಜಯ ಪ್ರಕಾಶ್ ಹಾಗೂ ಖ್ಯಾತ ನಟಿ ಸಪ್ತಮಿ ಗೌಡ ಅವರೊಂದಿಗೆ ಉದ್ಘಾಟಿಸಿ ಮಾತನಾಡಿದರು. ಕಾಲೇಜು ಹಂತದಲ್ಲೇ ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳಿಸಿಕೊಂಡು, ದೇಶ ಕಟ್ಟುವ ನಯಕರಾಗಿ ಎಂದರು.
ಸರ್ಕಾರ ವಿದ್ಯಾರ್ಥಿಗಳು ಹಾಗೂ ಯುವಶಕ್ತಿಯನ್ನು ಬಲವರ್ಧನೆಗೊಳಿಸಲು ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಯುವನಿಧಿ, ಭಾರತ್ ಜೋಡೋ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ಶಾಸಕ ಜಿ.ಟಿ.ದೇವೇಗೌಡ ಅವರು ಮೈಸೂರು ದಸರಾ ಎಷ್ಟೊಂದು ಸುಂದರ ಎಂಬ ಹಾಡು ಹೇಳಿ ಯುವ ವೀಕ್ಷಕರ ಮನ ಸೆಳೆದರು. ಯುವ ಸಂಭ್ರಮ ಪ್ರಾರಂಭಿಸಿದಾಗ ಹಲವಾರು ಟೀಕೆ ಟಿಪ್ಪಣಿ ಬಂದಿತ್ತು. ಅವುಗಳನ್ನು ಬದಿಗಿಟ್ಟಿ ಯುವಸಂಭ್ರಮ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಯುವ ಶಕ್ತಿ ಪ್ರತಿಭೆಯ ಅನಾವರಣಕ್ಕೆ ಯುವಸಂಭ್ರಮ ವೇದಿಕೆಯಾಗಿದ್ದು, ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಶಾಸಕ ಕೆ. ಹರೀಶ್ ಗೌಡ ಅವರು ಮಾತನಾಡಿ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಆಗಮಿಸಿ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣ ಮಾಡಲಿದ್ದಾರೆ. ವೈವಿದ್ಯಮಯ ಕಾರ್ಯಕ್ರಮಗಳನ್ನು ನೀಡಲು 360 ಕಾಲೇಜುಗಳಿಗೆ ಅವಕಾಶ ಮಾಡಿಕೊಡಲಾಗಿದೆ ಎಂದರು.
ಖ್ಯಾತ ಚಲನಚಿತ್ರ ಗಾಯಕರಾದ ವಿಜಯ್ ಪ್ರಕಾಶ್ ಅವರು ಮಾತನಾಡಿ ಪ್ರತಿಯೊಬ್ಬ ಯುವಕ-ಯುವತಿಯರು ತಾವು ಕಾಣುವ ದೊಡ್ಡ ಕನಸನ್ನು ಸಾಕಾರಗೊಳಿಸಲು ನಿರಂತರ ಶ್ರಮಿಸಬೇಕು ಎಂದರು.
ಮುಂದಿನ ದಿನಗಳಲ್ಲಿ ನಡೆಯುವ ಈ ಕಾರ್ಯಕ್ರಮಕ್ಕಾಗಿ 50 ಕ್ಕೂ ಹೆಚ್ಚು ಗಾಯಕರು ಹಾಗೂ 30 ಕ್ಕೂ ಹೆಚ್ಚು ನೃತ್ಯ ತಂಡಗಳನ್ನು ಆಯ್ಕೆ ಮಾಡಲಾಗಿದೆ. ಈ ಕಲಾವಿದರಿಗಾಗಿ ಅಕ್ಟೊಬರ್ 4 ರಿಂದ 7 ರವರೆಗೆ ವಿಶೇಷ ಶಿಬಿರವನ್ನು ಆಯೋಜಿಸಲಾಗಿದ್ದು, 7ನೇ ತಾರೀಖಿನಂದು ಇದೇ ವೇದಿಕೆಯಲ್ಲಿ ಬೃಹತ್ ಸಾಂಸ್ಕೃತಿಕ ಪ್ರದರ್ಶನ ನಡೆಯಲಿದೆ ಎಂದರು.
ಈ ಶಿಬಿರವು ಕೇವಲ ಹಾಡು ಅಥವಾ ಮನರಂಜನೆಗೆ ಮಾತ್ರ ಸೀಮಿತವಾಗಿಲ್ಲ. ನಾಡಿನ ಮೂಲೆ ಮೂಲೆಗಳಿಂದ ಬರುವ ಯುವ ಕಲಾವಿದರನ್ನು ಕಲೆಯ ಮೂಲಕ ಒಂದೆಡೆ ಬೆಸೆಯುವುದು ಹಾಗೂ ಯುವಶಕ್ತಿಯಿಂದ ಅತ್ಯುತ್ತಮ ಕರ್ನಾಟಕವನ್ನು ಕಟ್ಟುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಖ್ಯಾತ ನಟಿ ಸಪ್ತಮಿಗೌಡ ಅವರು ಮಾತನಾಡಿ ಮೈಸೂರು ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಗೆದ್ದಾಗ ನಗದು ಬಹುಮಾನ ನೀಡುತ್ತಿದ್ದರು ಇದು ಕ್ರೀಡೆಯಲ್ಲಿ ಪಾಲ್ಗೊಳ್ಳಲು ಪ್ರೇರಣೆ ನೀಡುತ್ತಿತ್ತು ಎಂದು ತಮ್ಮ ಕಾಲೇಜು ದಿನಗಳನ್ನು ಮೆಲಕು ಹಾಕಿದರು.
ಕಾರ್ಯಕ್ರಮದಲ್ಲಿ ಚಿತ್ರಸಂತೆ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಡ್ರೋನ್ ಮೂಲಕ ಮಾನ್ಯ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳ ಚಿತ್ರ ಪ್ರದರ್ಶನ ಮಾಡಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ, ಶಾಸಕರಾದ ಅನಿಲ್ ಚಿಕ್ಕಮಾಧು ,ತನ್ವೀರ್ ಸೇಠ್, ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಅಧ್ಯಕ್ಷ ಗಣೇಶ್, ಮೈಸೂರು ಗ್ಯಾರಂಟಿ ಯೋಜನೆ ಉಪಾಧ್ಯಕ್ಷೆ ಪುಷ್ಪ ಅಮರನಾಥ್,
ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಜಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ,ಅಪರ ಜಿಲ್ಲಾಧಿಕಾರಿ ಐಶ್ವರ್ಯ ಆರ್, ಮೈಸೂರು ಮಹಾನಗರಪಾಲಿಕೆ ಆಯುಕ್ತೆ ಸವಿತಾ ಎಂ.ಕೆ, ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.
