ಪಬ್ಲಿಕ್ ಅಲರ್ಟ್
ಮೈಸೂರು: ಮಾಜಿ ಸಚಿವರು ಮತ್ತು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಆಯುಕ್ತ ಪಿಜಿಆರ್ ಸಿಂಧ್ಯಾ, ಪತ್ರಕರ್ತ ರಮೆಶ್ ಉತ್ತಪ್ಪ, ವೈದ್ಯವಾರ್ತಾ ಪ್ರಕಾಶನದ ನಿರ್ದೇಶಕ ಶ್ರೀನಿವಾಸ ಬಹಾದ್ದೂರ್, ಚುಟುಕು ಜಾಹ್ನವಿ ಸೀತಾಲಕ್ಷ್ಮಿ ವರ್ಮ ಅವರನ್ನು ಮತ್ತು ಸನ್ಮಾನಕ್ಕೆ ಗೈರಾಗಿದ್ದ ಹಾಸನ ಜಿಲ್ಲೆ ಅಪರ ಜಿಲ್ಲಾಧಿಕಾರಿ ವಿ.ಮಂಜುನಾಥ್ ಪರವಾಗಿ ಅವರ ಕುಟುಂಬದವರಿಗೆ ಧ್ವನಿಕೊಟ್ಟ ಧಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಗರದ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅತಿಥಿಯಾಗಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಶಾಸಕ ತನ್ವೀರ್ ಸೇಠ್ ಮಾತನಾಡಿ, ಮಾಜಿ ಸಚಿವರು ಮತ್ತು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಆಯುಕ್ತರಾದ ಪಿಜಿಆರ್ ಸಿಂಧ್ಯಾ ಅವರ ರಾಜಕೀಯ ಜೀವನ, ಸಮಾಜ ಸೇವೆ ಇಂದಿನ ರಾಜಕಾರಣಿಗಳಿಗೆ ಅನುಕರಣೀಯ. ಸಿಂಧ್ಯಾ ಅವರು ತಮಗೆ ದೊರೆತ ಎಲ್ಲ ಅವಕಾಶಗಳನ್ನು ಸಮಾಜದ ಅಭಿವೃದ್ಧಿಗೆ ಬಳಸಿಕೊಂಡರು. ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಆಯುಕ್ತರಾಗಿ ಮಕ್ಕಳಲ್ಲಿ ಶಿಸ್ತು ಬದ್ಧ ಜೀವನ ಮೂಡಿಸುವುದು ಮತ್ತು ಅವರಲ್ಲಿ ಸಮಾಜ ಮುಖಿ ಚಿಂತನೆಗಳನ್ನು ಮೂಡಿಸುತ್ತಿದ್ದಾರೆ. ಅವರೊಬ್ಬ ಬೇಟೆಗಾರರು, ಸಮಾಜಕ್ಕೆ ಅವಶ್ಯವಿರುವ ದಿಟ್ಟ ಪ್ರತಿಭೆಗಳನ್ನು ಹುಡುಕಿ ತಮ್ಮೊಂದಿಗೆ ಸಮಾಜಪರ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಅವರು ತಮ್ಮ ಜೀವನದ ಉದ್ದಕ್ಕೂ ಸುಖಕ್ಕಿಂತ ನೋವುಗಳನ್ನು ಉಂಡಿದ್ದೆ ಹೆಚ್ಚು, ಅವರಿಗೆ ಎಲ್ಲ ರೀತಿಯ ಸುಖ ಸಂತೋಷ ಲಭಿಸಲಿ ಎಂದು ಹಾರೈಸಿದರು.
ಸಮಾಜ ಸೇವಕ ಮೆಹುಲ್ ಪಟೇಲ್ ಮಾತನಾಡಿ, ಪಿಜಿಆರ್ ಸಿಂಧ್ಯಾ ಅವರೇ ಕರ್ನಾಟಕ ರತ್ನ ಮತ್ತು ಭಾರತ ರತ್ನ ಇದ್ದಂತೆ ಅವರಿಗೇಕೆ ಪ್ರಶಸ್ತಿಗಳು, ಅವರದು ದೈತ್ಯ ಪ್ರತಿಭೆ, ಅಪ್ರತಿಮ ಸಮಾಜ ಸೇವಕರು, ಅವರ ರಾಜಕೀಯ ಮತ್ತು ಸಾಮಾಜಿಕ ಸೇವಾಕಾರ್ಯ ಇಂದಿನ ಯುವಕರಿಗೆ ಮತ್ತು ರಾಜಕಾರಣಿಗಳಿಗೆ ಪ್ರೇರಣಾದಾಯಕ ಎಂದರು. ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಾಜಿ ಸಚಿವರಾದ ಪಿಜಿಆರ್ ಸಿಂಧ್ಯಾ, ಎಂ.ಶಿವಣ್ಣ, ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್ ಟ್ರಸ್ಟ್ ಉಪಾಧ್ಯಕ್ಷರಾದ ಹೆಚ್.ಎ.ವೆಂಕಟೇಶ್ ಮತ್ತಿತರರು ಮಾತನಾಡಿದರು.
