ಪಬ್ಲಿಕ್ ಅಲರ್ಟ್
ಮೈಸೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಿಎಸ್‌ಟಿಯಲ್ಲಿ ಸುಧಾರಣೆ ತರುವ ಮೂಲಕ ದೇಶದ ಆರ್ಥಿಕತೆಗೆ ದುಪ್ಪಟ್ಟು ವೇಗ ನೀಡಿದೆ ಎಂದು ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಸೆ.೩ರಂದು ನವದೆಹಲಿಯಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್‌ನ ೫೬ನೇ ಸಭೆಯಲ್ಲಿ ೨೦೧೭ರಲ್ಲಿ ಜಾರಿಗೆ ಬಂದ ಜಿಎಸ್‌ಟಿಯನ್ನು ೮ ವರ್ಷಗಳ ಸರಳೀಕರಿಸಿ ನಾಲ್ಕು ಶ್ರೇಣಿಯ ತೆರಿಯನ್ನು ಮೂರು ಶ್ರೇಣಿಗೆ ಇಳಿಸುವ ಮೂಲಕ ಸಾಮಾನ್ಯ ಜನರಿಗೆ ಹೊರೆಯಾಗದ ರೀತಿ ಜಿಎಸ್‌ಟಿ ೨.೦ ಸುಧಾರಣೆ ಮಾಡಿದ್ದಾರೆ. ಜನರ ಮೇಲಿನ ಹೊರೆಯನ್ನು ಕಡಿಮೆ ಮಾಡುವ ಮೂಲಕ ಉದ್ಯಮಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ಈ ಬಾರಿಯ ಜಿಎಸ್‌ಟಿ ಕೌನ್ಸಿಲ್‌ನ ೫೬ನೇ ಸಭೆಗೆ ರಾಜ್ಯದ ಕಂದಾಯ ಸಚಿವ ಕೃಷ್ಣಬೈರೇಗೌಡ ಭಾಗವಹಿಸಿದ್ದರು. ಈ ಮೂಲಕ ಜಿಎಸ್‌ಟಿಯ ೨.೦ ಸರಳೀಕರಣಕ್ಕೆ ಸರ್ವಾನುಮತದ ಒಪ್ಪಿಗೆ ಸಿಕ್ಕಿದೆ. ಸೆ.೨೨ರಿಂದ ಇದು ಜಾರಿಗೆ ಬರಲಿದೆ ಎಂದರು.
ಸರ್ಕಾರಗಳಿಗೆ ಅಧಿಕಾರ ನೀಡುವವರು ಹಾಗೂ ಸರ್ಕಾರ ನಡೆಸಲು ಹಣ ಕೊಡುತ್ತಿರುವವರೇ ಪ್ರಜೆಗಳಾಗಿದ್ದಾರೆ. ಹೀಗಾಗಿ ಪ್ರಜೆಗಳು ಕೊಡುವ ಅಧಿಕಾರ ಹಾಗೂ ಹಣ ದೇಶದ ಅಭಿವೃದ್ಧಿಗೆ, ಪ್ರಜೆಗಳ ರಕ್ಷಣೆಗೆ ಸಮರ್ಪಪಕವಾಗಿ ಬಳಕೆಯಾಗಬೇಕು. ಇದರಿಂದ ತೆರಿಗೆ ಸರಳೀಕರಣ ಮಾಡಿದ್ದಾರೆ. ಆರ್ಥಿಕ ಪರಾವಲಂಬನೆಯು ಮನುಷ್ಯನ ಗೌರವವನ್ನು ತೆಗೆದುಬಿಡುತ್ತದೆ. ಕಾಂಗ್ರೆಸ್‌ನ ಕಳೆದ ೭೦ ವರ್ಷಗಳ ಆಳ್ವಿಕೆಯಲ್ಲಿ ಪ್ರಜೆಗಳನ್ನು ಪರಾವಲಂಬಿ ಮಾಡಿದೆ ಎಂದು ಹೇಳಿದರು.
ಪರಾಲಂಬಿ ಪ್ರಜೆಗಳಿಂದ ಪರಾವಲಂಬಿ ದೇಶ ಸೃಷ್ಠಿಯಾಗುತ್ತದೆ. ಪ್ರಜೆಗಳು ಸ್ವಾವಲಂಬಿಯಾದರೆ ದೇಶವೂ ಸ್ವಾವಲಂಬಿಯಾಗುತ್ತದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಕೋವಿಡ್ ಸಮಯದಲ್ಲಿ ಆತ್ಮ ನಿರ್ಭರ ಭಾರತಕ್ಕೋಸ್ಕರ ೨೦ ಲಕ್ಷ ಕೋಟಿ ಹಣವನ್ನು ತೊಡಗಿಸಿದೆ. ಇದರ ಪರಿಣಾಮ ಈಗ ನಮ್ಮ ದೇಶ ಈಡೀ ಜಗತ್ತಿನಲ್ಲಿ ಆರ್ಥಿಕತೆಯಲ್ಲಿ ೪ನೇ ಸ್ಥಾನದಲ್ಲಿದೆ. ಇದನ್ನು ೨೦೨೭ಕ್ಕೆ ೩ನೇ ಸ್ಥಾನಕ್ಕೆ ಹಾಗೂ ೨೦೪೭ಕ್ಕೆ ಅಂದರೆ ಭಾರತದ ೧೦೦ನೇ ವರ್ಷದ ಸ್ವಾತಂತ್ರ‍್ಯದ ಸಮಯಕ್ಕೆ ಮೊದಲ ಸ್ಥಾನಕ್ಕೆ ಬರಬೇಕು. ಇದು ಆತ್ಮ ನಿರ್ಭರ ಭಾರತದ ಕಲ್ಪನೆ ಎಂದು ತಿಳಿಸಿದರು.
ಜಿಎಸ್‌ಟಿ ಸರಳೀಕರಣದಿಂದಾಗಿ ಪ್ರತಿಯೊಬ್ಬ ಪ್ರಜೆಯು ತನ್ನ ದಿನ ನಿತ್ಯದ ಸರಕುಗಳನ್ನು ಕೊಳ್ಳುವ ಸಮಯದಲ್ಲಿ ಅವನ ಬಳಿ ಹಣ ಉಳಿಯುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿನ ಸರಕುಗಳು ತೆರಿಗೆ ಉಚಿತಗೊಳಿಸಿದೆ. ಆರೋಗ್ಯ ಕ್ಷೇತ್ರದಲ್ಲಿಯೂ ಕೂಡ ಭಾರಿ ಬದಲಾವಣೆ ತಂದಿದ್ದು, ಈ ಕ್ಷೇತ್ರದಲ್ಲಿಯೂ ಸಹ ತೆರಿಗೆ ಉವಿತವಾಗಿ ಔಷಧಿಗಳು ಸಿಗುವಂತಹ ವಾತಾವರಣ ನಿರ್ಮಾಣ ಆಗುತ್ತದೆ. ಪ್ರಜೆಗಳ ತಲಾ ಆದಾಯ ಹೆಚ್ಚಾದಾಗ ಅವನ ವಾರ್ಷಿಕ ಆದಾಯ ಹೆಚ್ಚಾಗುತ್ತದೆ. ಇದರಿಂದ ಅವನು ಆರ್ಥಿಕವಾಗಿ ಸ್ವಾವಲಂಬಿಯಾಗುತ್ತಾನೆ. ವ್ಯಕ್ತಿಗಳನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿ ಮಾಡುವುದಕ್ಕೆ ಜಿಎಸ್‌ಟಿ ೨.೦ ದೊಡ್ಡ ಕ್ರಾಂತಿಯನ್ನು ಮಾರುಕಟ್ಟೆಯಲ್ಲಿ ಸೃಷ್ಟಿ ಮಾಡಲಿದೆ. ರೈತರಿಗೆ ಅನುಕೂಲವಾಗಲೆಂದು ಕೃಷಿಗೆ ಸಂಬಂಧಿಸಿದ ಪರಿಕರಗಳ ಮೇಲೆ ಶೇ.೧೮ ರಷ್ಟು ಇದ್ದ ತೆರಿಗೆಯನ್ನು ಶೇ.೨ರಷ್ಟಕ್ಕೆ ಇಳಿಸಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ೪೮ ಸಾವಿರ ಕೋಟಿ ಹೊರೆಯಾಗಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಎಲ್.ನಾಗೇಂದ್ರ, ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಕೆ.ಎನ್.ಸುಬ್ಬಣ್ಣ, ಗ್ರಾಮಾಂತರ ಬಿಜೆಪಿ ಮಾಜಿ ಅಧ್ಯಕ್ಷೆ ಮಂಗಳ ಸೋಮಶೇಖರ್, ಪ್ರಧಾನ ಕಾರ್ಯದರ್ಶಿಗಳಾದ ಮಡವಾಡಿ ಮಹೇಶ್, ಗಿರಿಧರ್, ಕೇಬಲ್ ಮಹೇಶ್, ಕಿರಣ್ ಜೈರಾಂಗೌಡ, ಬಾಲಚಂದ್ರ, ಜಿಲ್ಲಾ ವಕ್ತಾರ ದಯಾನಂದ ಪಟೇಲ್, ಮಾಧ್ಯಮ ಸಂಚಾಲಕ ಮಹೇಶ್ ರಾಜ್ ಅರಸ್ ಹಾಗೂ ಮಹದೇವಸ್ವಾಮಿ ಉಪಸ್ಥಿತರಿದ್ದರು.
