ಪಬ್ಲಿಕ್ ಅಲರ್ಟ್
ಮೈಸೂರು: ಜಿಎಸ್ ಟಿ ಅನೂಕೂಲದ ನೆಪದಲ್ಲಿ ಮತರಾಜಕಾರಣಕ್ಕೆ ಬಿಜೆಪಿ ಮುಂದಾಗಿದೆ. ಆದರೆ, ಜಿಎಸ್‌ಟಿಯಿಂದ ಜನ ಸಮಾನ್ಯರಿಗೆ ಹಾಗೂ ರಾಜ್ಯ ಸರ್ಕಾರಗಳಿಗೆ ನಷ್ಟ ಆಗುತ್ತಿದಿಯೇ ಹೊರತು ಕೇಂದ್ರ ಸರ್ಕಾರಕ್ಕೆ ನಷ್ಟ ಆಗುತ್ತಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಿಎಸ್‌ಟಿಯನ್ನು ಸುಧಾರಿಸುವ ಮೂಲಕ ಜನ ಸಮಾನ್ಯರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ ಎಂದು ಹೇಳಿಕೊಳ್ಳುವ ಮೂಲಕ ಮತರಾಜಕಾರಣ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಇತರ ವಿವಿಧ ತೆರಿಗೆಗಳನ್ನು ಒಂದೇ ಸೂರಿನಡಿ ತರಬೇಕೆಂಬ ಉದ್ದೇಶದಿಂದ ಜಿಎಸ್‌ಟಿಯ ಬಗ್ಗೆ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಪ್ಲಾನ್ ಮಾಡಿದ್ದೇ ಕಾಂಗ್ರೆಸ್ ಸರ್ಕಾರ. ಆದರೆ ಅಂದಿನ ವಿರೋಧ ಪಕ್ಷ ಬಿಜೆಪಿ ಇದನ್ನು ಸಹಕಾರ ನೀಡದೆ ವಿರೋಧಿಸಿದ್ದರು. ಆದರೆ, ದೇಶದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಜಿಎಸ್‌ಟಿಯನ್ನು ನಾಲ್ಕು ವಿವಿಧ ಹಂತಗಳನ್ನು ತಂದರು. ಇದು ಜನರ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂದು ಕಾಂಗ್ರೆಸ್ ತನಿಖೆ ಮಾಡಿ ವಿರೋಧಿಸಿದರೂ ಕೂಡ ಜಿಎಸ್‌ಟಿಯನ್ನು ಜಾರಿಗೆ ತಂದರು ಎಂದು ಹೇಳಿದರು.
ತೆರಿಗೆಯಿಂದ ಕಳೆದ ೮ ರಿಂದ ೯ ವರ್ಷಗಳಿಂದ ನಿರಂತರವಾಗಿ ಜನರ ಚರ್ಮವನ್ನು ಸುಲಿದು, ರಕ್ತವನ್ನು ಹೀರಿದ್ದಾರೆ. ಈಗ ಬಿಜೆಪಿಯ ವರ್ಚಸ್ಸು ಕಡಿಮೆಯಾಗುತ್ತಿರುವ ಕಾರಣ ಜಿಎಸ್‌ಟಿಯನ್ನು ಸುಧಾರಿಸುತ್ತೇವೆ ಎಂದು ಹೇಳಿದ್ದಾರೆ. ೨೦೧೭ರಲ್ಲಿ ಜಿಎಸ್‌ಟಿ ಜಾರಿಗೆ ಬಂದಾಗ ಶೇ.೫, ೧೨, ೧೮ ಹಾಗೂ ೨೮ರಷ್ಟು ಜಿಎಸ್‌ಟಿ ಹಾಕುತ್ತಿದ್ದರು. ಈ ನಾಲ್ಕನ್ನು ಕೂಡಿದಾಗ ಬರುವ ಸಂಖ್ಯೆಯಿಂದ ೪ರಿಂದ ಗುಣಿಗಿಸಿದರೆ ಶೇ.೧೫.೭೫ರಷ್ಟು ಅಂಕಿಅಂಶ ಬರುತ್ತದೆ. ಇದರಿಂದ ದೇಶದಲ್ಲಿ ಎಲ್ಲಾ ವಸ್ತುಗಳ ಮೇಲೆ ಶೇ.೧೫.೭೫ರಷ್ಟು ತೆರಿಗೆ ಬೀಳುತ್ತಿತ್ತು ಎಂದು ವಿವರಿಸಿದರು.
ಈಗ ಇದನ್ನು ಬದಲಾಯಿಸಿ ಶೇ.೫, ೧೮ ಹಾಗೂ ೪೦ರ ಮೂರು ಹಂತಗಳಿಗೆ ತಂದಿದ್ದಾರೆ. ಈ ಮೂರನ್ನು ಕೂಡಿ ೩ ರಿಂದ ಗುಣಿಸಿದಾಗ ಶೆ.೨೦.೭೫ ಬರುತ್ತಿದೆ. ದೇಶದಲ್ಲಿ ವರ್ಷಕ್ಕೆ ಜಿಎಸ್‌ಟಿಯಿಂದ ಸಂಗ್ರಹಿಸುವ ತೆರಿಗೆ ೨೫ ಲಕ್ಷ ಕೋಟಿ ಮನಮೋಹನ್ ಸಿಂಗ್ ಕಾಲದಲ್ಲಿ ತೆರಿಗೆ ಸಂಗ್ರಹವಾಗುತ್ತಿದ್ದದ್ದು ೧೫ ರಿಂದ ೧೬ ಲಕ್ಷ ಕೋಟಿಯಾಗಿದೆ. ಆದರೆ, ಬಿಜೆಪಿ ಹೆಚ್ಚುವರಿಯಾಗಿ ೯ ಲಕ್ಷ ಕೋಟಿಯನ್ನು ಸುಲಿಗೆ ಮಾಡುವ ಕೆಲಸ ಮಾಡಿದ್ದಾರೆ. ಹೀಗಾಗಿ ಇದುವರೆಗೂ ಇವರು ೭೨ ಲಕ್ಷ ಕೋಟಿಯಷ್ಟು ಲೂಟಿ ಮಾಡಿದ್ದಾರೆ ಎಂದು ತಿಳಿಸಿದರು.
ಈ ಅಂಶಗಳಿಂದ ಜಿಎಸ್‌ಟಿ ಸುಧಾರಣೆಯಿಂದ ಜನರಿಗೆ ಯಾವುದೇ ಲಾಭವಾಗುವುದಿಲ್ಲ. ವಾರ್ಷಿಕವಾಗಿ ೨೫ ಲಕ್ಷ ಕೋಟಿ ಸಂಗ್ರಹಿಸುತ್ತಿದ್ದದ್ದು ನಿರೀಕ್ಷಿಸಿದಂತೆ ೬ ರಿಂದ ೭ ಲಕ್ಷ ಕೋಟಿ ಕಡಿಮೆಯಾಗಬೇಕು. ಎಸ್‌ಬಿಐ ಅವರು ಸರ್ವೆ ಮಾಡಿದ ಪ್ರಕಾರ ಕೇಂದ್ರ ಸರ್ಕಾರಕ್ಕೆ ವಾರ್ಷಿಕ ೩,೭೦೦ ಕೋಟಿ ನಷ್ಟ ಆಗಬೇಕು. ಇದರಿಂದ ಸ್ಪಷ್ಟವಾಗಿ ನಷ್ಟ ಆಗುತ್ತಿರುವುದು ಆಯಾ ರಾಜ್ಯಗಳಿಗೆ ಮಾತ್ರ. ಇದು ಮುಂದಿನ ದಿನಗಳಲ್ಲಿ ಜನಸಾಮಾನ್ಯರಿಗೂ ಅರಿವಿಗೆ ಬರಲಿದೆ ಎಂದು ಹೇಳಿದರು. ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಜಿಲ್ಲಾ ಕಾಂಗ್ರೆಸ್ ಮಾದ್ಯಮ ವಕ್ತಾರ ಕೆ.ಮಹೇಶ್ ಇದ್ದರು.
ಬಾಕ್ಸ್…
ಬ್ಯಾಲೆಟ್ ಪೇಪರ್ ಸ್ವಾಗತಾರ್ಹ
ರಾಜ್ಯದಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆಯನ್ನು ನಡೆಸುತ್ತಿರುವುದು ಸಂತೋಷ ಹಾಗೂ ಸ್ವಾಗತಾರ್ಹ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.
ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆಯನ್ನು ನಡೆಸುತ್ತಿರುವುದನ್ನು ಬಿಜೆಪಿ ವಿರೋಧಿಸುತ್ತಿದೆ. ಇವಿಯಂ ಬೇಕು ಎಂದು ವಿಜಯೇಂದ್ರ ಕೇಳುತ್ತಿದ್ದಾರೆ. ಆದರೆ, ಜಗತ್ತಿನ ಮುಂದುವರೆದ ಅಮೇರಿಕಾ, ಯುಕೆ, ಆಸ್ಟ್ರೇಲಿಯಾ, ಕೆನಾಡ, ಜಪಾನ್ ದೇಶಗಳು ಇವಿಯಂ ಮಿಷನ್ ಮೇಲೆ ನಂಬಿಕೆ ಇಟ್ಟಿಲ್ಲ. ಹೀಗಾಗಿ ಅಲ್ಲಿ ಇವಿಯಂ ಮೂಲಕ ಚುನಾವಣೆ ನಡೆಸುವುದಿಲ್ಲ. ದೇಶದಲ್ಲಿ ಬಿಜೆಪಿಯು ೧೧ ವರ್ಷಗಳಿಂದ ಗೆಲ್ಲುತ್ತಿರುವುದೇ ಮತಗಳ್ಳತನದಿಂದ ಹಾಗೂ ಮೋಸದಿಂದ ಆಗಿದೆ. ನರೇಂದ್ರ ಮೋದಿ ಹಾಗೂ ಅಮೀತ್ ಶಾ ಅವರು ಅಧಿಕಾರಕ್ಕಾಗಿ ದೇಶವನ್ನು ಹಾಳು ಮಾಡುತ್ತಿದ್ದಾರೆ. ಹಿಂದೆ ಬಿಜೆಪಿ ಅವರೇ ಇವಿಯಂ ಸರಿಯಿಲ್ಲ ಎಂದು ಕೋರ್ಟ್ ಮೆಟ್ಟಿಲೆರಿದ್ದರು. ಎಲ್ಲೆ ಚುನಾವಣೆ ನಡೆದೂ ಸಹ ಬಿಜೆಪಿಯೇ ಗೆಲ್ಲುತ್ತಿದೆ. ಇವಿಯಂ ಅನ್ನು ತಾವು ಕೇಳುವ ಹಾಗೆ ಮಾಡಿಕೊಂಡಿದ್ದಾರೆ ಎಂದರು.
ಮುಸ್ಲಿಂ ಇರುವ ಏರಿಯಾದಲ್ಲಿಯೇ ಹೆಚ್ಚು ಮತಗಳು ಬಿಜೆಪಿಗೆ ಹೋಗುತ್ತಿದೆ. ಇದನ್ನು ರಾಹುಲ್ ಗಾಂಧಿ ಸಾಕ್ಷ್ಯಾಧಾರ ಸಮೇತ ತೆರೆದಿಟ್ಟಿದ್ದಾರೆ. ಬೆಂಗಳೂರಿನ ಮಹದೇವಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಮೋಸದಿಂದಲೇ ಸೋಲಿಸಿದ್ದಾರೆ. ನನ್ನನ್ನು ಸಹ ಇದೇ ಮಾದರಿಯಲ್ಲಿ ಮೋಸದಿಂದಲೇ ಸೋಲಿಸಿದ್ದಾರೆಯೇ ಹೊರತು ವಾಸ್ತವದಲ್ಲಿ ಜನರ ಮತಗಳಿಂದ ನಾನು ಸೋತಿಲ್ಲ ಎಂದು ತಿಳಿಸಿದರು.
ಬಾಕ್ಸ್
ಪ್ರತಾಪ್ ಸಿಂಹ ಅವರು ಈಗ ನಿರುದ್ಯೋಗಿಯಾಗಿದ್ದಾರೆ. ಪ್ರತಿಯೊಂದಕ್ಕೂ ತಡೆಯನ್ನು ತರುವ ಅವರು ಪ್ರತಾಪ್ ಸಿಂಹ ಅಲ್ಲ ಅವರು ತಡೆ ಸಿಂಹ. ಭಾನು ಮುಷ್ತಾಕ್ ಅವರ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಿದ್ದಾರೆ. ಹಿಂದೆ ನಿಸಾರ್ ಅಹ್ಮದ್ ಅವರು ದಸರಾ ಉದ್ಘಾಟನೆ ಮಾಡಿದಾಗ ಅವರ ಹಿಂದೆ ನಿಂತಿದ್ದವರೇ ಪ್ರತಾಪ್ ಸಿಂಹ.
– ಎಂ.ಲಕ್ಷ್ಮಣ್
