ವೀರಶೈವ ಲಿಂಗಾಯತ ಸಮಾಜ ವಿಭಜಿಸುವ ಕೆಲಸ: ಬಿ.ವೈ.ವಿಜಯೇಂದ್ರ

Pratheek
2 Min Read

ಪಬ್ಲಿಕ್ ಅಲರ್ಟ್

ಮೈಸೂರು: ವೀರಶೈವ ಲಿಂಗಾಯತ ಸಮಾಜವನ್ನು ವಿಭಜಿಸುವ ಮೂಲಕ ಹಿಂದೂ ಧರ್ಮವನ್ನು ಒಡೆಯುವ ಕೆಲಸ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಭಾನುವಾರ ಗುರುಮಲ್ಲೇಶ್ವರ ದಾಸೋಹ ಮಠ ಹಾಗೂ ವಿದ್ಯಾರ್ಥಿನಿಲಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಯಾರೂ ಧರ್ಮವನ್ನು ಒಡೆಯುವ ಕೆಲಸ ಮಾಡಬಾರದು, ಬದಲಾಗಿ ರಕ್ಷಿಸಬೇಕು ಎಂದರು.

ರಾಜಕಾರಣದಲ್ಲಿ ಧರ್ಮ ಇರಬೇಕು. ಆದರೆ ಕೆಲವರು ಧರ್ಮದಲ್ಲಿ ರಾಜಕಾರಣ ತರುವ ಮೂಲಕ ಷಡ್ಯಂತ್ರ ನಡೆಸುತ್ತಿದ್ದಾರೆ. ಇಂದು ವೀರಶೈವ ಲಿಂಗಾಯತ ಸಮಾಜಕ್ಕೆ ಹಿನ್ನಡೆಯಾಗುತ್ತಿದ್ದರೂ ಮತ್ತೆ ಪುಟಿದೇಳಲಿದೆ.   ಇತರ ಸಮುದಾಯಕ್ಕೂ ಅಶ್ರಯ ನೀಡಿ ಹಿಂದೂ ಸಮಾಜವನ್ನು ಸುಭದ್ರಗೊಳಿಸಲಿದೆ ಎಂದರು.

ಉತ್ತರ ಕರ್ನಾಟಕದಲ್ಲಿ ಮಳೆಯಿಂದ ಸಾವಿರಾರು ಹೆಕ್ಟೇರ್ ಭೂಮಿಯಲ್ಲಿ ಶೇ 80ರಷ್ಟು ಬೆಳೆ ಹಾನಿಯಾಗಿದೆ. ಈ ಬಗ್ಗೆ ರೈತ ಸಂಘಟನೆಗಳು ಕೂಡ ಸರ್ಕಾರವನ್ನು ಸೂಕ್ತ ಪರಿಹಾರಕ್ಕೆ ಆಗ್ರಹಿಸದೇ ಧ್ವನಿ‌ ಕಳೆದುಕೊಂಡಿವೆ. ಅತಿವೃಷ್ಟಿ, ಅನಾವೃಷ್ಟಿ ರೈತರನ್ನು ಕಂಗೆಡಿಸಿದ್ದು, ಬೆಳೆಗೆ ವೈಜ್ಞಾನಿಕ ಬೆಲೆಯೂ ಸಿಗದ ಪರಿಸ್ಥಿತಿಯಿದೆ ಎಂದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೂ ಇಂತದ್ದೇ ಸಮಸ್ಯೆ ಎದುರಾಗಿತ್ತು. ಅಂದು ಸಂಪೂರ್ಣ ಕ್ಯಾಬಿನೆಟ್ ರಚನೆಯಾಗದಿದ್ದರೂ ಏಕಾಂಗಿಯಾಗಿ ರೈತರ ಬೆಂಬಲಕ್ಕೆ ನಿಂತಿದ್ದರು. ಎನ್‌ಡಿಆರ್‌ಎಫ್ ₹1 ಲಕ್ಷ ಪರಿಹಾರ ನೀಡುತ್ತಿದ್ದರೆ, ಅದು‌ ಸಾಕಾಗುವುದಿಲ್ಲ ಎಂದು ₹5 ಲಕ್ಷ ನೀಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಉದಾರವಾಗಿ ಸ್ಪಂದಿಸಬೇಕು, ರಾಜಕೀಯ ಬಿಡಬೇಕು ಎಂದರು.

ಈ ಮಠದ ಅಭಿವೃದ್ಧಿಗೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ 25 ಲಕ್ಷ ಅನುದಾನ ನೀಡಿದ್ದರು. ಈ ಭಾಗದಲ್ಲಿ ಸುತ್ತೂರು ಸೇರಿದಂತೆ ಅನೇಕ ಮಠಗಳು ಜನರ ಅಭಿವೃದ್ಧಿಗೆ ಶ್ರಮವಹಿಸಿವೆ. ಮೈಸೂರು ಭಾಗದಲ್ಲಿನ ಸಮುದಾಯದವರು ನನಗೆ ಸದಾ ಶಕ್ತಿಯನ್ನು ತುಂಬುತ್ತಿದ್ದು, ಅವರ ಭರವಸೆಯಂತೆ ಕಾರ್ಯನಿರ್ವಹಿಸುತ್ತೇನೆ ಎಂದರು.

ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಮಠದ ಅಭಿವೃದ್ಧಿಗೆ ಶಾಸಕರ ನಿಧಿಯಿಂದ 5 ಲಕ್ಷ ಅನುದಾನ ನೀಡುವುದಾಗಿ ತಿಳಿಸಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಆಧ್ಯಾತ್ಮಿಕ ಕ್ಷೇತ್ರಕ್ಕೆ ಭಾರತದ ಕೊಡುಗೆ ಪ್ರಮುಖವಾಗಿದೆ. ಶಿವಮೊಗ್ಗ ಮೂಲದ ಗುರುಮಲ್ಲೇಶ ಸ್ವಾಮೀಜಿಯು ಭಕ್ತರ ಸಮಸ್ಯೆ ನಿವಾರಣೆ ಹಾಗೂ ದಾಸೋಹ ಕಾಯಕಕ್ಕೆ ಬದ್ಧರಾಗಿ ದೇವನೂರಿನಲ್ಲಿ ಮಠವನ್ನು ಸ್ಥಾಪಿಸಿದರು. ಶರಣ ತತ್ವ ಅನುಸರಿಸಿದರು ಎಂದು ಸ್ಮರಿಸಿದರು.
ಸಿದ್ಧಗಂಗಾ ಮಠದ ಶಿವಸಿದ್ಧೇಶ್ವರ ಸ್ವಾಮೀಜಿ ಮಾತನಾಡಿದರು. ದೇವನೂರಿನ ಗುರುಮಲ್ಲೇಶ್ವರ ದಾಸೋಹ ಮಠದ ಮಹಾಂತ ಸ್ವಾಮೀಜಿ ಗುರುವಂದನೆ ಸ್ವೀಕರಿಸಿದರು.
ಹುಲ್ಲಿನಬೀದಿ ಮಠದ ಚಂದ್ರಶೇಖರ ಸ್ವಾಮೀಜಿ, ಅಡವಿಮಠದ ಶಿವಲಿಂಗೇಂದ್ರ ಸ್ವಾಮೀಜಿ, ಜೆಎಸ್ಎಸ್ ಮಹಾವಿದ್ಯಾಪೀಠದ ಪ್ರಕಟಣಾ ವಿಭಾಗದ ನಿರ್ದೇಶಕ ಮೊರಬದ ಮಲ್ಲಿಕಾರ್ಜುನ, ಮುಖಂಡರಾದ ಎಂ.ಕೆ.ಸೋಮಶೇಖರ್, ಎಚ್.ವಿ.ರಾಜೀವ್, ಪ್ರದೀಪ್‌ಕುಮಾರ್, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ವಿ.ಬಸವರಾಜ್, ಬಿ.ವಿ.ಮಂಜುನಾಥ್, ಮಂಗಳಾ ಸೋಮಶೇಖರ್, ಸೌಮ್ಯಾ ಉಮೇಶ್ ಇನ್ನಿತರರು ಹಾಜರಿದ್ದರು.

Share This Article
Leave a Comment