ಪಬ್ಲಿಕ್ ಅಲರ್ಟ್
ಮೈಸೂರು: ಅಲೆಮಾರಿ ೫೯ ಜಾತಿಗಳಿಗೆ ಶೇ.೧ರಷ್ಟು ಮೀಸಲಾತಿಗೆ ಆಗ್ರಹಿಸಿ ರಾಜ್ಯಾಧ್ಯಂತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು,ನಾನಾ ಘೋಷಣೆ ಕೂಗಿದರು. ನಂತರ,ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ೫೯ ಅಲೆಮಾರಿ ಜಾತಿಗಳಿಗೆ ಕೂಡಲೇ ಪ್ರತ್ಯೇಕ ಮೀಸಲಾತಿ ನೀಡಬೇಕು. ಪರಿಶಿಷ್ಟಜಾತಿ ಪಟ್ಟಿಯಲ್ಲಿನ ಆದಿಕರ್ನಾಟಕ, ಆದಿ ಆಂಧ್ರ, ಆದಿದ್ರಾವಿಡ ಜಾತಿಗಳ ಮೂಲ ಜಾತಿಗಳನ್ನು ಗುರುತಿಸಿ ಆಯಾ ಪ್ರವರ್ಗಕ್ಕೆ ಸೇರಿಸುವ ಮೂಲಕ ಗೊಂದಲ ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಪರಿಶಿಷ್ಟಜಾತಿ, ಪರಿಶಿಷ್ಟವರ್ಗದ ಮೀಸಲಾತಿಯನ್ನು ಶೇ.೩೦ಕ್ಕೆ ಹೆಚ್ಚಿಸಬೇಕು. ಎಸ್‌ಸಿ,ಎಸ್‌ಟಿ ವರ್ಗಗಳ ಮೀಸಲಾತಿಪಟ್ಟಿಗೆ ಮತ್ತಷ್ಟು ಜಾತಿಗಳನ್ನು ಸೇರಿಸುವ ರಾಜಕೀಯ ಹುನ್ನಾರ ಕೈಬಿಡಬೇಕು. ಮೀಸಲಾತಿಯನ್ನು ಸಂವಿಧಾನದ ಶೆಡ್ಯೂಲ್ ೯ರಲ್ಲಿ ಸೇರಿಸಿ ಮೀಸಲಾತಿಯನ್ನು ರಕ್ಷಿಸಬೇಕು. ಖಾಸಗಿ ಔದ್ಯೋಗಿಕ ವಲಯದಲ್ಲಿ ಮೀಸಲಾತಿ ಜಾರಿಯಾಗಲಿ ಎಂದು ಆಗ್ರಹಿಸಿದರು. ಭ್ರಷ್ಟಾಚಾರದ ರಿಯಲ್ ಎಸ್ಟೇಟ್ ದಂಧೆಯಾಗಿರುವ ಸಿಆರ್‌ಇ ಸೆಲ್‌ನ್ನು ಪರಿಷ್ಕರಿಸಿ ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಬೇಕು ಎಂದರು.
ಪಿಟಿಸಿಎಲ್ ಕಾಯ್ದೆಗೆ ಸಮಗ್ರ ತಿದ್ದುಪಡಿ ಮಾಡಿ ದಲಿತರಿಗೆ ಮಂಜೂರಾಗಿರುವ ಜಮೀನನ್ನು ಪರಭಾರೆ ಮಾಡದಂತೆ ಹಾಗೂ ಪರಭಾರೆಯಾಗಿರುವ ಜಮೀನು ಹಿಂತಿರುಗಿಸಬೇಕು ಎಂದು ಆಗ್ರಹಿಸಿದರು. ಮೈಸೂರು ತಾಲ್ಲೂಕು ವರುಣ ಹೋಬಳಿವಾಜಮಂಗಲ ಸರ್ವೆ ನಂ.೯೬ರ ಜಮೀನುಗಳಲ್ಲಿ ೧೯೪೬ರಿಂದ ಉಳುಮೆ ಮಾಡುತ್ತಿರುವ ಪರಿಶಿಷ್ಟಜಾತಿ ರೈತರಿಗೆ ಕಾಯಂ ಸಾಗುವಳಿ ಚೀಟಿ ನೀಡಿ,ಮೈಸೂರಿನಿಂದ ಹತ್ತು ಕಿ.ಮೀ ವ್ಯಾಪ್ತಿಯೊಳಗೆ ಬರುವ ಕಾನೂನು ತೊಡಕುಗಳನ್ನು ನಿವಾರಿಸಲು ವಿಶೇಷ ಪ್ರಕರಣವೆಂದು ಪರಿಗಣಿಸುವಂತೆ ಒತ್ತಾಯಿಸಿದರು. ಜಿಲ್ಲಾಧ್ಯಕ್ಷ ಶಂಕರ್, ಗೌರವಾಧ್ಯಕ್ಷ ರಾಯನಹಳ್ಳಿ ಸ್ವಾಮಿ, ಸ್ವಾಮಿ, ಶ್ರೀನಿವಾಸ, ಬಾಲರಾಜು, ಮಂಜುನಾಥ್, ಶಿವಮ್ಮ, ಹನುಮಂತು,ರಾಚಯ್ಯ,ಶಂಕರ್,ಶೇಖರ್ ಮತ್ತಿತರರುಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
