ತರಾತುರಿಯಲ್ಲಿ ಜಾತಿಗಣತಿ ಸಮಾಜ ಒಡೆಯುವ ಉದ್ದೇಶ: ಯಧುವೀರ್

Pratheek
2 Min Read

ಪಬ್ಲಿಕ್ ಅಲರ್ಟ್

ಮೈಸೂರು: ರಾಜ್ಯ ಸರ್ಕಾರ ತರಾತುರಿಯಲ್ಲಿ ಜಾತಿಗಣತಿ ಮಾಡುತ್ತಿರುವುದರ ಹಿಂದೆ ಹಿಂದೂ ಸಮಾಜವನ್ನು ಒಡೆಯುವ ಉದ್ದೇಶವಿದ್ದು, ಇಂತಹ ವಿಭಜನೆಯ ವಿರುದ್ಧ ನಮ್ಮ ಹೋರಾಟ ಸದಾ ಇರಲಿದ್ದು, ಯಾವ ಕಾರಣಕ್ಕೂ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದರು. 

ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸೆ.22ರಿಂದ ಜಾತಿಗಣತಿ ನಡೆಸಲು ಮುಂದಾಗಿದೆ. ಆದರೆ ಈ ಹಿಂದೆ ಕಾಂತರಾಜು ಆಯೋಗದ ವರದಿಯನ್ನು ಸರ್ಕಾರ ಬಹಿರಂಗ ಮಾಡಲಿಲ್ಲ. ಮೂಲ ವರದಿಯನ್ನೇ ಬಹಿರಂಗ ಮಾಡದೆ ತಮಾಷೆ ಮಾಡಿದ ಸರ್ಕಾರ, ಕಾಂಗ್ರೆಸ್ ವರಿಷ್ಠರು ವರದಿ ತಿರಸ್ಕರಿಸಿದ ಕಾರಣ ಸಿಎಂ ಸಿದ್ದರಾಮಯ್ಯ ತೆಲಂಗಾಣ ಮಾದರಿಯಲ್ಲಿ ಗಣತಿ ಮಾಡಿಸುವ ನಿಟ್ಟಿನಲ್ಲಿ ಹೊಸ ವರದಿಗೆ ಸರ್ಕಾರ ಮುಂದಾಗಿದೆ‌ ಎಂದರು.

ಅಲ್ಲದೇ ಈ ವರದಿಯನ್ನು 10 ದಿನಗಳಲ್ಲಿ ಕೊಡಲು ಸಾಧ್ಯಾವೇ? ದಸರಾ ಸಮಯದಲ್ಲಿ ತರಾತುರಿಯಲ್ಲಿ ಗಣತಿ ಏಕೆ? ಎಂದು ಪ್ರಶ್ನಿಸಿರುವ ಅವರು, ಒಂದಷ್ಟು ಕೃತಕ ಉಪಜಾತಿಗಳನ್ನು ಸೇರಿಸಿಕೊಂಡಿದ್ದಾರೆ‌. ಕ್ರಿಶ್ಚಿಯನ್ ಕುರುಬ, ಕ್ರಿಶ್ಚಿಯನ್ ಗೌಡ, ಲಿಂಗಾಯತ‌ ಕ್ರಿಶ್ಚಿಯನ್ ಅಂತ ಸೇರಿಸಿದ್ದು, ಎಲ್ಲ ಉಪಜಾತಿಗಳನ್ನು ಕೈಬಿಡಬೇಕು. ಈ ಬಗ್ಗೆ ಈಗಾಗಲೇ ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ. ಹೊಸ ವರದಿಗೆ ನೂರಾರು ಕೋಟಿ ವ್ಯಯ ಮಾಡಲು ಹೊರಟಿದ್ದಾರೆ. ಕೇಂದ್ರದಿಂದ ಈಗಾಗಲೇ ಜಾತಿಗಣತಿ ನಡೆಯುತ್ತಿದ್ದು, ಇದರ ನಡುವೆ ರಾಜ್ಯದಲ್ಲಿ ನೀವು ಜಾತಿಗಣತಿ ಮಾಡಿ ಹಣ ಪೋಲು ಮಾಡಬೇಡಿ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ರಾಜಕೀಯ ಲಾಭಕ್ಕೆ ಗಣತಿ:
ದಸರಾ ಸಮಯದಲ್ಲಿ ಜನರು ಬೇರೆ ಕಡೆಗಳಿಗೆ ಹೋಗಲಿದ್ದು, ಅಧಿಕಾರಿಗಳು ದಸರಾ ಕೆಲಸದಲ್ಲಿ ತೊಡಗಿರುತ್ತಾರೆ. ಇಂತಹ ಸಮಯದಲ್ಲಿ ನಿಜವಾದ ದತ್ತಾಂಶ ಹೊರ ಬರಲು ಸಾಧ್ಯನಾ?, ಮನೆ ಮನೆಗೆ ಹೋಗಿ ಗಣತಿ ಮಾಡಲು ಆಗಲ್ಲ‌. ರಾಜಕೀಯಕ್ಕಾ ಲಾಭಕ್ಕಾಗಿ ಕಾಂಗ್ರೆಸ್ ಇದನ್ನು ಮಾಡುತ್ತಿದ್ದು, ಈ ಬಗ್ಗೆ ಕಾಂಗ್ರೆಸ್‌ನ ಹಲವು ಮಂತ್ರಿಗಳು ಒಪ್ಪುತ್ತಿಲ್ಲ. ಹೊಸ ಜಾತಿಗಣತಿ ಕೂಡ ಹಿಂದಿನ ಕಾಂತರಾಜು ವರದಿಯಂತೆ ಆಗಬಾರದು. 140 ಕೋಟಿ ರೂ. ವೆಚ್ಚದ ವರದಿ ಕಸದ ಬುಟ್ಟಿ ಸೇರಿದ್ದು, ಈಗ 400 ಕೋಟಿ ವ್ಯಯವಾಗಲಿದೆ. ಇದೆಲ್ಲಾ ಜನರ ತೆರಿಗೆ ಹಣವಾಗಿದ್ದು, ಇದನ್ನು ಪೋಲು ಮಾಡೋದು ಬೇಡ ಎಂದರು.

ಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಎಲ್.‌ ನಾಗೇಂದ್ರ, ಮಾಜಿ ಮೇಯರ್‌ ಶಿವಕುಮಾರ್‌, ಪ್ರಮುಖರಾದ ಗಿರಿಧರ್‌, ಮಹೇಶ್‌ ರಾಜೇ ಅರಸ್‌ ಇದ್ದರು.
====================
ಬಾಕ್ಸ್‌
ಮತಾಂತರಕ್ಕೆ ವೇದಿಕೆ
ಹೊಸದಾಗಿ ಜಾತಿಗಣತಿ ಮಾಡಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಮತಾಂತರಕ್ಕೆ ವೇದಿಕೆ ಕೊಡುತ್ತಿದ್ದಾರೆ ಎನಿಸುತ್ತದೆ. ಕಾಂಗ್ರೆಸ್ ವರಿಷ್ಠರು ಇರುವುದು ಅವರ ಪಕ್ಷಕ್ಕೆ‌ ಮಾತ್ರವೇ, ಆದರೆ ಸಿಎಂ, ಡಿಸಿಎಂ ಇರುವುದು ಜನರ ಸಮಸ್ಯೆಯನ್ನು ಬಗೆಹರಿಸಲಿಕ್ಕೆ ಹೊರತು, ಕಾಂಗ್ರೆಸ್ ಹೈಕಮಾಂಡ್ ಹೇಳಿದ್ದನ್ನು ಮಾಡಲು ಅಲ್ಲ ಎಂದು ಸಂಸದ ಯದುವೀರ್‌ ಒಡೆಯರ್‌ ಟೀಕಿಸಿದರು.
===================
ಕೋಟ್‌
ಧಾರ್ಮಿಕ ವಿಚಾರವಾಗಿ ಬಾನು ಮುಷ್ತಾಕ್ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ‌.
ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಯಾವ ರೀತಿ ನಡೆದುಕೊಳ್ಳುತ್ತಾರೆ ನೋಡೋಣ. ನಮ್ಮ ಆಚರಣೆಗೆ ಧಕ್ಕೆ ಬರದಂತೆ ನಡೆದುಕೊಂಡರೆ ಅದೇ ಅವರ ಸ್ಪಷ್ಟನೆ.

ಯದುವೀರ್ ಒಡೆಯರ್,
ಸಂಸದ.
=================
ಕೋಟ್‌
ಬಾನು ಮುಷ್ತಾಕ್ ನಡವಳಿಕೆ ವಿರುದ್ಧ ನಾವು ಧ್ವನಿ ಎತ್ತಿದ್ದೇವೆ. ನಾಡಹಬ್ಬ ದಸರಾ ದೇಶವೇ ನೋಡುವ ಹಬ್ಬ‌‌ ಹಾಗೂ ನಮ್ಮೂರ ಹಬ್ಬವಾಗಿದ್ದು, ನಾವು ಅದರಲ್ಲಿ ಭಾಗಿಯಾಗುತ್ತೇವೆ‌. ದಸರಾ ಉದ್ಘಾಟನೆ ಸಂದರ್ಭದಲ್ಲಿ  ಬಿಜೆಪಿ ಯಾವುದೇ ಪ್ರತಿಭಟನೆ ಮಾಡಲ್ಲ. ಉದ್ಘಾಟನೆಯ ವೇಳೆ ಬಾನು ಮುಷ್ತಾಕ್ ನಡವಳಿಕೆ ನೋಡುತ್ತೇವೆ. ನಮ್ಮ ಧರ್ಮಕ್ಕೆ ಧಕ್ಕೆ ಬರುವಂತೆ ವರ್ತಿಸಿದರೆ ಆ ಬಗ್ಗೆ ಮುಂದೆ ತೀರ್ಮಾನ ಮಾಡುತ್ತೇವೆ.

ಟಿ.ಎಸ್‌. ಶ್ರೀವತ್ಸ, ಶಾಸಕ.

Share This Article
Leave a Comment