ಪಬ್ಲಿಕ್ ಅಲರ್ಟ್
ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಇಂದು ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಮಹಾರಥೋತ್ಸವ ವೈಭವ ಹಾಗೂ ಅದ್ಧೂರಿಯಾಗಿ ನಡೆಯಿತು. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಥೋತ್ಸವಕ್ಕೆ ಸಂಭ್ರಮದಿಂದ ಚಾಲನೆ ನೀಡಿದರು.
ಬೆಳಗ್ಗೆ ಬೆಟ್ಟದ ಮೂಲ ಚಾಮುಂಡಿ ತಾಯಿಗೆ ಮೊದಲು ಪೂಜೆ ಸಲ್ಲಿಸಲಾಯಿತು. ರಾಜಮಾತೆ ಪ್ರಮೋದಾ ದೇವಿ ಒಡೆಯರ್, ಯದುವೀರ್ ಹಾಗೂ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಭಾಗವಹಿಸಿದ್ದರು. ಮೂಲ ಚಾಮುಂಡೇಶ್ವರಿ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಉತ್ಸವ ಮೂರ್ತಿಯನ್ನು ದೇವಾಲಯದಿಂದ ಹೊರಭಾಗಕ್ಕೆ ಉತ್ಸವದ ಮೂಲಕ ತರಲಾಯಿತು. ಬೆಳಗ್ಗೆ 9.36 ರಿಂದ 9.58ರೊಳಗೆ ಸಲ್ಲುವ ಶುಭ ಲಗ್ನದಲ್ಲಿ ಬೆಟ್ಟದ ದೇವಾಲಯದ ಮುಂಭಾಗ ಶುಭ ಮುಹೂರ್ತದಲ್ಲಿ ರಥೋತ್ಸವಕ್ಕೆ ಯದುವೀರ್ ಚಾಲನೆ ಕೊಟ್ಟರು.
ನಾಡದೇವಿಗೆ ವಿಶೇಷ ಅಲಂಕಾರ: ಮೂಲ ತಾಯಿಗೆ ವಿಶೇಷ ಸಿಂಹವಾಹಿನಿ ಅಲಂಕಾರ ಮಾಡಲಾಗಿದ್ದು, ದೇವಾಲಯವನ್ನು ವಿಶೇಷ ಹೂವುಗಳಿಂದ ಅಲಂಕರಿಸಲಾಗಿತ್ತು. ನವರಾತ್ರಿಯ ನಂತರ ಬರುವ ಮಹಾರಥೋತ್ಸವದಲ್ಲಿ ಬೆಟ್ಟದ ಗ್ರಾಮಸ್ಥರು ಹಾಗೂ ಕ್ಯಾತಮಾರನಹಳ್ಳಿ ಗ್ರಾಮಸ್ಥರು ಪಾಲ್ಗೊಂಡು ರಥ ಎಳೆದರು. ಇದೇ ವೇಳೆ ನೆರೆದಿದ್ದ ಲಕ್ಷಾಂತರ ಭಕ್ತರು ರಥ ಎಳೆಯುತ್ತಿದ್ದಂತೆ ಚಾಮುಂಡೇಶ್ವರಿಗೆ ಜೈಕಾರ ಕೂಗಿ ಹಣ್ಣು, ಜವನ ಅರ್ಪಿಸಿದರು. ಒಂದೂವರೆ ಗಂಟೆಗಳ ಕಾಲ ಒಂದು ಸುತ್ತು ಬಂದ ಮಹಾರಥೋತ್ಸವ ಅಂತಿಮವಾಗಿ ಸ್ವಸ್ಥಾನಕ್ಕೆ ಮರಳಿತು. ಜತೆಗೆ ಬೆಟ್ಟದ ಜನತೆ ಮೂಲ ಚಾಮುಂಡಿ ತಾಯಿಯ ದರ್ಶನ ಪಡೆದು ಸಂಭ್ರಮಿಸಿದರು.





“ಚಾಮುಂಡಿ ತಾಯಿಯ ರಥೋತ್ಸವ ಚೆನ್ನಾಗಿ ನಡೆಯಿತು. ಈ ವರ್ಷ ದಸರಾ ಕೂಡ ಚೆನ್ನಾಗಿ ಆಗಿದೆ. ರಾಜ್ಯದ ಜನರಿಗೆ ಒಳ್ಳೆಯದಾಗಲಿ” ಎಂದು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಹಾಗೂ ಯದುವೀರ್ ಒಡೆಯರ್ ಆಶಿಸಿದರು.
ಕುಶಾಲ ತೋಪಿನ ಗೌರವ: ಜಂಬೂಸವಾರಿಯ ಸಂದರ್ಭದಲ್ಲಿ ಚಿನ್ನದ ಅಂಬಾರಿಯಲ್ಲಿ ಕುಳಿತ ಚಾಮುಂಡೇಶ್ವರಿಗೆ ಗಣ್ಯರು ಪುಷಾರ್ಚನೆ ಮಾಡುವ ಸಂದರ್ಭದಲ್ಲಿ 21 ಸುತ್ತು ಕುಶಾಲ ತೋಪು ಸಿಡಿಸುವುದು ಪದ್ಧತಿ. ಅದೇ ರೀತಿ ಬೆಟ್ಟದಲ್ಲಿ ಮಹಾರಥೋತ್ಸವದ ಸಂದರ್ಭದಲ್ಲಿ ರಥೋತ್ಸವಕ್ಕೆ ರಾಜವಂಶಸ್ಥರು ಚಾಲನೆ ನೀಡುವ ಸಂದರ್ಭದಲ್ಲೂ ಫಿರಂಗಿದಳದ ಸಿಬ್ಬಂದಿ 21 ಸುತ್ತು ಕುಶಾಲತೋಪುಗಳನ್ನು ಸಿಡಿಸಿ ಗೌರವ ವಂದನೆ ಸಲ್ಲಿಸಿದರು. ಈ ವೇಳೆ ಶಾಸಕ ಜಿ.ಟಿ.ದೇವೇಗೌಡ, ಪತ್ನಿ ಲಲಿತಾ ಜಿ.ಟಿ.ದೇವೇಗೌಡ, ಯಧುವೀರ ಅವರ ಪತ್ನಿ ತ್ರಿಷಿಕಕುಮಾರಿ, ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್, ಶ್ರೀ ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪ ಇನ್ನಿತರರು ಉಪಸ್ಥಿತರಿದ್ದರು.
ರಥೋತ್ಸವ ಜರುಗಿದ ಎರಡು ದಿನದ ನಂತರ ಅ.8ರಂದು ಸಂಜೆ 6 ಗಂಟೆ ನಂತರ ಚಾಮುಂಡಿಬೆಟ್ಟದ ದೇವಿಕೆರೆಯಲ್ಲಿ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಗೆ ತೆಪ್ಪೋತ್ಸವ ಸೇವೆ ಜರುಗಲಿದೆ. ತೆಪ್ಪೋತ್ಸವದ ವೇಳೆ ರಾಜವಂಶಸ್ಥರು ಪಾಲ್ಗೊಳ್ಳಲಿದ್ದಾರೆ. ತೆಪ್ಪೋತ್ಸವದ ಮೂಲಕ ಈ ಸಾಲಿನ ದಸರಾ ಮಹೋತ್ಸವದ ಧಾರ್ಮಿಕ ಕಾರ್ಯ ಸಂಪನ್ನಗೊಳ್ಳಲಿದೆ.
