ಪಬ್ಲಿಕ್ ಅಲರ್ಟ್
ಮೈಸೂರು: ಸಿಎಂ ಪುತ್ರ ಹಾಗೂ ಎಂಎಲ್ಸಿ ಆಗಿರುವ ಡಾ. ಯತೀಂದ್ರ ಸಿದ್ದರಾಮಯ್ಯ ಕಲೆಕ್ಷನ್ ಮಾಸ್ಟರ್ ಎಂಬ ಸುಳ್ಳು ಆರೋಪ ಮಾಜಿ ಸಂಸದ ಪ್ರತಾಪ್‌ಸಿಂಹ ಮಾಡಿದ್ದಾರೆ. ವಾಸ್ತವವಾಗಿ ಯಡಿಯೂರಪ್ಪನವರ ಅವಧಿಯಲ್ಲಿ ಅವರ ಪುತ್ರ ವಿಜೇಂದ್ರ ಅವರೇ ವರ್ಗಾವಣೆ ದಂಧೆ ನಡೆಸುತ್ತಿದ್ದುದು ಎಲ್ಲರಿಗೂ ತಿಳಿದಿದೆ. ಈ ಆರೋಪ ಸ್ವತಃ ಬಸವರಾಜ ಪಾಟೀಲ್ ಯತ್ನಾಳ್ ಅವರೇ ಮಾಡಿದ್ದರೆಂಬುದನ್ನು ನೆನಪಿಸಿಕೊಳ್ಳಬಹುದಾಗಿದೆ ಎಂದು ನಗರ ಕಾಂಗ್ರೆಸ್ ವಕ್ತಾರ ಎಸ್. ರಾಜೇಶ್ ಲೇವಡಿ ಮಾಡಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಚುನಾವಣಾ ಬಾಂಡ್ ಮೂಲಕ ಅಂಬಾನಿ ಮೊದಲಾದ ಉದ್ಯಮಿಗಳಿಂದ ಸಾವಿರಾರು ಕೋಟಿ ರೂ.,ಗಳನ್ನು ಪ್ರಧಾನಿ ಕಲೆಕ್ಷನ್ ಮಾಡಿದ್ದಾರೆ. ವಿಜೇಂದ್ರ ಅವರ ಬ್ಯಾಂಕ್ ಖಾತೆಗೆ ಆರ್‌ಟಿಜಿ ಮೂಲಕ ಅಕ್ರಮ ಹಣ ವರ್ಗಾವಣೆ ಆಗಿರುವುದು ರಾಜ್ಯದ ಜನತೆಗೆ ತಿಳೀಯದೇ ಎಂದು ಲೇವಡಿ ಮಾಡಿದರು.
ಪ್ರತಾಪ್‌ಸಿಂಹ ಸಂಸದ ಆಗಿದ್ದಾಗ ನಡೆದ ಕ್ಯಾತಮಾರನಹಳ್ಳಿ ರಾಜು ಕೊಲೆ ಪ್ರಕರಣ ಮೂಲಕ ಉದಯಗಿರಿಯಲ್ಲಿ ಕೋಮು ಗಲಭೆ, ಧರ್ಮ ಧರ್ಮಗಳ ಸಂಘರ್ಷ ಬಿತ್ತುವ ಯತ್ನ ನಡೆದು ಭಯದ ವಾತಾವರಣ ನಿರ್ಮಾಣವಾಗಿತ್ತು. ಮೈಸೂರು ಪೊಲೀಸರು ದಕ್ಷತೆಯಿಂದ ಕೆಲಸ ಮಾಡುತ್ತಿದ್ದು, ಬಾಲಕಿ ಕೊಲೆ ಆದ ೨೪ ಗಂಟೆಗಳಲ್ಲಿಯೇ ಆರೋಪಿಯನ್ನು ಬಂಧಿಸಿದ್ದಾರೆ ಎಂದರು.
ಒರಿಸ್ಸಾದಲ್ಲಿ ಮಹಿಳೆಯ ಬೆತ್ತಲೆ ಮೆರವಣಿಗೆ, ಲೈಂಗಿಕ ದೌರ್ಜನ್ಯ, ಮೊದಲಾದ ಬಗ್ಗೆ ಪ್ರತಾಪ್‌ಸಿಂಹ ಏಕೆ ಧ್ವನಿಯೆತ್ತುತ್ತಿಲ್ಲ ಎಂದು ಪ್ರಶ್ನಿಸಿ, ಡಾ.ಎಚ್.ಸಿ. ಮಹದೇವಪ್ಪ ದಲಿತ ಸಮುದಾಯವನ್ನು ನಿರ್ಲಕ್ಷಿಸಿಲ್ಲ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾತಿಗೆ ತಪ್ಪದೇ ಮಾದಿಗ ಸಮುದಾಯಕ್ಕೆ ಶೇ. ೬ ಮೀಸಲಾತಿ ನೀಡಿದೆ ಎಂದರು.
ಮತ್ತೋರ್ವ ದಲಿತ ಮುಖಂಡ ಭಾಸ್ಕರ್ ಪ್ರಸಾದ್ ಅವರು ಕೆ.ಎಚ್. ಮುನಿಯಪ್ಪ ಅವರ ಕ್ಷೇತ್ರದಲ್ಲಿ, ಅರುಣ್‌ಕುಮಾರ್ ಟಿ. ನರಸೀಪುರ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುವ ಉದ್ದೇಶದಿಂದ ಬಿಜೆಪಿ, ಆರ್‌ಎಸ್‌ಎಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದರು. ಈಗ ಮಹದೇವಪ್ಪ ವಿರುದ್ಧ ಆರೊಪ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು. ಕಾಂಗ್ರೆಸ್ ಮುಖಂಡರಾದ ಕೇಶವ, ಸೈಹದ್ ಫಾರುಕ್, ಎಸ್.ಎ.ರಹೀಂ, ಕುಕ್ಕರಹಳ್ಳಿ ನಂಜುಂಡಸ್ವಾಮಿ, ರವಿ, ಮದನ್ ಇದ್ದರು.
