ಪಬ್ಲಿಕ್ ಅಲರ್ಟ್
ಮೈಸೂರು: ಧರ್ಮಸ್ಥಳದಲ್ಲಿ ಸೌಜನ್ಯ ಕೊಲೆಯಾಗಿ ೧೩ ವರ್ಷ ಸಂದಿದ್ದು, ಇನ್ನೂ ನೈಜ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ. ಈ ಪ್ರಕರಣದೊಂದಿಗೆ ಅಲ್ಲಿ ದಾಖಲಾದ ಅಸಹಜ ಸಾವಿನ ಪ್ರಕರಣಗಳ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ಹಾಗೂ ಸಮಾನ ಮನಸ್ಕ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
೨೦೧೨ರ ಅ.೯ರಂದು ಧರ್ಮಸ್ಥಳದ ಸೌಜನ್ಯ ಅತ್ಯಾಚಾರ-ಕೊಲೆಯಾಗಿತ್ತು. ಬಳಿಕ ಹಲವು ತನಿಖೆ ನಡೆದರೂ ನೈಜ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ. ಹೀಗಾಗಿ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸದ, ಪ್ರಕರಣದ ಸೂಕ್ತ ತನಿಖೆ ನಡೆಸದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಸೂಕ್ತ ಎಂಬ ವಿಶೇಷ ನ್ಯಾಯಾಲಯದ ಆದೇಶವನ್ನು ಸರ್ಕಾರ ಪಾಲಿಸಬೇಕು. ಸೌಜನ್ಯ ಅತ್ಯಾಚಾರ-ಕೊಲೆಯ ನೈಜ ಆರೋಪಿಗಳನ್ನು ಬಂಧಿಸಲು ಸೂಕ್ತ ರೀತಿಯ ಕ್ರಮ, ತನಿಖೆಗೆ ಸರ್ಕಾರ ಆದೇಶಿಸಬೇಕು. ಧರ್ಮಸ್ಥಳ ವ್ಯಾಪ್ತಿಯಲ್ಲಿ ಕಳೆದ ೨೦ ವರ್ಷಗಳಲ್ಲಿ ದಾಖಲಾಗಿರುವ ನೂರಾರು ಅಸಹಜ ಸಾವುಗಳ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಧರ್ಮಸ್ಥಳದಲ್ಲಿ ದುಡಿಯುವ ಸ್ವಚ್ಚತಾ ಕಾರ್ಮಿಕರಿಗೆಂದೇ ಅಶೋಕ ನಗರ ದಲಿತ ಕಾಲನಿ ನಿರ್ಮಿಸಲಾಗಿದೆ. ತಲೆತಲಾಂತರಗಳಿಂದ ಅಶೋಕನಗರದಲ್ಲೇ ವಾಸಿಸುತ್ತಿದ್ದರೂ ಇನ್ನೂ ಮನೆಯ ಅಡಿಸ್ಥಳವನ್ನು ದಲಿತರ ಹೆಸರಿಗೆ ಹಕ್ಕು ಪತ್ರ ನೀಡಲಾಗಿಲ್ಲ. ಸ್ವಚ್ಛತಾ ಕಾರ್ಮಿಕರು ಕುಸಿದಿರುವ, ತೂತಾಗಿರುವ ಮನೆಗಳಲ್ಲಿ ಹೀನಾಯ ಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ. ಸ್ವಚ್ಛತಾ ಕಾರ್ಮಿಕರಿಗೆ ಕಾರ್ಮಿಕ ಕಾಯ್ದೆಯಂತೆ ಸಂಬಳ ನೀಡಲಾಗುತ್ತಿದೆಯೇ ಎಂಬುದನ್ನು ಖಾತರಿಪಡಿಸಬೇಕು. ಧರ್ಮಸ್ಥಳ ಅಶೋಕನಗರದ ೧೨೮ ದಲಿತ ಕುಟುಂಬಗಳು, ಮುಂಡುಪಾಡಿಯ ೪೨ ದಲಿತ ಕುಟುಂಬಗಳು ಮತ್ತು ಗ್ರಾಮದ ಇತರ ದಲಿತ ಕುಟುಂಬಗಳಿಗೆ ತಲಾ ಒಂದು ಎಕ್ರೆ ಸರಕಾರಿ ಭೂಮಿಯನ್ನು ಸರ್ಕಾರ ಕೊಡಿಸಬೇಕು. ಗ್ರಾಮೀಣಾಭಿವೃದ್ಧಿ ಯೋಜನೆಯ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಅಪರಾಧ ನಡೆಯುತ್ತಿದ್ದು, ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ನೀಡುತ್ತಿರುವ ಕಿರುಕುಳ ತಪ್ಪಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಂಗಕರ್ಮಿ ಬಸವಲಿಂಗಯ್ಯ, ರಂಗಾಯಣ ಮಾಜಿ ನಿರ್ದೇಶಕ ಜನಾರ್ಧನ್ (ಜನ್ನಿ), ಬೆಟ್ಟಯ್ಯಕೋಟೆ ಕಾಳಚನ್ನೇಗೌಡ, ಒಡನಾಡಿಯ ಪರಶುರಾಮ್, ಹೊಸಕೋಟೆ ಬಸವರಾಜು, ಮರಂಕಯ್ಯ, ಚಂದ್ರಶೇಖರ ಮೇಟಿ ಸೇರಿದಂತೆ ಹಲವರು ಭಾಗವಹಿಸಿದ್ದರು.
