ಪಬ್ಲಿಕ್ ಅಲರ್ಟ್
ಮೈಸೂರು: ಮೈಸೂರಿನಂತಹ ಸಾಂಸ್ಕೃತಿಕ ನಗರಿಯಲ್ಲಿ ಸದಾ ಒಂದಿಲ್ಲೊಂದು ಕಲಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರಬೇಕು. ಈ ನಿಟ್ಟಿನಲ್ಲಿ ಜಗನ್ನಾಥ ಸೆಂಟರ್ ಫಾರ್ ಆರ್ಟ್ ಅಂಡ್ ಕಲ್ಚರ್ ವತಿಯಿಂದ ಕಲಾ ಸಪ್ತಮಿ ಎಂಬ ಸಾಪ್ತಾಹಿಕ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಸರಸ್ವತಿ ಎಜುಕೇಶನ್ ಹಾಗೂ ಕಲ್ಚರಲ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ.ಎಂ.ಜಗನ್ನಾಥ ಶಣೈ ತಿಳಿಸಿದರು.
ನಗರದ ಜಗನ್ನಾಥ ಸೆಂಟರ್ ಫಾರ್ ಆರ್ಟ್ ಅಂಡ್ ಕಲ್ಚರ್‌ನಲ್ಲಿ ಬುಧವಾರ ನಡೆದ ʼಕಲಾ ಸಪ್ತಮಿʼ ಸರಣಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸ್ಥಳವನ್ನು ನಿರ್ಮಾಣ ಮಾಡಿರುವ ಹಿಂದಿನ ಉದ್ದೇಶವೇ ಕಲಾಪೋಷಣೆ. ಸಂಗೀತ, ನೃತ್ಯ, ಕಲಾಪ್ರದರ್ಶನ ಮುಂತಾದ ಕಾರ್ಯಕ್ರಮಗಳನ್ನು ಇಲ್ಲಿ ನಡೆಸಬಹುದು. ಕಲಾಸಪ್ತಮಿ ಸರಣಿಯ ಅಂಗವಾಗಿ ಪ್ರತಿ ಬುಧವಾರ ಈ ಸ್ಥಳದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಎಲ್ಲರಿಗೂ ಉಚಿತ ಪ್ರವೇಶ ಇರುತ್ತದೆ ಎಂದು ತಿಳಿಸಿದರು.
ನಂತರ ಗಾನಭಾರತಿಯ ಡಾ.ಸಿ.ಜಿ.ನರಸಿಂಹನ್ ಮಾತನಾಡಿ, ಕಲಾ ಸಪ್ತಮಿ ಎಂಬುದು ಅದ್ಭುತ ಕಲ್ಪನೆ. ಈ ಸರಣಿಯ ಅಡಿಯಲ್ಲಿ ವಿವಿಧ ಪ್ರತಿಭಾನ್ವಿತ ಕಲಾವಿದರಿಗೆ ಉತ್ತಮ ವೇದಿಕೆ ಹಾಗೂ ಅವಕಾಶ ಸಿಗಲಿದೆ. ಇದರಿಂದಾಗಿ ಕಲಾಪೋಷಣೆ ಆಗುತ್ತದೆ. ಮೈಸೂರಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಿದಾಗ ಹಾಗೂ ಹೆಚ್ಚಿನ ಕಲಾವಿದರು ಇದರಲ್ಲಿ ಭಾಗವಹಿಸಿದಾಗ ಮಾತ್ರ ಈ ಪ್ರಯತ್ನ ಯಶಸ್ವಿಯಾಗುತ್ತದೆ ಎಂದು ತಿಳಿಸಿದರು.
ನಂತರ ವಿದೂಷಿ ಸುಕನ್ಯಾ ರಾಮಗೋಪಾಲ್ ಹಾಗೂ ತಂಡದ ವತಿಯಿಂದ ʼಸ್ತ್ರೀ ತಾಳ್ ತರಂಗ್ ಎಂಬ ಘಟ ತರಂಗ್ ಹಾಗೂ ಘಟಂ ಕೊನಕ್ಕೂಲ್ ಪ್ರದರ್ಶನ ನಡೆಯಿತು. ವಾಣಿ ಮಂಜುನಾಥ್ ಕೊಳಲು ವಾದನ ಮಾಡಿದರೆ ಲಕ್ಷ್ಮೀ ರಾಜಶೇಖರ್ ಹಾಗೂ ದೀಪಿಕಾ ಶ್ರೀನಿವಾಸನ್ ಮೃದಂಗದಲ್ಲಿದ್ದರು. ಕಲಾ ಸಪ್ತಮಿಯ ಸಂಯೋಜಕರಾದ ವಿ.ಮಾನಸ ನಯನ, ವಿ.ಕೃಪಾ ಫಡ್ಕೆ, ಡಾ.ರಮಾ ವಿ.ಬೆಣ್ಣೂರ್, ರಮಾನಾಥ್, ಸಾಯಿ ಶಿವ್ ಹಾಗೂ ಇತರರು ಕಾರ್ಯಕ್ರಮದಲ್ಲಿದ್ದರು.