ಕೈಗಾರಿಕೆಗಳ ತೆರಿಗೆ ಹಣ ಮೂಲ ಸೌಕರ್ಯ ಅಭಿವೃದ್ಧಿಗೆ ಬಳಕೆ:ಎಂ.ಬಿ.ಪಾಟೀಲ

Pratheek
4 Min Read

ಪಬ್ಲಿಕ್ ಅಲರ್ಟ್


ಮೈಸೂರು: ಕೈಗಾರಿಕಾ ಎಸ್ ಐಆರ್ ಅನ್ನು ಜಾರಿಗೆ ತರುತ್ತಿದ್ದು, ಕೈಗಾರಿಕೆಗಳಿಂದ ಪಡೆದ ತೆರಿಗೆ ಹಣವನ್ನು ಅಲ್ಲಿನ ಮೂಲ ಸೌಕರ್ಯ ಅಭಿವೃದ್ಧಿ ಬಳಸುವಂತೆ ಎಸ್ ಐಆರ್ ಯೋಜನೆ ರೂಪಿಸಲಾಗುತ್ತಿದ್ದು, ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ದಿ ಪಡಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಭರವಸೆ ನೀಡಿದರು. 
ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಮೈಸೂರಿನ ವಿವಿಧ ಕೈಗಾರಿಕಾ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ನಮ್ಮ ರಾಜ್ಯ ದೇಶದಲ್ಲಿ ಮಾದರಿ ಕೈಗಾರಿಕಾ ರಾಜ್ಯವಾಗಬೇಕು. ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ನಾವು ಅಧಿಕಾರಕ್ಕೆ ಬಂದ ನಂತರ ಕೈಗಾರಿಕಾ ಪ್ರದೇಶಗಳ ರಸ್ತೆಗಳ ಅಭಿವೃದ್ಧಿಗೆ ಕ್ರಮವಹಿಸಲಾಗಿದೆ. ಹಿಂದೆ ಕೈಗಾರಿಕೆಗಳಿಂದ ತೆರಿಗೆ ಪಡೆದು ಗ್ರಾಮ ಪಂಚಾಯತ್ ಹಾಗೂ ನಗರ ಸಭೆ ಆ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಲಾಗುತ್ತಿತ್ತು. ಇನ್ನೂ ಮುಂದೆ ಕೈಗಾರಿಕೆಗಳಿಂದ ಪಡೆದ ಹಣವನ್ನು ಅಲ್ಲಿನ ಮೂಲ ಸೌಕರ್ಯ ಅಭಿವೃದ್ಧಿ ಬಳಸುವಂತೆ ಎಸ್ ಐ ಆರ್ ಯೋಜನೆ ರೂಪಿಸಲಾಗುತ್ತಿದೆ. ಇದರಿಂದ ಕೈಗಾರಿಕೆ ಪ್ರದೇಶಗಳ ರಸ್ತೆ, ಚರಂಡಿ, ಮೂಲ ಸೌಕರ್ಯ ಅಭಿವೃದ್ಧಿ ಸಾಧ್ಯವಾಗುತ್ತದೆ.ಹಿಮ್ಮಾವು ಕೈಗಾರಿಕಾ ಪ್ರದೇಶದಲ್ಲಿ ಪರಿಹಾರ ವಿತರಣೆಯಲ್ಲಿ ಆಗಿರುವ ಲೋಪ ದೋಷ ಕುರಿತು ತನಿಖೆ ಮಾಡಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ರಾಜ್ಯದಲ್ಲಿ ನಮ್ಮಿಂದ ಕೈಗಾರಿಕಾ ಭೂಮಿ ನೀಡುವಲ್ಲಿ ವಿಳಂಬ ಆಗಿರುವ ಕೈಗಾರಿಕೆಗಳಿಗೆ ಇಂಪಿಮೆಂಟೇಷನ್ ಅವಧಿಯನ್ನು ವಿಸ್ತರಣೆ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಜಿಲ್ಲಾ ಕೈಗಾರಿಕಾ ಸಂಘಗಳ  ಅಧ್ಯಕ್ಷ ಕೆ.ಬಿ.ಲಿಂಗರಾಜು ಮಾತನಾಡಿ, ಹೂಟಗಳ್ಳಿ ನಗರಸಭೆಗೆ ತೆರಿಗೆ ಕಟ್ಟಿದ್ದೇವೆ. ರಸ್ತೆ ಅಭಿವೃದ್ಧಿಗೆ ನಗರಸಭೆ ಟೆಂಡರ್ ಕರೆದಿದ್ದು ಅನೇಕ ತಿಂಗಳೇ ಕಳೆದಿದೆ. 2013ರಿಂದ ನಿವೇಶನಗಳಿಗೆ ಹಣ ಕಟ್ಟಿದ್ದರೂ ನಿವೇಶನ ನೀಡಿಲ್ಲ. ಹೆಬ್ಬಾಳ ಕೈಗಾರಿಕಾ ಪ್ರದೇಶಕ್ಕೆ ಬಸ್ ಗಳ ವ್ಯವಸ್ಥೆ ಸರಿಯಾಗಿ ಇಲ್ಲ. ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಬಳಿ ಪ್ಲೇ ಓವರ್ ನಿರ್ಮಾಣದಿಂದ ಅನೂಕೂಲ ಆಗಲಿದೆ. ಈ ಬಗ್ಗೆ ಸಿಎಂ ಅವರಿಗೂ ತಿಳಿಸಿದ್ದು, ಅವರು ಅಂದಾಜು ಪಟ್ಟಿ ಕೇಳಿದ್ದು ನಿಮ್ಮ ಅವಧಿಯಲ್ಲೇ ಮಾಡಿಕೊಡಬೇಕೆಂದರು. ಹೆಬ್ಬಾಳು ಮತ್ತು ಮೇಟಗಳ್ಳಿ ಕೈಗಾರಿಕಾ ವಸಾಹತುಗಳಲ್ಲಿ ಮೂಲಭೂತ ಸೌಕರ್ಯದ ಕೊರತೆ ಸರಿಪಡಿಸಿಕೊಡಿ. ಕೈಗಾರಿಕಾ ಪ್ರದೇಶದಲ್ಲಿರುವ ಎಲ್ಲಾ ರಸ್ತೆಗಳೂ ತುಂಬಾ ಹಾಳಾಗಿದ್ದು, ಕೈಗಾರಿಕಾ ಸರಕು ಸಾಗಣಿಕೆಯನ್ನು ಮಾಡಲು ಬಹಳ ಕಷ್ಟಕರವಾಗಿರುತ್ತದೆ. ಇದರಿಂದ ಕೈಗಾರಿಕಾ ಬೆಳವಣಿಗೆಗೆ ತೊಡಕಾಗುವ ಸಾಧ್ಯತೆಯಿದೆ. ಹಾಗಾಗಿ ಮುಂಬರುವ ಆಯವ್ಯಯದಲ್ಲಿ ಸುಮಾರು ೮೦ ಕೋಟಿ ರೂ ಹಣ ಮೀಸಲಿಡುವಂತೆ ಕೋರಿದರು.
ಕೈಗಾರಿಕಾ ಪ್ರದೇಶಗಳಲ್ಲಿ ಕಸದ ವಿಲೇವಾರಿ ಯೋಜನೆಯಿಲ್ಲದೆ, ಎಲ್ಲಾ ರಸ್ತೆಗಳಲ್ಲಿ ಕಸದ ರಾಶಿ ತುಂಬಿದ್ದು, ಬಹಳ ಅಸ್ತವ್ಯಸ್ತವಾಗಿದೆ. ಹಾಗಾಗಿ, ಕೈಗಾರಿಕಾ ವಲಯ ಹಾಗೂ ವಸಾಹತುಗಳಲ್ಲಿ ಸೂಕ್ತ ರೀತಿಯಲ್ಲಿ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಅಲ್ಲಿಯ ಸಂಘ ಸಂಸ್ಥೆಗಳಿಗೆ ಘಟಕಗಳನ್ನು ಸ್ಥಾಪಿಸಲು ಅನುಮತಿ ನೀಡಿ ಪ್ರಾರಂಭಿಕ ಅನುದಾನವನ್ನು ನೀಡಬೇಕಿದೆ. 
ಹೆಬ್ಬಾಳು ಕೈಗಾರಿಕಾ ಪ್ರದೇಶ ೨ನೇ ಹಂತಕ್ಕೆ ಕೆ.ಎಸ್.ಆರ್.ಟಿ.ಸಿ. ಸಾರಿಗೆ ವ್ಯವಸ್ಥೆಯಿಲ್ಲದೆ ಕಾರ್ಮಿಕರಿಗೆ ಬಹಳ ತೊಂದರೆಯಾಗಿದೆ. ಬಸ್ತಿಪುರ, ಎನ್.ಐ.ಇ. ಐಟಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಅಲ್ಲಿರುವ ಸುಮಾರು ೧೦೦ ಕ್ಕೂ ಹೆಚ್ಚು ಮನೆಗಳಿರುವ ನಾಗರೀಕರಿಗೆ ಇದರಿಂದ ಬಹಳ ಅನಾನುಕೂಲವಾಗಿದೆ. ಜಿಲ್ಲಾಧಿಕಾರಿಗಳ ಏಕಗವಾಕ್ಷಿ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಿ, ಬಸ್ ವ್ಯವಸ್ಥೆಯ ಬಗ್ಗೆ ಮಾರ್ಗೋಪಾಯವನ್ನು ತಿಳಿಸಿದ್ದು, ಸಾರಿಗೆ ಸಚಿವ ರಾಮಲಿಂಗರೆಡ್ಡಿ ಗಮನಕ್ಕೂ ತರಲಾಗಿದ್ದರೂ, ಯಾವುದೇ ಕಾರ್ಯ ಪ್ರವೃತ್ತಿಯಾಗಿಲ್ಲ. ಹೀಗಾಗಿ ಇನ್ಫೋಸಿಸ್ ಗೆ ಬರುವ ಬಸ್ ಗಳನ್ನು ಒಂದೂವರೆ ಕಿಲೋಮೀಟರ್ ವಿಸ್ತರಿಸಿ, ಹೆಬ್ಬಾಳು ಕೈಗಾರಿಕಾ ಪ್ರದೇಶ ೨ ನೇ ಹಂತದವರೆಗೂ, ಬಿ.ಇ.ಎಂ.ಎಲ್.- ಕೆ.ಆರ್.ಎಸ್. ರಸ್ತೆಗೆ ಸಂಪರ್ಕ ಕಲ್ಪಿಸಿದರೆ, ಕಾರ್ಮಿಕರಿಗೆ ಬಹಳ ಅನುಕೂಲವಾಗುತ್ತದೆ.
ಸೂಕ್ಷ್ಮ ಹಾಗೂ ಸಣ್ಣ ಉದ್ಯಮಗಳು ಸಂಕಷ್ಟದಲ್ಲಿದ್ದು ಅವುಗಳ ಉತ್ತೇಜನಕ್ಕೆ ಕಾರ್ಪಸ್ ಫಂಡ್ ನ ವಿಶೇಷ ಪ್ಯಾಕೇಜನ್ನು ನೀಡಿ, ವಿತರಣಾ ಸಮಿತಿಯಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಿ ಉದ್ಯಮಗಳ ಪುನಶ್ಚತನಕ್ಕೆ ಸಹಕಾರ ನೀಡಲು ಕೋರುತ್ತೇವೆ. ಐದು ವರ್ಷಗಳಿಗೂ ಮೇಲ್ಪಟ್ಟು ಅಸ್ತಿತ್ವದಲ್ಲಿದ್ದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಹಾಗೂ ರಫ್ತುನಲ್ಲಿ ತೊಡಗಿರುವ ವ್ಯಾಪಾರೋದ್ಯಮಕ್ಕೆ ಉತ್ತೇಜನ ರೂಪದಲ್ಲಿ, ರೂ. ಹದಿನೈದು ಲಕ್ಷ ಬಡ್ಡಿರಹಿತ ಸಾಲದ ಸವಲತ್ತನ್ನು ದೊರಕಿಸಿಕೊಡಬೇಕಿದೆ. ಇನ್ಫೋಸಿಸ್ ಸಂಸ್ಥೆ ಮತ್ತು ಇನ್ನು ಇತರ ಸಂಸ್ಥೆಗಳು ಅಂದಾಜು ೧೫ ಕೋಟಿಗಳ ವರೆಗೆ ಕೆ.ಐ.ಎ.ಡಿ.ಬಿ. ಗೆ ಕಂದಾಯ ಪಾವತಿಸಿದ್ದಾರೆ. ಕೆಐಎಡಿಬಿ ಯಿಂದ ರಸ್ತೆ ಕಾಮಗಾರಿ ಬಗ್ಗೆ ಟೆಂಡರ್ ಕರೆದಿದ್ದರೂ, ಏನೂ ಪ್ರಯೋಜನವಿಲ್ಲದೆ, ರಸ್ತೆಗಳ ಅಭಿವೃದ್ಧಿ ಕಾರ್ಯಗಳು ನೆನೆಗುದಿಗೆ ಬಿದ್ದಿದೆ. ಹೂಟಗಳ್ಳಿ ನಗರಸಭೆ ಯಿಂದಲೂ ಟೆಂಡರ್ ಪ್ರಕ್ರಿಯೆ ನಡೆದಿದೆ. ಸುಮಾರು ವರ್ಷಗಳೇ ಆದರೂ, ರಸ್ತೆಗಳ ಅಭಿವೃದ್ಧಿ ಕಾರ್ಯವೂ ನಡೆಯದೆ, ಕೈಗಾರಿಕಾ ಪ್ರದೇಶಗಳ ರಸ್ತೆಗಳು ತೀರ ಹದಗೆಟ್ಟಿದೆ. ತಾವು ದಯವಿಟ್ಟು ಇದರ ಬಗ್ಗೆ ಗಮನ ಹರಿಸಿ, ಆದಷ್ಟು ಶೀಘ್ರದಲ್ಲಿ ಕ್ರಮ ಕೈಗೊಳ್ಳಬೇಕೆಂದು ಕೇಳಿ ಕೊಳ್ಳುತ್ತೇವೆ.
ಸರ್ಕಾರದಿಂದ ಕೈಗಾರಿಕಾ ಪಟ್ಟಣ ಪ್ರಾಧಿಕಾರಕ್ಕೆ, ವಿಶೇಷವಾಗಿ ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶ ಹಾಗೂ ತಾಂಡ್ಯಾ ಕೈಗಾರಿಕಾ ಪ್ರದೇಶಗಳನ್ನು ವಿಶೇಷ ಹೂಡಿಕೆ ವಲಯಗಳನ್ನಾಗಿ ಪರಿಗಣಿಸಿದೆ. ಈ ಪ್ರಕ್ರಿಯೆಯನ್ನು ಅತಿ ಶೀಘ್ರವಾಗಿ ಜಾರಿಗೆ ತರಲು ತಮ್ಮಲ್ಲಿ ಕೋರಲಾಗಿದೆ. ಪ್ರಾಧಿಕಾರಕ್ಕೆ ಇಬ್ಬರು ಕೈಗಾರಿಕಾ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಿದ್ದು, ದಯವಿಟ್ಟು ಅದನ್ನು ಐದು ಜನರಿಗೆ ಪ್ರತಿನಿಧಿಸಲು ಅವಕಾಶ ಕಲ್ಪಿಸಲು, ಸರ್ಕಾರದ ಮಟ್ಟದಲ್ಲಿ ತಿದ್ದುಪಡಿ ಮಾಡಿಸಿ ಕೊಡಬೇಕೆಂದು ಕೋರುತ್ತೇವೆಂದರು. 
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೆಲ್ವ ಕುಮಾರ್, ಕೈಗಾರಿಕೆ ಇಲಾಖೆಯ ಆಯುಕ್ತ ಗುಂಜನ್ ಕೃಷ್ಣ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಸೇರಿ ಇತರರು ಉಪಸ್ಥಿತರಿದ್ದರು.

Share This Article
Leave a Comment