ಪಬ್ಲಿಕ್ ಅಲರ್ಟ್
ಮೈಸೂರು: ಬಾಬಾ ಸಾಹೇಬ ಡಾ.ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧಮ್ಮ ಸ್ವೀಕರಿಸಿ 70 ವರ್ಷಗಳಾದ ಹಿನ್ನೆಲೆಯಲ್ಲಿ ಮಾನವ ಮೈತ್ರಿಗಾಗಿ ಮೈಸೂರಿನ ಮಹರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಅಂತರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನ-2025 ದಲ್ಲಿ ಶಾಂತಿಯ ಸಂದೇಶ ಸಾರಲಾಯಿತು.
ಮಹಾರಾಜ ಕಾಲೇಜು ಮೈದಾನದಲ್ಲಿ ಹಾಕಲಾಗಿರುವ ಭವ್ಯ ವೇದಿಕೆಯಲ್ಲಿ ಮಯಾನ್ಮಾರ್ ನ ಸಾಸನ ವಿಪುಲಾಮ ಬುದ್ಧ ತರಬೇತಿ ಕೇಂದ್ರದ ಪನಿಂದ ಸಯಡೋ ಬಂತೇಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವಿಯೇಟ್ನಾಂ ನ ಗೊಕ್ ಹೋನ್ ಬುದ್ಧ ವಿಹಾರದ ತಿಚ್ ಮಿನ್ ಹಾನ್ ಬಂತೇಜಿ ಧ್ವಜಾರೋಹಣ ನೆರವೇರಿಸಿದರು. ಬೈಲುಕುಪ್ಪೆಯ ಧಮ್ಮಗುರು ನಳಂದ ವಿಶ್ವವಿದ್ಯಾನಿಕಯದ ಕರ್ಮ ರಾನ್ರಿಯನ್ ಪುಂಚೆ ತ್ರಿಪಿಠಕ ಅನಾವರಣ ಮಾಡಿದರೆ, ಕೊಳ್ಳೇಗಾಲದ ಜೇತವನ ಬುದ್ಧ ವಿಹಾರದ ಬಂತೇ ಮನೋರಖ್ಖಿತ ಬುದ್ಧ ಮತ್ತು ಆತನ ಧಮ್ಮದ ಪ್ರತಿಕೃತಿ ಅನಾವರಣ ಮಾಡಿದರು.
ಈ ವೇಳೆ ಅಸ್ಸಾಂನ ಬುದ್ಧ ವಿಹಾರದ ಬಿಕ್ಕು ಸೋಬಾನ ಬಂತೆ, ತ್ರಿಪುರ ಬುದ್ಧ ವಿಹಾರದ ಬಿಕ್ಕು ಪಾನ್ಯಬೋಧಿ ಬಂತೆ, ಅರುಣಾಚಲ ಪ್ರದೇಶ ಬುದ್ಧ ವಿಹಾರದ ಬಂತೇ ವಿಸುದ್ಧಶೀಲ ಸೇರಿದಂತೆ ನಾಡಿನ ಹಲವಾರು ಬಂತೇಜಿಗಳ ನೇತೃತ್ವದಲ್ಲಿ ಧಮ್ಮ ಸ್ವೀಕಾರ ನೆರವೇರಿತು.
ಇದೇ ವೇಳೆ ಮಾತನಾಡಿದ ಬಂತೇಜಿಗಳು, ವಿಶ್ವವೇ ಬುದ್ಧರ ಕಡೆ ಮುಖ ಮಾಡುತ್ತಿದೆ. ಸಂಘರ್ಷದ ಹಾದಿ ಇರಬಾರದು. ಸಂವೇದನೆ ಇರಬೇಕು ಎಂದು ಬುದ್ಧರು ಹೇಳಿದ್ದಾರೆ. ಕರುಣೆ, ಮೈತ್ರಿ ವರ್ತಮಾನ ಬದುಕಿಗೆ ಅಗತ್ಯವಾಗಿದೆ. ನಮ್ಮ ನಡೆ ಬುದ್ಧರ ಕಡೆ ಎಂಬ ಆಶಯದಲ್ಲಿ ಈ ಮಹಾ ಸಮ್ಮೇಳನ ಸಂಯೋಜನೆ ಮಾಡಲಾಗಿದೆ. ಇದು ಚಾರಿತ್ರಿಕವಾದ ಕಾರ್ಯಕ್ರಮವೂ ಹೌದು ಎಂದು ತಿಳಿಸಿದರು.



ಸುಪ್ರೀಂ ಕೋಟ್೯ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ ಅವರತ್ತ ಶೂ ಎಸೆದ ಘಟನೆಯನ್ನು ಖಂಡಿಸಿದರು. ಎಲ್ಲರೂ ಶಾಂತಿಯಿಂದ ಇರಬೇಕು. ನಮಗೆ ಸಂಘರ್ಷ ಬೇಡ, ಶಾಂತಿ ಬೇಕು. ಎಲ್ಲಾ ಬಂಧುಗಳು ಸಂಯಮದಿಂದ ಶಾಂತಿಯಿಂದ ನಡೆದಾಗ ಮಾತ್ರ ನಾವು ವಿಶ್ವಮಾನವರಾಗಬಹುದು ಎಂಬ ಸಂದೇಶ ಸಾರಿದರು.
ಇದಕ್ಕೂ ಮುನ್ನ ಬೆಳಿಗ್ಗೆ 8 ಗಂಟೆಗೆ ನಗರದ ಟೌನ್ ಹಾಲ್ ನಲ್ಲಿ ಸಮಾನಗೊಂಡ ಬೌದ್ಧ ಅನುಯಾಯಿಗಳು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ನೂರಡಿ ರಸ್ತೆ ಮಾರ್ಗವಾಗಿ ಮಹರಾಜ ಕಾಲೇಜು ಹಾದು ಮಹರಾಜ ಕಾಲೇಜು ಮೈದಾನದವರಗೆ “ಬುದ್ಧನಡೆಗೆ ಒಂದು ಸಾರ್ಥಕ ನಡಿಗೆ” ಧ್ಯೇಯದಡಿ ಸಹಸ್ರಾರು ಹೆಜ್ಜೆಹಾಕಿದರು.
ಮಂಗಳವಾದ್ಯ, ನಾದಸ್ವರ, ಡೋಲು ಸೇರಿದಂತೆ ಸಾಂಸ್ಕೃತಿಕ ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಿದವು.
ಮೈದಾನದೊಳಗೆ ತೆರಳುತ್ತಿದ್ದಂತೆ ಶಾಂತಿ ಸಂದೇಶ ಸಾರುವ ಬುದ್ಧನ ಮೂರ್ತಿ ಆಕರ್ಷಣೀಯವಾಗಿ ಗಮನ ಸಳೆಯುತ್ತಿದೆ. ಸಮ್ಮೇಳನಕ್ಕೆ ಆಗಮಿಸಿದ ಬಹಳಷ್ಟು ಮಂದಿ ಬುದ್ಧ ಮೂರ್ತಿ ಮುಂದೆ ನಿಂತು ಫೋಟೊ ತೆಗಿಸಿಕೊಂಡು ಸಂಭ್ರಮಿಸಿದರು.
ಸಾಮ್ರಾಟ್ ಅಶೋಕ ವೇದಿಕೆ, ನಳಂದ, ರಾಜ ಕಾನಿಷ್ಕ, ರಾಜ ಹರ್ಷವರ್ಧನ, ಬಾಬಾಸಾಹೇಬ್ ಅಂಬೇಡ್ಕರ್, ಲಾಫಿಂಗ್, ಬುದ್ದಂ ನಮಾಮಿ ಸೇರಿದಂತೆ ಹಲವು ಮಹಾನೀಯರ ಹೆಸರುಗಳನ್ನೊಳಗೊಂಡ ವೇದಿಕೆ ಹಾಕಲಾಗಿದ್ದು, ಒಂದೊಂದು ವೇದಿಕೆಯಲ್ಲೂ ವಿವಿಧ ಗಣ್ಯರಿಂದ ವಿಚಾರ ಸಂಕಿರಣ, ಗೋಷ್ಠಿಗಳು ನಡೆಯುತ್ತಿವೆ.
ಅ.15 ರ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವ ಡಾ.ಜಿ.ಪರಮೇಶ್ವರ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ, ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಸಚಿವರಾದ ಕೆ.ಎಚ್.ಮುನಿಯಪ್ಪ, ಸತೀಶ ಜಾರಕಿಹೊಳಿ, ಪ್ರಿಯಾಂಕ ಖರ್ಗೆ, ಕೆ.ವೆಂಕಟೇಶ್ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.
ಸಮ್ಮೇಳನದ ಗೌರವಾಧ್ಯಕ್ಷ ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ, ಸರ್ವಾಧ್ಯಾಕ್ಷ ಮಾಜಿ ಮೇಯರ್ ಪುರುಷೋತ್ತಮ್ ಯಾವುದೇ ಕೊರತೆಯಾಗದಂತೆ ಎಲ್ಲಾ ಉಸ್ತುವಾರಿಯನ್ನು ವಹಿಸಿಕೊಂಡು ಸಮ್ಮೇಳನದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.
