ಪಬ್ಲಿಕ್ ಅಲರ್ಟ್ ನ್ಯೂಸ್:-15 ದಿನ ಭೂಗತ ಕೇಬಲಿಂಗ್ ಕಾಮಗಾರಿ ಸ್ಥಗಿತ – ಮೊದಲು ಹಾನಿಯಾಗಿರುವ ಪೈಪ್ ಲೈನ್ನ್ನು /ರಸ್ತೆ ಸರಿಪಡಿಸಬೇಕು – ಲಕ್ಷ್ಮಿ ಕಾಂತ ರೆಡ್ಡಿ ಜಿ
ಮೈಸೂರು, ಏ.27(ಕರ್ನಾಟಕ ವಾರ್ತೆ):-
ಮಾನಂದವಾಡಿ ರಸ್ತೆಯ ಒಂದು ಕಿ.ಮೀ ವ್ಯಾಪ್ತಿಯಲ್ಲಿ ರಸ್ತೆಯ ವೈಟ್ ಟಾಪಿಂಗ್ ( white topping) ಕೆಲಸ ಪ್ರಾರಂಭವಾಗಿದ್ದು, ಸದರಿ ಕಾಮಗಾರಿಯನ್ನು ನಿರ್ವಹಿಸುವ ಸಂದರ್ಭದಲ್ಲಿ ಅಗತ್ಯವಿರುವ ಇನ್ನಿತರ ಎಲ್ಲಾ ಸೌಕರ್ಯಗಳನ್ನು ಅಳವಡಿಸುವ ದೂರದೃಷ್ಟಿಯನ್ನಿಟ್ಟುಕೊಂಡು ಅಚ್ಚುಕಟ್ಟಾಗಿ ಕಾಮಗಾರಿ ನಿರ್ವಹಿಸುವುದು ಎಂದು ಜಿಲ್ಲಾಧಿಕಾರಿ ಲಕ್ಷ್ಮಿ ಕಾಂತ ರೆಡ್ಡಿ ಜಿ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮೈಸೂರು ಮಹಾನಗರ ಪಾಲಿಕೆ ಹಾಗೀ ಇತರೆ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ನಗರದ 12 ರಸ್ತೆಗಳಿಗೆ ವೈಟ್ ಟಾಪಿಂಗ್ ಕಾಮಗಾರಿ ಅನುಮೋದನೆಯಾಗಿದ್ದು, ಮಾನಂದವಾಡಿ ರಸ್ತೆ, ಬೋಗಾದಿ ರಸ್ತೆ ಹಾಗೂ ವಿಶ್ವಮಾನವ ಜೋಡಿ ರಸ್ತೆಗಳಲ್ಲಿ ಮೊದಲ ಹಂತದಲ್ಲಿ ಕಾಮಗಾರಿ ಪ್ರಾರಂಭವಾಗುತ್ತಿದೆ ಎಂದರು.
ಮೈಸೂರು ಮಹಾಗರ ಪಾಲಿಕೆ ಅಧಿಕಾರಿಗಳು ಕುಡಿಯುವ ನೀರು ಸರಬರಾಜು, ಒಳಚರಂಡಿ ಹಾಗೂ ಚೆಸ್ಕಾಂ ಅವರು ವಿದ್ಯುತ್ ಕೇಬಲ್ ಬಗ್ಗೆ ಕಾಮಗಾರಿ ಪ್ರಾರಂಭಕ್ಕೂ ಮುನ್ನ ವ್ಯವಸ್ಥೆಗಳಿಗೆ ತೊಂದರೆಯಾಗದಂತೆ ನೋಡಿಕೊಂಡು ವರದಿ ನೀಡಬೇಕು. ನಂತರ ರಸ್ತೆಯ ಕಾಂಕ್ರೀಟ್ ಕೆಲಸ ಪ್ರಾರಂಭಿಸಬೇಕು. ರಸ್ತೆಯಾದ ನಂತರ ಅಗೆಯುವುದು ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬೋಗಾದಿಯ ವೈಟ್ ಟಾಪಿಂಗ್ ಕೆಲಸ ಪ್ರಾರಂಭಕ್ಕೂ ಮುನ್ನ ಲೋಕೋಪಯೋಗಿ ಹಾಗೂ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಜಂಟಿ ಪರಿಶೀಲನೆ ನಡೆಸಿ ಎರಡು ದಿನದೊಳಗಾಗಿ ವರದಿ ನೀಡಿ ನಂತರ ಕಾಮಗಾರಿ ಪ್ರಾರಂಭಿಸುವಂತೆ ತಿಳಿಸಿದರು.
ಚೆಸ್ಕಾಂ ವತಿಯಿಂದ ಮೈಸೂರು ನಗರದ 400 ಕಿ.ಮೀ ವ್ಯಾಪ್ತಿಯಲ್ಲಿ ಭೂಗತ ಕೇಬಲಿಂಗ್ ಕೆಲಸ ನಡೆಯುತ್ತಿದ್ದು, ಕೆಲಸ ನಡೆಯುವ ಸಂದರ್ಭದಲ್ಲಿ ಒಳಚರಂಡಿ, ಕುಡಿಯುವ ನೀರಿನ ಪೈಪ್ ಲೈನ್ ಗೆ ಹಾನಿಯಾದಲ್ಲಿ ಒಂದು ದಿನದೊಳಗಾಗಿ ಸರಿಪಡಿಸಿ ನಂತರ ಕಾಮಗಾರಿಯನ್ನು ಮುಂದುವರೆಸಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿ ಎಂದರು.
ಈಗಾಗಲೇ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಒಳಚರಂಡಿ ಹಾಗೂ ಕುಡಿಯುವ ನೀರಿನ ಪೈಪ್ ಲೈನ್ ಹಾನಿಯಾಗಿರುವುದಾಗಿ ತಿಳಿದು ಬಂದಿರುತ್ತದೆ, 15 ದಿನ ಕಾಮಗಾರಿಯನ್ನು ಸ್ಥಗಿತಗೊಳಿಸಿ ಮೊದಲು ಹಾನಿಯಾಗಿರುವ ಪೈಪ್ ಲೈನ್ ನ್ನು ಸರಿಪಡಿಸಬೇಕು. ಚೆಸ್ಕಾಂ ಹಾಗೂ ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಸರಿಪಡಿಸಿರುವ ಬಗ್ಗೆ ವರದಿ ನೀಡಬೇಕು ಎಂದರು.
ಸಭೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಕಾರ್ಯಪಾಲಕ ಅಭಿಯಂತರ ಮಂಜು, ಚೆಸ್ಕಾಂ ಅಧೀಕ್ಷಕ ಅಭಿಯಂತರ ಸುನೀಲ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
