ಮೇ 6 ರಂದು ರಾಜ್ಯ ಮಟ್ಟದ ಕಾಯಕಯೋಗಿ ಸಿದ್ದರಾಮೇಶ್ವರ ಜಯಂತಿ: ಐಶ್ವರ್ಯ ಆರ್

latha prabhukumar
2 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಮೇ 6 ರಂದು ರಾಜ್ಯ ಮಟ್ಟದ ಕಾಯಕಯೋಗಿ ಸಿದ್ದರಾಮೇಶ್ವರ ಜಯಂತಿ: ಐಶ್ವರ್ಯ ಆರ್

ಮೈಸೂರು, ಏ.27(ಕರ್ನಾಟಕ ವಾರ್ತೆ):-
ಜಿಲ್ಲಾಡಳಿತದ ವತಿಯಿಂದ ಮೇ 6 ರಂದು ರಾಜ್ಯ ಮಟ್ಟದ ಕಾಯಕಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಆಯೋಜಿಸಲಾಗಿವುದು ಎಂದು ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯ ಮಟ್ಟದ ಕಾರ್ಯಕ್ರಮವಾಗಿರುವುದರಿಂದ ಮಾನ್ಯ ಮುಖ್ಯಮಂತ್ರಿಗಳು ಭಾಗವಹಿಸಲಿದ್ದು, ಅಧಿಕಾರಿಗಳು ಕಾರ್ಯಕ್ರಮ ಅಚ್ಚುಕಟ್ಟಾಗಿ ಯಾವುದೇ ಲೋಪವಾಗದಂತೆ ಆಯೋಜಿಸಬೇಕು ಎಂದರು.

ಮೆರವಣಿಗೆ ಕಾರ್ಯಕ್ರಮದ ಅಂಗವಾಗಿ ಮೇ 6 ರಂದು ಬೆಳಿಗ್ಗೆ ಕೋಟೆ ಅಂಜುನೇಯ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಕಲಾಮಂದಿರದವರೆಗೆ ಮೆರವಣಿಗೆ ನಡೆಯಲಿದೆ. ವೀರಗಾಸೆ, ಡೊಳ್ಳು ಕುಣಿತ ವಿವಿಧ ಕಲಾತಂಡಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ನೀಡಲಿದೆ.

ವೇದಿಕೆ ಕಾರ್ಯಕ್ರಮ ಕಲಾಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಮೇ 6 ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಶಿಷ್ಟಾಚಾರದ ಅನುಸಾರ ಎಲ್ಲಾ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು ಎಂದರು.

ಮಾಲಾರ್ಪಣೆ ಕರ್ನಾಟಕ‌ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ ಅವರು ಮಾತನಾಡಿ ಮೆರವಣಿಗೆಯಲ್ಲಿ ಭಾಗವಹಿಸುವ ಕಲಾತಂಡ ಹಾಗೂ ಕಲಾವಿದರಿಗೆ ಉಪಹಾರ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಮೆರವಣಿಗೆ ಸಾಗುವ ಸಂದರ್ಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲು ಮೈಸೂರು ಮಹಾನಗರಪಾಲಿಕೆ ವತಿಯಿಂದ ವ್ಯವಸ್ಥೆ ಮಾಡುವಂತೆ ತಿಳಿಸಿದರು.

ಚಿತ್ರದುರ್ಗದ ಶ್ರೀ ಶ್ರೀ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿ ಅವರು ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಲಿದ್ದಾರೆ ಹಾಗೂ ಕಾರ್ಯಕ್ರಮ ಪ್ರಾರಂಭವಾಗುವ ಮೊದಲು ವೇದಿಕೆಯಲ್ಲಿ ವಚನ ಗಾಯನ ಕಾರ್ಯಕ್ರಮ ಆಯೋಜಿಸುವಂತೆ ತಿಳಿಸಿದರು.

ಭೋವಿ ಸಮುದಾಯದ ಮುಖಂಡರುಗಳನ್ನೊಳಗೊಂಡಂತೆ ವಿವಿಧ ಸಮಿತಿಗಳನ್ನು ರಚಿಸಿಕೊಂಡು ರಾಜ್ಯದ ಎಲ್ಲಾ ಭಾಗಗಳಲ್ಲಿ ಪ್ರಚಾರ ನೀಡಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಂಘಟಿಸುವಂತೆ ತಿಳಿಸಿದರು.

ಕರ್ನಾಟಕ ಭೋವಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ.ಸೀತಾರಾಮು ಅವರು ಮಾತನಾಡಿ ಮೆರವಣಿಗೆಯಲ್ಲಿ ಕಳಸ ಹೊತ್ತ ಮಹಿಳೆಯರು ಭಾಗವಹಿಸಿದರೆ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬರಲಿದೆ. ಇದಕ್ಕೆ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದರು.‌

ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಡಾ: ಸುದರ್ಶನ್, ಭೋವಿ ಸಮುದಾಯದ ಮುಖಂಡರುಗಳಾದ   ವಿಜಯ ಕುಮಾರ್, ಟಿ. ಕೃಷ್ಣ, ದೇವರಾಜು, ಜಿ ನಾಗರಾಜು, ಪಿ. ಎಲ್ ಚಿನ್ನಸ್ವಾಮಿ,    ಬಿ.ವಿ ಶ್ರೀನಿವಾಸ್, ಮೋಹನ್ ಜಿ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.

Share This Article
Leave a Comment