ಮೊದಲ ಲಿವರ್ ಟ್ರಾನ್ಸ್‌ಪ್ಲಾಂಟ್‌ನಿಂದ ಒಂದೇ ತಿಂಗಳಲ್ಲಿ ಮೂರು ಯಶಸ್ವಿ ಲಿವರ್ ಟ್ರಾನ್ಸ್‌ಪ್ಲಾಂಟ್‌: ಮಣಿಪಾಲ್ ಆಸ್ಪತ್ರೆ ಮೈಸೂರು ಹೊಸ ಮೈಲಿಗಲ್ಲು

latha prabhukumar
5 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಮೊದಲ ಲಿವರ್ ಟ್ರಾನ್ಸ್‌ಪ್ಲಾಂಟ್‌ನಿಂದ ಒಂದೇ ತಿಂಗಳಲ್ಲಿ ಮೂರು ಯಶಸ್ವಿ ಲಿವರ್ ಟ್ರಾನ್ಸ್‌ಪ್ಲಾಂಟ್‌: ಮಣಿಪಾಲ್ ಆಸ್ಪತ್ರೆ ಮೈಸೂರು ಹೊಸ ಮೈಲಿಗಲ್ಲು
ಯಶಸ್ವಿ ಚಿಕಿತ್ಸಾ ಫಲಿತಾಂಶಗಳ ಮೂಲಕ ಅತ್ಯಾಧುನಿಕ ‘ಲಿವರ್ ಟ್ರಾನ್ಸ್‌ಪ್ಲಾಂಟ್’ ಚಿಕಿತ್ಸೆಯತ್ತ ಬೆಳಕು ಚೆಲ್ಲಿದ ಮೈಸೂರು ಮಣಿಪಾಲ್ ಆಸ್ಪತ್ರೆ.

ಮೈಸೂರು (ಜೂನ್ 30, 2026): ಲಿವರ್ ಸಮಸ್ಯೆ ತೀವ್ರವಾಗಿ ಉಲ್ಬಣಗೊಂಡಾಗ, ಲಿವರ್ ಕಸಿ (ಟ್ರಾನ್ಸ್‌ಪ್ಲಾಂಟ್) ಮಾಡಿಸುವುದು ಅತ್ಯಂತ ಪರಿಣಾಮಕಾರಿ ಮತ್ತು ಖಚಿತವಾದ ಚಿಕಿತ್ಸೆಯಾಗಿದೆ. ಸೂಕ್ತ ಸಮಯದಲ್ಲಿ ರೋಗ ಪತ್ತೆ ಹಚ್ಚುವುದು, ವಿಶೇಷ ಟ್ರಾನ್ಸ್‌ಪ್ಲಾಂಟ್ ವ್ಯವಸ್ಥೆಯ ಲಭ್ಯತೆ ಮತ್ತು ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರದ ಸಮಗ್ರ ಆರೈಕೆಯು ರೋಗಿಗೆ ಹೊಸ ಆಯುಷ್ಯ ನೀಡುವಲ್ಲಿ ಹಾಗೂ ಉತ್ತಮ ಜೀವನದ ಗುಣಮಟ್ಟವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮೈಸೂರು ಸುತ್ತಮುತ್ತಲಿನ ರೋಗಿಗಳಿಗೆ ಅವರ ಮನೆಯ ಹತ್ತಿರವೇ ಇಂತಹ ಅತ್ಯಾಧುನಿಕ ಕಸಿ ಚಿಕಿತ್ಸೆಗಳು ಲಭ್ಯವಾದರೆ, ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆದು, ಗುಣಮುಖರಾಗುವವರೆಗೂ ಅತ್ಯುತ್ತಮ ಆರೈಕೆಯನ್ನು ಸುಲಭವಾಗಿ ಪಡೆದುಕೊಳ್ಳಬಹುದು.
ಇದೇ ಉದ್ದೇಶದಿಂದ, ಮೈಸೂರಿನ ಮಣಿಪಾಲ್ ಆಸ್ಪತ್ರೆಯು ಪತ್ರಿಕಾಗೋಷ್ಠಿ ನಡೆಸಿ, ‘ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಸೈನ್ಸಸ್’ (MIGS)  ವಿಭಾಗದಲ್ಲಿ ಆರಂಭಿಸಲಾದ ಲಿವರ್ ಕಸಿ ಚಿಕಿತ್ಸೆ ಮತ್ತು ಇತ್ತೀಚಿನ ಯಶಸ್ವಿ ಸರ್ಜರಿಗಳ ವಿವರಗಳನ್ನು ಹಂಚಿಕೊಂಡಿತು.
ಮಣಿಪಾಲ್ ಆಸ್ಪತ್ರೆ ಓಲ್ಡ್ ಏರ್‌ಪೋರ್ಟ್ ರೋಡ್ ಮತ್ತು ಮಣಿಪಾಲ್ ಆಸ್ಪತ್ರೆ ಮೈಸೂರಿನ ಲೀಡ್ ಕನ್ಸಲ್ಟೆಂಟ್ – ಹೆಚ್.ಪಿ.ಬಿ, ಲಿವರ್ ಮತ್ತು ಪ್ಯಾಂಕ್ರಿಯಾಟಿಕ್ ಟ್ರಾನ್ಸ್‌ಪ್ಲಾಂಟ್ ಡಾ. ಜಯಂತ್ ರೆಡ್ಡಿ, ಡಾ. ನಾಗೇಶ್ ಪಿ. ಎನ್., ಲೀಡ್ ಕನ್ಸಲ್ಟೆಂಟ್ – ಮಲ್ಟಿ-ಆರ್ಗನ್ ಟ್ರಾನ್ಸ್‌ಪ್ಲಾಂಟ್ ಅನೆಸ್ತೇಷಿಯಾ, ಡಾ. ಸತೀಶ್ ರಾವ್ ಎ. ಕೆ., ಸೀನಿಯರ್ ಕನ್ಸಲ್ಟೆಂಟ್ – ಮೆಡಿಕಲ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ , ಡಾ. ನಿಶ್ಚಯ್ ಆರ್., ಕನ್ಸಲ್ಟೆಂಟ್ – ಮೆಡಿಕಲ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ , ಡಾ. ವಾಸುದೇವ್ ಪೈ ಎಚ್., ಸೀನಿಯರ್ ಕನ್ಸಲ್ಟೆಂಟ್ – ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಚ್.ಪಿ.ಬಿ ಸರ್ಜನ್, ಡಾ. ಉಪೇಂದ್ರ ಶೆಣೈ, ಚೀಫ್ ಆಫ್ ಮೆಡಿಕಲ್ ಸರ್ವಿಸಸ್, ಡಾ. ಮಹಾದೇವ ಕೆ. ಕನ್ಸಲ್ಟೆಂಟ್ – ಐಸಿಯು ಮತ್ತು ಕ್ರಿಟಿಕಲ್ ಕೇರ್ ಹಾಗೂ ಮಣಿಪಾಲ್ ಆಸ್ಪತ್ರೆ, ಮೈಸೂರಿನ ನಿರ್ದೇಶಕರಾದ ಸಂದೀಪ್ ಪಟೇಲ್ ಬಿ. ಜೆ. ಅವರ ಅವರನ್ನೊಳಗೊಂಡ ತಜ್ಞರ ತಂಡವು ಈ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿತ್ತು.
ಮೇ ಮಧ್ಯಭಾಗದಿಂದ ಜೂನ್ ಮಧ್ಯದವರೆಗೆ (ಕೇವಲ ಒಂದು ತಿಂಗಳಲ್ಲಿ) ಮೂವರಿಗೆ ಯಶಸ್ವಿಯಾಗಿ ಲಿವರ್ ಕಸಿ (DDLT) ಮಾಡಲಾಗಿದೆ. ಈ ಸಾಧನೆಯು ಮೈಸೂರು ಭಾಗದಲ್ಲಿಯೇ ಸಿಗುತ್ತಿರುವ ಅತ್ಯಾಧುನಿಕ ಮತ್ತು ಜೀವ ಉಳಿಸುವ ವೈದ್ಯಕೀಯ ಸೌಲಭ್ಯಕ್ಕೆ ಸಾಕ್ಷಿಯಾಗಿದೆ.
ಈ ವೇಳೆ ಪತ್ರಿಕಾಗೋಷ್ಠಿಯಲ್ಲಿ ಡಾ. ಜಯಂತ್ ರೆಡ್ಡಿ ಮಾತನಾಡಿ, “ಯಾವ ಔಷಧಿಗಳೂ ಕೆಲಸ ಮಾಡದಿದ್ದಾಗ ಲಿವರ್ ಕಸಿ ಒಂದೇ ರೋಗಿಯ ಜೀವ ಉಳಿಸುವ ದಾರಿ. ಪ್ರತಿ ಸರ್ಜರಿಯೂ ವಿಭಿನ್ನ ಮತ್ತು ಸವಾಲಿನಿಂದ ಕೂಡಿರುತ್ತದೆ. ಹಾಗಾಗಿ ಲಿವರ್ ಕೊಡುವವರು ಮತ್ತು ಪಡೆಯುವವರ ಆರೋಗ್ಯವನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ವೈದ್ಯರ ತಂಡ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ಈ ಯಶಸ್ವಿ ಚಿಕಿತ್ಸೆಗಳಿಂದಾಗಿ ಮೈಸೂರು ಸುತ್ತಮುತ್ತಲಿನ ಜನರಿಗೆ ಇನ್ನು ಮುಂದೆ ತಮ್ಮ ಮನೆಯ ಹತ್ತಿರವೇ ಅತ್ಯಾಧುನಿಕ ಲಿವರ್ ಕಸಿ ಸೌಲಭ್ಯ ಸಿಗುವಂತಾಗಿದೆ,” ಎಂದರು.
ಡಾ. ನಾಗೇಶ್ ಪಿ. ಎನ್. ಮಾತನಾಡಿ, “ಲಿವರ್ ಕಸಿ ಯಶಸ್ವಿಯಾಗಲು ಬರೀ ಸರ್ಜರಿ ಮಾತ್ರ ಸಾಲದು. ಸುರಕ್ಷಿತವಾಗಿ ಅರವಳಿಕೆ ನೀಡುವುದು, ಸರ್ಜರಿ ಸಮಯದಲ್ಲಿ ರೋಗಿಯ ಆರೋಗ್ಯದ ಮೇಲೆ ನಿರಂತರ ನಿಗಾ ಇಡುವುದು ಮತ್ತು ವೈದ್ಯರ ತಂಡದ ಒಗ್ಗಟ್ಟಿನ ಕೆಲಸ ತುಂಬಾ ಮುಖ್ಯ. ರೋಗಿ ಬೇಗ ಗುಣಮುಖರಾಗಿ, ದೀರ್ಘಕಾಲ ಆರೋಗ್ಯವಾಗಿರಲು ಪ್ರತಿ ಹಂತದಲ್ಲೂ ಪೂರ್ಣ ನಿಗಾ ವಹಿಸಲಾಗುತ್ತದೆ,” ಎಂದರು.
ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡುವುದರಿಂದ ಆಗುವ ಪ್ರಯೋಜನಕ್ಕೆ ಉದಾಹರಣೆಯಾಗಿ ವೈದ್ಯರು ಜಯರಾಮ್ ಪಿ. ಸಂಪತ್ ಅವರ ಕೇಸ್ ಹಂಚಿಕೊಂಡರು. ಮೈಸೂರಿನ 61 ವರ್ಷದ ಜಯರಾಮ್ ಅವರಿಗೆ ‘ಪ್ರೈಮರಿ ಸ್ಕ್ಲೆರೋಸಿಂಗ್ ಕೋಲಾಂಜೈಟಿಸ್’ (PSC) ಎಂಬ ಕಾಯಿಲೆಯಿಂದಾಗಿ ಲಿವರ್ ಸಮಸ್ಯೆ ತೀವ್ರವಾಗಿ, ಹಠಾತ್ತನೆ ಕಾಮಾಲೆ (ಜಾಂಡೀಸ್) ಹೆಚ್ಚಾಗಿತ್ತು. ತಕ್ಷಣ ಅವರಿಗೆ ಲಿವರ್ ಕಸಿ ಮಾಡಿದ ಕಾರಣ, ಕೆಲವೇ ವಾರಗಳಲ್ಲಿ ಗುಣಮುಖರಾಗಿ ಅವರು ತಮ್ಮ ದೈನಂದಿನ ಕೆಲಸಗಳಿಗೆ ಮರಳಿದ್ದಾರೆ.
ಮತ್ತೊಬ್ಬ ರೋಗಿ 46 ವರ್ಷದ ಪ್ರಸಾದ್ ಎ. ಕೆ. (ಹೆಸರು ಬದಲಾಯಿಸಲಾಗಿದೆ) ಅವರಿಗೆ ‘ಅಕ್ಯೂಟ್-ಆನ್-ಕ್ರಾನಿಕ್ ಲಿವರ್ ಫೈಲ್ಯೂರ್’ (ACLF) ಕಾಯಿಲೆ ಕಾಣಿಸಿಕೊಂಡಿತ್ತು. ಇದರಿಂದಾಗಿ ಅವರ ಲಿವರ್ ತೀವ್ರವಾಗಿ ಕೆಟ್ಟು, ಆರೋಗ್ಯ ತುಂಬಾ ಹದಗೆಟ್ಟಿತ್ತು. ಮೊದಲು ಅವರ ಪರಿಸ್ಥಿತಿಯನ್ನು ಹತೋಟಿಗೆ ತಂದು, ಆನಂತರ ಯಶಸ್ವಿಯಾಗಿ ಲಿವರ್ ಕಸಿ ಮಾಡಲಾಯಿತು. ಈಗ ಅವರು ಚೆನ್ನಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನು ಜೂನ್ 13, 2026 ರಂದು ಲಿವರ್ ಕಸಿಗೊಳಗಾದ ಮೂರನೇ ರೋಗಿಯೂ ಕೂಡ ವೈದ್ಯರ ನಿಗಾದಲ್ಲಿ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ.
ಡಾ. ನಿಶ್ಚಯ್ ಆರ್. ಮಾತನಾಡಿ, “ಯಾವುದೇ ಲಿವರ್ ಕಸಿ ಚಿಕಿತ್ಸೆ ಯಶಸ್ವಿಯಾಗಬೇಕಾದರೆ ಮೊದಲು ರೋಗಿಗಳಿಗೆ ವೈದ್ಯರ ತಂಡದ ಮೇಲೆ ನಂಬಿಕೆ ಇರಬೇಕು. ನಮ್ಮ ಮೇಲೆ ಭರವಸೆ ಇಟ್ಟು, ಅವರ ಜೀವ ಉಳಿಸುವ ಈ ಪ್ರಯಾಣದಲ್ಲಿ ನಮ್ಮನ್ನು ಭಾಗಿಯಾಗುವಂತೆ ಮಾಡಿದ ನಮ್ಮ ಮೊದಲ ರೋಗಿ ಮತ್ತು ಅವರ ಕುಟುಂಬಕ್ಕೆ ನಾವು ಚಿರಋಣಿ. ಅವರ ಈ ಧೈರ್ಯವೇ ಇತರ ರೋಗಿಗಳೂ ನಮ್ಮಲ್ಲಿಗೆ ಬರುವಂತೆ ಮಾಡಿತು. ಇದು ಈ ಭಾಗದಲ್ಲಿ ಅತ್ಯಾಧುನಿಕ ಲಿವರ್ ಕಸಿ ಸೇವೆಗಳು ಬೆಳೆಯಲು ದಾರಿಯಾಗಿದೆ,” ಎಂದರು.
ಡಾ. ಸತೀಶ್ ರಾವ್ ಎ.ಕೆ. ಅವರು ಮುಂದುವರಿಸಿ, “ಲಿವರ್ ಸಮಸ್ಯೆ ಇರುವವರಿಗೆ ರೋಗವನ್ನು ಮೊದಲೇ ಪತ್ತೆ ಹಚ್ಚುವುದು ಮತ್ತು ಸರಿಯಾದ ಸಮಯಕ್ಕೆ ತಜ್ಞ ವೈದ್ಯರ ಬಳಿಗೆ ಕಳುಹಿಸುವುದು ತುಂಬಾ ಮುಖ್ಯ. ಕಾಲ ಕಾಲಕ್ಕೆ ತಪಾಸಣೆ, ಸೂಕ್ತ ಔಷಧಿಗಳು ಮತ್ತು ಲಿವರ್ ಕಸಿ ಮಾಡಲು ಸರಿಯಾದ ಸಮಯವನ್ನು ಗುರುತಿಸುವುದರಿಂದ ರೋಗಿಯ ಆಯಸ್ಸು ಹಾಗೂ ಜೀವನದ ಗುಣಮಟ್ಟವನ್ನು ಹೆಚ್ಚಿಸಬಹುದು. ಹಾಗಾಗಿ, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡುವುದು ಮತ್ತು ಆರಂಭದಲ್ಲೇ ಚಿಕಿತ್ಸೆ ಪಡೆಯುವುದು ಅತ್ಯಗತ್ಯ,” ಎಂದರು.
ಡಾ. ವಾಸುದೇವ್ ಪೈ ಎಚ್. ಮಾತನಾಡಿ, “ಲಿವರ್ ಕಸಿ ಎಂಬುದು ಅತ್ಯಂತ ವಿಶೇಷವಾದ ಚಿಕಿತ್ಸೆ. ಇದಕ್ಕೆ ರೋಗಿಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುವುದು, ಸರ್ಜರಿಯ ಬಗ್ಗೆ ಮೊದಲೇ ನಿಖರ ಸಿದ್ಧತೆ ಮಾಡಿಕೊಳ್ಳುವುದು ಮತ್ತು ವಿವಿಧ ವಿಭಾಗಗಳ ವೈದ್ಯರು ಒಟ್ಟಾಗಿ ಕೆಲಸ ಮಾಡುವುದು ಮುಖ್ಯವಾಗುತ್ತದೆ. ನಮ್ಮ ತಂಡ ಸಾಧಿಸಿರುವ ಈ ಯಶಸ್ಸು, ಅತ್ಯಾಧುನಿಕ ಶಸ್ತ್ರಚಿಕಿತ್ಸೆ ನೀಡುವ ನಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಸಾಕ್ಷಿಯಾಗಿದೆ. ಇದರಿಂದ ಲಿವರ್ ಸಂಪೂರ್ಣವಾಗಿ ಕೆಟ್ಟಿರುವ ರೋಗಿಗಳಿಗೆ ತಮ್ಮ ಮನೆಯ ಹತ್ತಿರವೇ ಹೊಸ ಜೀವನ ಸಿಗುವಂತಾಗಿದೆ,” ಎಂದರು.
ಸಂದೀಪ್ ಪಟೇಲ್ ಬಿ. ಜೆ. ಮಾತನಾಡಿ, “ನಮ್ಮಲ್ಲಿ ಲಿವರ್ ಕಸಿ ಸೌಲಭ್ಯ ಆರಂಭವಾಗಿರುವುದು ಮೈಸೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಜನರಿಗೆ ಅತ್ಯಾಧುನಿಕ ಚಿಕಿತ್ಸೆ ಸುಲಭವಾಗಿ ಸಿಗುವಂತೆ ಮಾಡಲು ಇಟ್ಟ ಪ್ರಮುಖ ಹೆಜ್ಜೆಯಾಗಿದೆ. ಈ ವಿಶೇಷ ಚಿಕಿತ್ಸೆ ಇಲ್ಲಿನ ಜನರಿಗೆ ಹತ್ತಿರದಲ್ಲೇ ಸಿಗುವುದರಿಂದ, ಸರಿಯಾದ ಸಮಯಕ್ಕೆ ಚಿಕಿತ್ಸೆ ಲಭ್ಯವಾಗುತ್ತದೆ. ಜೊತೆಗೆ, ಜೀವ ಉಳಿಸುವ ಇಂತಹ ಚಿಕಿತ್ಸೆಗಳಿಗಾಗಿ ದೂರದ ದೊಡ್ಡ ನಗರಗಳಿಗೆ (ಮೆಟ್ರೋ ಸಿಟಿಗಳಿಗೆ) ಅಲೆಯುವ ಕಷ್ಟ ತಪ್ಪುತ್ತದೆ,” ಎಂದರು.
ಈ ಯಶಸ್ವಿ ಲಿವರ್ ಕಸಿ ಕಾರ್ಯಕ್ರಮದ ಹಿಂದೆ ವಿವಿಧ ವಿಭಾಗಗಳ ವೈದ್ಯರ ತಂಡದ ಶ್ರಮವಿದೆ. ಈ ತಂಡದಲ್ಲಿ ಪಾಲ್ಗೊಂಡಿದ್ದ ಡಾ. ಬಾಲಸುಬ್ರಮಣ್ಯಂ ಪಿ. ಕೆ., ಡಾ. ಮಂಜುನಾಥ್ ವಿ., ಡಾ. ಜ್ಞಾನವೇಲು ಗುರುಪಾಲ್, ಡಾ. ನಿಶ್ಚಲ್ ಮೊಲ್ಕೇರಿ, ಡಾ. ಶ್ರುತಿ ರೆಡ್ಡಿ, ಡಾ. ದೀಪ್ತಿ ರಾಮಚಂದ್ರ, ಡಾ. ಅಮಿತ್ ಶ್ರೀಕಾಂತ್, ಡಾ. ರಾಕೇಶ್ ರೆಡ್ಡಿ ಮತ್ತು ಡಾ. ಸಂದೀಪ್ ಸತ್ಸಂಗಿ, ಇವರೆಲ್ಲರ ಪರಿಣತಿ ಮತ್ತು ಪ್ರಾಮಾಣಿಕ ಪ್ರಯತ್ನದಿಂದಲೇ ಈ ಚಿಕಿತ್ಸೆಯು ಅತ್ಯಂತ ಯಶಸ್ವಿಯಾಗಿ ನೆರವೇರಲು ಸಾಧ್ಯವಾಗಿದೆ.
ಕೊನೆಯಲ್ಲಿ ನಡೆದ ಸಂವಾದದಲ್ಲಿ, ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ತಜ್ಞ ವೈದ್ಯರು ಉತ್ತರಿಸಿದರು. ಈ ವೇಳೆ ಲಿವರ್ ಕಸಿ, ಅಂಗಾಂಗ ದಾನ, ಯಾರಿಗೆ ಈ ಚಿಕಿತ್ಸೆ ಅಗತ್ಯವಿರುತ್ತದೆ ಮತ್ತು ಮರಣಾನಂತರದ ಅಂಗಾಂಗ ದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮಹತ್ವದ ಕುರಿತು ಚರ್ಚಿಸಲಾಯಿತು.

Share This Article
Leave a Comment