ಪಬ್ಲಿಕ್ ಅಲರ್ಟ್ ನ್ಯೂಸ್:-ಡಾ. ಬಾಬು ಜಗಜೀವನ ರಾಮ್ ಅವರು ಇಡೀ ರಾಷ್ಟ್ರದ ಏಳಿಗೆಗಾಗಿ ಶ್ರಮಿಸಿದ ಧೀಮಂತ ವ್ಯಕ್ತಿ – ಡಾ. ಡಿ. ತಿಮ್ಮಯ್ಯ
ಮೈಸೂರು, ಜುಲೈ.06(ಕರ್ನಾಟಕ ವಾರ್ತೆ):- ಡಾ. ಬಾಬು ಜಗಜೀವನ ರಾಮ್ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ ಇಡೀ ರಾಷ್ಟ್ರದ ಏಳಿಗೆಗಾಗಿ ಶ್ರಮಿಸಿದ ನಾತಕ. ಅವರ ಆದರ್ಶಗಳು, ದೇಶಭಕ್ತಿ ಮತ್ತು ಧೀಮಂತ ವ್ಯಕ್ತಿತ್ವ ಇಂದಿನ ಯುವ ಪೀಳಿಗೆಗೆ ಸದಾ ಪ್ರೇರಣಾದಾಯಕವಾಗಿದೆ ಎಂದು ವಿಧಾನಸಭಾ ಪರಿಷತ್ತಿನ ಶಾಸಕರಾದ ಡಾ. ಡಿ. ತಿಮ್ಮಯ್ಯ ಅವರು ಹೇಳಿದರು.
ಇಂದು ಜಿಲ್ಲಾಡಳಿತದ ವತಿಯಿಂದ ನಗರದ ರೈಲ್ವೆ ನಿಲ್ದಾಣದಲ್ಲಿರುವ ಡಾ. ಬಾಬು ಜಗಜೀವನರಾವ್ ಅವರ ಪ್ರತಿಮೆಗೆ ಮಾಲಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಡಾ. ಬಾಬು ಜಗಜೀವನ ರಾಮ್ ಅವರು ಭಾರತದ ರಾಜಕೀಯ ಇತಿಹಾಸದ ಧ್ರುವತಾರೆ, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಾಮಾಜಿಕ ಸಮಾನತೆಯ ಹರಿಕಾರ. ಮಹಾತ್ಮಾ ಗಾಂಧೀಜಿಯವರ ವಿಚಾರಧಾರೆಗಳಿಂದ ಪ್ರೇರಿತರಾದ ಬಾಬೂಜಿಯವರು 1930 ರ ದಶಕದಲ್ಲೇ ರಾಷ್ಟ್ರೀಯ ಚಳವಳಿಗಳಲ್ಲಿ ಭಾಗವಹಿಸಿದರು. ಗಾಂಧೀಜಿಯವರ ನೇತೃತ್ವದ ವೈಯಕ್ತಿಕ ಸತ್ಯಾಗ್ರಹಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು ಎಂದು ಹೇಳಿದರು.
ಡಾ. ಬಾಬು ಜಗಜೀವನ ರಾಮ್ ಅವರ ಕೊಡುಗೆಗಳು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವಂತದ್ದಾಗಿದೆ. ವಿಶ್ವ ದಾಖಲೆಯೆಂಬಂತೆ ಅವರು 1936 ರಿಂದ 1986 ರವರೆಗೆ ಸತತ 50 ವರ್ಷಗಳ ಕಾಲ ಸಂಸತ್ತಿನಲ್ಲಿ ಜನಪ್ರಿಯ ನಾಯಕರಾಗಿ ಸೇವೆ ಸಲ್ಲಿಸಿದರು. ಅವರು ದೇಶದ ಆಹಾರ ಮತ್ತು ಕೃಷಿ ಸಚಿವರಾಗಿದ್ದ ಅವಧಿಯಲ್ಲಿ ಭಾರತವು ತೀವ್ರ ಆಹಾರದ ಕೊರತೆಯನ್ನು ಎದುರಿಸುತ್ತಿತ್ತು. ಅವರ ದೂರದೃಷ್ಟಿ ಮತ್ತು ಕಠಿಣ ನಿರ್ಧಾರಗಳಿಂದಾಗಿ ದೇಶದಲ್ಲಿ “ಹಸಿರು ಕ್ರಾಂತಿ” ಯಶಸ್ವಿಯಾಗಿ, ಭಾರತವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಿತು ಎಂದು ತಿಳಿಸಿದರು.
1971ರ ಭಾರತ ಮತ್ತು ಪಾಕಿಸ್ತಾನ ಯುದ್ಧದ ಸಮಯದಲ್ಲಿ ಬಾಬುಜಿ ಅವರು ಭಾರತದ ರಕ್ಷಣಾ ಸಚಿವರಾಗಿದ್ದರು. ಅವರ ಸಮರ್ಥ ನಾಯಕತ್ವದಲ್ಲಿ ಭಾರತೀಯ ಸೇನೆಯು ಐತಿಹಾಸಿಕ ಜಯಗಳಿಸಿತು ಮತ್ತು ಬಾಂಗ್ಲಾದೇಶದ ಉದಯಕ್ಕೆ ಕಾರಣವಾಯಿತು ಎಂದರು
ಅವರು ಭಾರತದ ಉಪ ಪ್ರಧಾನಮಂತ್ರಿಯಾಗಿ ಮತ್ತು ಕಾರ್ಮಿಕ ಸಚಿವರಾಗಿ ಕೆಲಸ ಮಾಡುವಾಗ ಶೋಷಿತರ, ದೀನದಲಿತರ ಮತ್ತು ಕಾರ್ಮಿಕರ ಹಕ್ಕುಗಳಿಗಾಗಿ ಅನೇಕ ಪ್ರಮುಖ ಕಾಯ್ದೆಗಳನ್ನು ಜಾರಿಗೆ ತಂದರು ಹಾಗೂ ಅಂದು ಅವರು ಕೃಷಿ ಕ್ಷೇತ್ರದಲ್ಲಿ ರೂಪಿಸಿದ ಯೋಜನೆಗಳ ಮೇಲೆ ಇಂದು ನಮ್ಮ ಕೃಷಿ ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನರಸಿಂಹರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್, ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಎಸ್ ಶ್ರೀವತ್ಸ, ವಿಧಾನ ಪರಿಷತ್ ಶಾಸಕರಾದ ಸಿ.ಎನ್ ಮಂಜೇಗೌಡ, ಜಿಲ್ಲಾಧಿಕಾರಿಗಳಾದ ಜಿ.ಲಕ್ಷ್ಮೀಕಾಂತ ರೆಡ್ಡಿ, ಮುಖ್ಯ ಕಾರ್ಯನಿರ್ವಾಹಕಾಧಿ ಕಾರಿಗಳಾದ ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಂಗೇಗೌಡ ಅವರು ಉಪಸ್ಥಿತರಿದ್ದರು.
