ಶಿಕ್ಷಣಕ್ಕಿಂತ ಮಹತ್ವದ ಸಂಪತ್ತು ಬೇರೊಂದಿಲ್ಲ: ಜಿಲ್ಲಾ ಪಂಚಾಯತ್ ಸಿಇಒ ಎಸ್.ಯುಕೇಶ್ ಕುಮಾರ್

latha prabhukumar
2 Min Read

ಪಬ್ಲಿಕ್ ಅಲರ್ಟ್ ನ್ಯೂಸ್:-ಶಿಕ್ಷಣಕ್ಕಿಂತ ಮಹತ್ವದ ಸಂಪತ್ತು ಬೇರೊಂದಿಲ್ಲ: ಜಿಲ್ಲಾ ಪಂಚಾಯತ್ ಸಿಇಒ ಎಸ್.ಯುಕೇಶ್ ಕುಮಾರ್

ಮೈಸೂರು,ಜು.18: ನಮ್ಮ ಜೀವನದಲ್ಲಿ ಅನೇಕ ಸಂಪತ್ತನ್ನುಸೃಷ್ಟಿಸಿಕೊಳ್ಳಬಹುದು. ಆದರೆ ಶಿಕ್ಷಣ ಕ್ಕಿಂತ ಮಹತ್ವವಾದ ಸಂಪತ್ತು ಬೇರೊಂದಿಲ್ಲ ಎಂದು ಜಿಲ್ಲಾ ಪಂಚಾಯತ್ ಮುಖ‍್ಯಕಾರ್ಯನಿರ್ವಾಹ ಅಧಿಕಾರಿ ಎಸ್.ಯುಕೇಶ್ ಕುಮಾರ್ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ವತಿಯಿಂದ ಶನಿವಾರ ನಡೆದ ಕಾರ್ಯಾಗಾರ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಅಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಪೋಷಕರ ಪ್ರಮುಖ ಜವಬ್ದಾರಿ. ಅದರಂತೆ ನಮ್ಮ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಕೆಲಸದ ಒತ್ತಡದ ನಡೆವೆಯೂ ವೈಯಕ್ತಿಕ ಬದುಕಿಗೆ ಸಮಯ ಕೊಟ್ಟು ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ನಾನು ಬಾಲ್ಯದಿಂದಲೂ ಕಲಿಕೆಯಲ್ಲಿ ಮುಂದಿದ್ದೆ. ಪ್ರೌಢಶಾಲಾ ಹಾಗೂ ಕಾಲೇಜಿನ ದಿನಗಳಲ್ಲಿ ಉತ್ತಮ ಅಂಕ ಗಳಿಸಿದ್ದೇನೆ. ಐಎಎಸ್ ಉತ್ತೀರ್ಣನಾಗಿ ಆಡಳಿತ ತರಬೇತಿಯಲ್ಲೂ ಚಿನ್ನದ ಪದಕ ಪಡೆದಿದ್ದೇನೆ ಎಂದು ಹೇಳಿದರು.

ಸರ್ಕಾರಿ ಅಧಿಕಾರಿಯಾಗಿ ಸಾರ್ವಜನಿಕ ಕೆಲಸದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಅನೇಕ ಅಧಿಕಾರಿಗಳು ನಿವೃತ್ತರಾಗಿದ್ದಾರೆ. ಇನ್ನು ಮುಂದೆ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಿ. ನೆಮ್ಮದಿಯ ಬದುಕು ನಿಮ್ಮದಾಗಲಿ ಎಂದು ಹಾರೈಸಿದರು.

ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಮಾತನಾಡಿ, ಆರ್ಡಿಪಿಆರ್ ಇಲಾಖೆಯಲ್ಲಿ ಬಹಳಷ್ಟು ತಂತ್ರಾಂಶಗಳನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ಅದಕ್ಕೆ ತಕ್ಕಂತೆ ಅಧಿಕಾರಿಗಳು ಹೊಂದಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಕಾರ್ಯಗಾರ ಸಹಕಾರಿಯಾಗಲಿದೆ. ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುವ ತಮ್ಮ ಸೇವಾವಧಿಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಸಂಘದ ಜಿಲ್ಲಾಧ್ಯಕ್ಷರಾದ ಸಿ.ಪ್ರಕಾಶ್ ಅವರು ಪ್ರಸ್ತಾವಿಕವಾಗಿ ಮಾತನಾಡಿ, ನಮ್ಮ ಇಲಾಖೆಯ ಅಧಿಕಾರಿಗಳು ಆಧುನಿಕತೆಗೆ ತಕ್ಕಂತೆ ಕರ್ತವ್ಯ ನಿರ್ವಹಿಸಲು ಅನುಕೂಲವಾಗಲು ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಪ್ರತಿವರ್ಷದಂತೆ ಅಧಿಕಾರಿಗಳ ಮಕ್ಕಳ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ ನಡೆಸಿ ಅಭಿನಂದಿಸಲಾಗುತ್ತಿದೆ. ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿಗಳ ಸೇವಾವಧಿ ಗೌರವಿಸಲು ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ನಿವೃತ್ತ ಪಿಡಿಒ ಅವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಭೀಮಪ್ಪ ಕೆ. ಲಾಳಿ ಅವರು, ಮುಖ್ಯ ಯೋಜನಾಧಿಕಾರಿ ಕೆ.ಪ್ರಭುಸ್ವಾಮಿ ಅವರು, ಮುಖ್ಯ ಲೆಕ್ಕಾಧಿಕಾರಿ ಸಿದ್ದಗಂಗಮ್ಮ ಅವರು, ಸಂಘದ ರಾಜ್ಯಾಧ್ಯಕ್ಷ ದಿಲೀಪ್ ಕುಮಾರ್ ಅವರು,ಕಾರ್ಯಾಧ್ಯಕ್ಷ ಖೂಬಾ ಸಿಂಗ್‌ ಜಾಧವ್‌, ಮಹೇಶ್‌, ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಿ,ಕೃಷ್ಣ, ಜೆರಾಲ್ಡ್ ರಾಜೇಶ್, ಎಸ್.ರವಿಚಂದ್ರ, ಪ್ರೇಮ್ ಕುಮಾರ್, ಎ.ಎನ್.ರವಿ, ಹೊಂಗಯ್ಯ, ಸುನೀಲ್ ಕುಮಾರ್, ರಂಗಸ್ವಾಮಿ, ಕುಲದೀಪ್, ಸಹಾಯಕ ನಿರ್ದೇಶಕರಾದ ಕೆ.ಎಂ.ರಘುನಾಥ್, ಶಿವಕುಮಾರ್, ಸಂಘದ ಗೌರವಾಧ್ಯಕ್ಷ ಎಸ್.ಧರ್ಮೇಂದ್ರ, ಉಪಾಧ್ಯಕ್ಷ ಟಿ.ಎಸ್.ಚಿದಾನಂದ, ಸಂಘಟನಾ ಕಾರ್ಯದರ್ಶಿ ಮಹಮ್ಮದ್ ಇಸ್ಹಾಕ್, ಕೆ.ಜಿ. ಮಹದೇವನಾಯಕ, ಮಹಿಳಾ ಉಪಾಧ್ಯಕ್ಷೆ ಟಿ. ಸೌಮ್ಯಲತಾ, ಮಹಿಳಾ ಸಂಘಟನಾ ಕಾರ್ಯದರ್ಶಿ ಪುಷ್ಪಬಾಯಿ, ರಾಜ್ಯ ಪರಿಷತ್ ಸದಸ್ಯ ಡಿ.ಸಿ.ಶಿವಣ್ಣ, ಪ್ರಧಾನ ಕಾರ್ಯದರ್ಶಿ ಜೆ.ಬಸವರಾಜು, ಸಾಂಸ್ಕೃತಿಕ ಕಾರ್ಯದರ್ಶಿ ಜಿ.ಸಿ.ಆಶಾ, ಕ್ರೀಡಾ ಕಾರ್ಯದರ್ಶಿ ಆರ್.ಕೆ.ಚಿದಾನಂದಸ್ವಾಮಿ ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು, ತಾಲ್ಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಗ್ರಾ.ಪಂ ಪಿಡಿಒ ಅವರು ಉಪಸ್ಥಿತರಿದ್ದರು.

Share This Article
Leave a Comment