ಪಬ್ಲಿಕ್ ಅಲರ್ಟ್ ನ್ಯೂಸ್:-ಇಂಜಿನಿಯರಿಂಗ್ ಎಂಬುದು ಬರಿ ಪದವಿಯಲ್ಲ, ಅದೊಂದು ಚಿಂತನೆಯ ಹಾದಿ: ಟಿ.ಜಿ. ಸೀತಾರಾಮ್
ಮೈಸೂರು: ಇಂಜಿನಿಯರಿಂಗ್ ಶಿಕ್ಷಣವು ಕೇವಲ ಪದವಿ ಪಡೆಯುವುದಕ್ಕೆ ಸೀಮಿತವಾಗದೆ ವಿದ್ಯಾರ್ಥಿಗಳಿಗೆ ದೃಢವಾದ ಮೂಲಭೂತ ಜ್ಞಾನ, ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ, ಮಾನವೀಯ ಮೌಲ್ಯಗಳು ಮತ್ತು ನಾವೀನ್ಯತೆಯ ಮನೋಭಾವವನ್ನು ಬೆಳೆಸಬೇಕು ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (AICTE) ಮಾಜಿ ಅಧ್ಯಕ್ಷ ಟಿ.ಜಿ. ಸೀತಾರಾಮ್ ಹೇಳಿದರು.
ಇಲ್ಲಿನ ಶ್ರೀ ಹೆಚ್. ಕೆಂಪೇಗೌಡ ಕ್ರೀಡಾಸಂಕೀರ್ಣದಲ್ಲಿ ಭಾನುವಾರ ನಡೆದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ (VVCE) ಪ್ರಥಮ ವರ್ಷದ ಬಿ.ಇ. ವಿದ್ಯಾರ್ಥಿಗಳ 2026-27ನೇ ಸಾಲಿನ ಶೈಕ್ಷಣಿಕ ಸಾಲಿನ ಆರಂಭಿಕ (ಇಂಡಕ್ಷನ್) ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಗಿಳಿಪಾಠ ಬಿಟ್ಟು ಗಣಿತ, ಭೌತಶಾಸ್ತ್ರ ಹಾಗೂ ಮೂಲ ವಿಜ್ಞಾನ ವಿಷಯಗಳಲ್ಲಿ ಬಲವಾದ ಅಡಿಪಾಯ ಮತ್ತು ಸ್ಪಷ್ಟ ಕಲ್ಪನೆ ಬೆಳೆಸಿಕೊಳ್ಳಬೇಕು. “ಇಂಜಿನಿಯರಿಂಗ್ ಎಂದರೆ ಬರಿ ಪದವಿಯಲ್ಲ, ಅದು ಜಗತ್ತನ್ನು ನೋಡುವ ಒಂದು ವಿಶಿಷ್ಟ ದೃಷ್ಟಿಕೋನ” ಎಂದ ಅವರು, ಸಮಸ್ಯೆಗಳನ್ನು ಗುರುತಿಸಿ, ತಾರ್ಕಿಕವಾಗಿ ಆಲೋಚಿಸಿ ಪ್ರಾಯೋಗಿಕ ಪರಿಹಾರ ಕಂಡುಕೊಳ್ಳುವಂತೆ ಕರೆ ನೀಡಿದರು.
ಉದಯೋನ್ಮುಖ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಸಲಹೆ ನೀಡಿದ ಅವರು, ಕೃತಕ ಬುದ್ಧಿಮತ್ತೆ (AI) ಮತ್ತು ಡೇಟಾ ಸೈನ್ಸ್ ಮುಂತಾದ ಡಿಜಿಟಲ್ ಉಪಕರಣಗಳು ಮೂಲ ಇಂಜಿನಿಯರಿಂಗ್ ಜ್ಞಾನಕ್ಕೆ ಪೂರಕವಾಗಿರಬೇಕೇ ಹೊರತು, ಅವು ಮೂಲ ವಿಷಯಗಳ ಜಾಗವನ್ನು ಆಕ್ರಮಿಸಬಾರದು. ಎಐ ಎನ್ನುವುದು “ಮಾನವನ ಸಾಮರ್ಥ್ಯವನ್ನು ಹೆಚ್ಚಿಸುವ ಸಾಧನ” ಎಂದು ಬಣ್ಣಿಸಿದರು.
ಇದೇ ವೇಳೆ, ಪೋಷಕರು ಮಕ್ಕಳ ಶೈಕ್ಷಣಿಕ ಸಾಧನೆಗಾಗಿ ಅವರ ಮೇಲೆ ಅತಿಯಾದ ಒತ್ತಡ ಹೇರಬಾರದು ಎಂದು ಮನವಿ ಮಾಡಿದರು. ಪರೀಕ್ಷೆ, ಪ್ರಾಜೆಕ್ಟ್ ಅಥವಾ ಉದ್ಯೋಗದ ಅವಕಾಶಗಳಲ್ಲಿ ಎದುರಾಗುವ ಸೋಲುಗಳನ್ನು ಕಲಿಕೆಯ ಮೆಟ್ಟಿಲುಗಳಾಗಿ ನೋಡಬೇಕು. “ಯುವಜನರಲ್ಲಿ ಸೋಲಿನ ಭಯವನ್ನು ದೂರಮಾಡಬೇಕು” ಎಂದರು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಬೆಳವಣಿಗೆಯನ್ನು ಉಲ್ಲೇಖಿಸಿದ ಅವರು, ಸಂಶೋಧನೆ, ಸ್ಟಾರ್ಟ್ಅಪ್ಗಳು, ಡಿಜಿಟಲ್ ಮೂಲಸೌಕರ್ಯ, ಸೆಮಿಕಂಡಕ್ಟರ್ ಹಾಗೂ ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ದೇಶ ಸಾಧನೆ ಮಾಡಿದೆ. ವಿದ್ಯಾರ್ಥಿಗಳು ಕ್ವಾಂಟಮ್ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನದಂತಹ ಹೊಸ ಕ್ಷೇತ್ರಗಳನ್ನು ಅನ್ವೇಷಿಸಬೇಕು ಎಂದರು.
ಶಿಕ್ಷಣವು ಪದವಿಯೊಂದಿಗೆ ಮುಗಿಯುವುದಿಲ್ಲ. ವಿದ್ಯಾರ್ಥಿಗಳು ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ಹ್ಯಾಕಥಾನ್, ನಾವೀನ್ಯತಾ ಕ್ಲಬ್ಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಇದು ಪ್ರಾಯೋಗಿಕ ಜ್ಞಾನವನ್ನು ಹೆಚ್ಚಿಸುತ್ತದೆ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಯುವ ತಾಂತ್ರಿಕ ಶಕ್ತಿ ಮುಖ್ಯ. “ಭಾರತವು ಸ್ವಂತ ಉತ್ಪನ್ನಗಳನ್ನು ತಯಾರಿಸುವ ದೇಶವಾಗದ ಹೊರತು, ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಸಾಧ್ಯವಿಲ್ಲ” ಎಂದು ಪ್ರತಿಪಾದಿಸಿದರು.
ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ. ವಿಶ್ವನಾಥ್ ಮಾತನಾಡಿ, ಸಂಸ್ಥೆಯು ತಾಂತ್ರಿಕ ಕೌಶಲ, ಮೌಲ್ಯಗಳು ಮತ್ತು ನಾಯಕತ್ವ ಗುಣಗಳನ್ನು ಒಳಗೊಂಡ ಸಮಗ್ರ ಶಿಕ್ಷಣಕ್ಕೆ ನೀಡುತ್ತಿರುವ ಆದ್ಯತೆಯನ್ನು ವಿವರಿಸಿದರು. ಪ್ರಾಂಶುಪಾಲ ಡಾ. ಬಿ. ಸದಾಶಿವ ಗೌಡ ಕಾಲೇಜಿನ ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು. ಹಳೆಯ ವಿದ್ಯಾರ್ಥಿಗಳಾದ ಕಾರ್ತಿಕ್ ಆರ್., ಪ್ರೀತಿ ಆರ್. ಮತ್ತು ದರ್ಶಿತ್ ಜೈನ್ ತಮ್ಮ ಅನುಭವಗಳನ್ನು ಹಂಚಿಕೊಂಡು, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ನಾಯಕತ್ವ ಗುಣಗಳನ್ನು ಬೆಳೆಸುತ್ತವೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಖಜಾಂಚಿ ಶ್ರೀಶೈಲ ರಾಮಣ್ಣನವರ್ ಹಾಗೂ ಉಪಪ್ರಾಂಶುಪಾಲೆ ಶೋಭಾ ಶಂಕರ್ ಉಪಸ್ಥಿತರಿದ್ದರು.
