ಪಬ್ಲಿಕ್ ಅಲರ್ಟ್ ನ್ಯೂಸ್:-ಹೆಣ್ಣುಮಕ್ಕಳು ಶಿಕ್ಷಣ ಪಡೆದು ಸ್ವಾಲಂಬಿಗಳಾದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ: ನಾಗಲಕ್ಷ್ಮಿ ಚೌಧರಿ
ಮೈಸೂರು, ಅ. 05(ಕರ್ನಾಟಕ ವಾರ್ತೆ ): ಹೆಣ್ಣುಮಕ್ಕಳು ಶಿಕ್ಷಣ ಪಡೆದು ಸ್ವಾಲಂಬಿಗಳಾದಾಗ ಮಾತ್ರ ಸಮಾಜದ ನೈಜ ಅಭಿವೃದ್ಧಿ ಸಾಧ್ಯ, ಯಾವುದೇ ಕಾರಣಕ್ಕೂ ದುಶ್ಚಟಗಳಿಗೆ ಬಲಿಯಾಗದೆ, ಧೈರ್ಯದಿಂದ ಸಾಗಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಹೇಳಿದರು.
ಇಂದು ಕುವೆಂಪು ಬಯಲು ರಂಗ ಮಂದಿರದಲ್ಲಿ ಆಯೋಜಿಸಲಾಗಿದ್ದ 8ನೇ ದಿನದ ಯುವ ಸಂಭ್ರಮ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.
ಮಹಿಳೆಯರು ಶಿಕ್ಷಣವನ್ನು ಪಡೆದು ಸ್ವಾಭಿಮಾನಿ ಜೀವನ ನಡೆಸಬೇಕು. ಹೆಣ್ಣುಮಕ್ಕಳು ಸಮಾಜದಲ್ಲಿ ಕೊಡುವ ಕೈಯಾಗಿ ಬೆಳೆಯಬೇಕೇ ಹೊರತು, ಬೇಡುವ ಕೈಯಾಗಬಾರದು. ಡಾ. ಬಿ.ಆರ್. ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ, ಹೋರಾಟವನ್ನು ನೆನಪಿಟ್ಟುಕೊಳ್ಳಬೇಕು. ಮಹಿಳೆಯರು ಶಿಕ್ಷಣ ಪಡೆದು ಸಮಾಜವನ್ನು ಮುನ್ನಡೆಸಬೇಕು ಎಂದರು
ಯುವಸಮೂಹ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಬೇಕು. ದುಶ್ಚಟಗಳಿಗೆ ಬಲಿಯಾಗದೆ , ಶೈಕ್ಷಣಿಕ ಪ್ರಗತಿ ಹಾಗೂ ತಮ್ಮ ತಂದೆ-ತಾಯಂದಿರ ಕನಸುಗಳನ್ನು ಈಡೇರಿಸುವುದಕ್ಕೆ ಮೊದಲ ಆದ್ಯತೆ ನೀಡಬೇಕು. ಮಹಿಷಾಸುರ ಮರ್ಧಿನಿ ಚಾಮುಂಡೇಶ್ವರಿಯ ಮೊದಲ ಅವತಾರ ಶೈಲಪುತ್ರಿ. ಶೈಲಪುತ್ರಿ ಎಂದರೆ ಪರ್ವತರಾಜನ ಮಗಳು. ಪರ್ವತದಷ್ಟೇ ಅಚಲವಾದ ದೃಢ ಸಂಕಲ್ಪ ವಿದ್ಯಾರ್ಥಿಗಳಲ್ಲಿ ಇರಬೇಕು. ಯಾವುದೇ ಆಕರ್ಷಣೆ ಅಥವಾ ಅಡೆತಡೆಗಳು ಎದುರಾದರೂ ಓದಿನಿಂದ ಗಮನ ಬೇರೆಡೆಗೆ ಹರಿಯಬಾರದು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಪೊಲೀಸ್ ಠಾಣೆಗಳಲ್ಲಿ ದಾಖಲಾಗುತ್ತಿರುವ ಕಿಡ್ನ್ಯಾಪ್/ಓಡಿಹೋಗುವ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಕ್ಷಣಿಕ ಆಕರ್ಷಣೆ ಮತ್ತು ದೈಹಿಕವಾಗಿ ಉಂಟಾಗುವ ಹಾರ್ಮೋನ್ ಪ್ರಭಾವದಿಂದ ಪೋಷಕರ ಗೌರವ ಹಾಗೂ ಸ್ವಂತ ಭವಿಷ್ಯವನ್ನು ಹಾಳುಮಾಡಿಕೊಳ್ಳಬೇಡಿ. ಯುವಕರು ಮತ್ತು ಯುವತಿಯರು ಇಬ್ಬರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದರು.
ಯುವಜನತೆ ಕುಡಿಯುವುದು, ಸಿಗರೇಟ್ ಸೇವನೆ, ಗಾಂಜಾ ಹಾಗೂ ಡ್ರಗ್ಸ್ಗಳಂತಹ ದಾಸ್ಯದಿಂದ ದೂರವಿರಬೇಕು. ಗಂಡುಮಕ್ಕಳು ಪರ್ವತದಂತೆ ಅಚಲವಾಗಿ ದೃಢವಾಗಿರಬೇಕು. ಹೆಣ್ಣುಮಕ್ಕಳು ಯಾವುದೇ ಟೀಕೆ-ಟಿಪ್ಪಣಿಗಳಿಗೆ ತಲೆ ಕೆಡಿಸಿಕೊಳ್ಳದೆ ಧೈರ್ಯವಾಗಿ ಮುನ್ನಡೆಯಬೇಕು ಎಂದು ಹೇಳಿದರು.
ಮಹಿಳೆಯರ ಸುರಕ್ಷತೆಗಾಗಿ ಇರುವ ಸರ್ಕಾರದ ಪ್ರಮುಖ ಸಹಾಯವಾಣಿಗಳು 112 ಹಾಗೂ 181 ಮಹಿಳಾ ಸಹಾಯವಾಣಿ One Stop Centre – ಒಂದೇ ಸೂರಿನಡಿ ಪೋಲಿಸ್, ಉಚಿತ ವಕೀಲರು, ವೈದ್ಯಕೀಯ ಸೇವೆ ಹಾಗೂ ಕೌನ್ಸಿಲಿಂಗ್ ಸೌಲಭ್ಯ ಲಭ್ಯವಿರುತ್ತದೆ.ಜಾಲತಾಣಗಳಲ್ಲಿ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಖಾಸಗಿ ಫೋಟೋ/ವೀಡಿಯೋಗಳನ್ನು ಹಂಚಿಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದರೆ ತಕ್ಷಣವೇ ಈ
stopncii.org. ವೆಬ್ಸೈಟ್ನಲ್ಲಿ ದೂರು ನೀಡಿ ಅವುಗಳನ್ನು ತೆಗೆದುಹಾಕಬಹುದು ಎಂದು ಹೇಳಿದರು.
ಇಂದು ವಿವಿಧ ಕಾಲೇಜುಗಳಾದ ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜು, ಮಂಡ್ಯದ ಶ್ರೀ ಗೀತಾ ಕಾಂಪೋಸಿಟ್ ಎಕ್ಸಲೆನ್ಸ್ ಪಿಯು ಕಾಲೇಜು , ಸರ್ಕಾರಿ ಮಹಿಳಾ ಕಾಲೇಜು, ಮೈಸೂರಿನ ಜೆಎಸ್ಎಸ್ ಪಾಲಿಟೆಕ್ನಿಕ್ ಫಾರ್ ವುಮೆನ್, ಜಿಎಸ್ಎಸ್ಎಸ್ಎಸ್ ಇಂಜಿನಿಯರಿಂಗ್ ಕಾಲೇಜು , ವಿಜಯನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ,ಚಾಮರಾಜನಗರದ ಜೆಎಸ್ಎಸ್ ಪಿಯು ಮಹಿಳಾ ಕಾಲೇಜು ವರಕೋಡಿನ ಕಸ್ತೂರ ಬಾ ಗಾಂಧಿ ಬಾಲಕಿಯರ ವಸತಿ ನಿಲಯ ಹಾಗೂ ಅರಸೀಕೆರೆಯ ಶಕುಂತಲ ಪಿಯು ಕಾಲೇಜು ಜಾವಗಲ್ನ ತಂಡಗಳ ವಿದ್ಯಾರ್ಥಿಗಳು ಪೌರಾಣಿಕ ಕಥಾ ಭಾಗಗಳನ್ನು ವೇದಿಕೆಯಲ್ಲಿ ನೃತ್ಯಗಳ ಮೂಲಕ ಜೀವಂತಗೊಳಿಸಿದರು.
ಬೈರಾಪುರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು , ಬನ್ನೂರಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಕೆ.ಆರ್.ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ತಂಡಗಳು ಲಿಂಗ ಸಮಾನತೆಯೊಂದಿಗೆ ಮಹಿಳಾ ಸಬಲೀಕರಣ ಹಾಗೂ ಮಹಿಳಾ ಸ್ವಯಂ ರಕ್ಷಣಾ ಕಲೆ ಕುರಿತು ಅರ್ಥಪೂರ್ಣ ಜಾಗೃತಿ ನೃತ್ಯಗಳನ್ನು ಪ್ರಸ್ತುತಪಡಿಸಿದರು.
ಹುಣಸೂರರಿನ ಸರ್ಕಾರಿ ಮಹಿಳಾ ಕಾಲೇಜು ಮತ್ತು ಕೊಳ್ಳೇಗಾಲದ ಜೆಎಸ್ಎಸ್ ಮಹಿಳಾ ಕಾಲೇಜು ತಂಡಗಳು ಹಳೆ ಹಾಗೂ ಹೊಸ ಗೀತೆಗಳ ಸಂಯೋಜನೆಯೊಂದಿಗೆ ಕನ್ನಡದ ವೈಭವ ಸಾರಿದವು. ಮದ್ದೂರಿನ ಸರ್ಕಾರಿ ಪಿಯು ಬಾಲಕಿಯರ ಕಾಲೇಜು ಹಾಗೂ ಹಾಸನದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವಿದ್ಯಾರ್ಥಿನಿಯರು ನಾಡಿನ ಸಂಗೀತ, ಕಲೆ, ವಾಸ್ತುಶಿಲ್ಪ ಹಾಗೂ ಶಾಸ್ತ್ರೀಯ ಕಲೆಗಳ ಸೌಂದರ್ಯವನ್ನು ಪ್ರದರ್ಶಿಸಿದರು.
ಕೆ.ಆರ್.ಪೇಟೆಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯಲ್ಲಿ ಯುವಜನತೆಯ ಪಾತ್ರ ಕುರಿತು ಜಾಗೃತಿ ಮೂಡಿಸಿದರೆ, ಕೆ.ಆರ್.ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ವಿದ್ಯಾರ್ಥಿನಿಯರು ವಿದ್ಯಾರ್ಥಿಗಳ ಆತ್ಮಹತ್ಯೆ ತಡೆ ಹಾಗೂ ಮಾನಸಿಕ ಒತ್ತಡ ನಿರ್ವಹಣೆ ಕುರಿತು ಅತ್ಯಂತ ಸಂವೇದನಾಶೀಲ ನೃತ್ಯ ಪ್ರದರ್ಶಿಸಿ ಪ್ರೇಕ್ಷಕರ ಮನ ಮುಟ್ಟಿದರು.
ಪೌರಾಣಿಕ , ಜಾನಪದ ಕಲೆಗಳು, ಸಾಮಾಜಿಕ ಜಾಗೃತಿ ಹಾಗೂ ಸಾಹಿತ್ಯ ಪರಂಪರೆಯನ್ನು ಸಾರುವ ವೈವಿಧ್ಯಮಯ ಪ್ರದರ್ಶನಗಳು ಒಟ್ಟು 30 ಕಾಲೇಜುಗಳಿಂದ ಇಂದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯಾ, ಯುವ ಸಂಭ್ರಮ ಉಪಸಮಿತಿಯ ಅಧ್ಯಕ್ಷರಾದ ಡಾ. ರಾಕೇಶ್, ಸಹ ಕಾರ್ಯದರ್ಶಿಗಳಾದ ಪ್ರೊ. ಸ್ವಪ್ನಾ ಎಂ.ಎಸ್., ಪ್ರೊ. ಜ್ಯೋತಿ, ಪ್ರತಿಭಾ ಹಾಗೂ ಸಮಿತಿಯ ಸದಸ್ಯರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
